ಹೈಲೈಟ್ಸ್:
- ಹೌಸ್ ಸರ್ಜನ್‌ಗಳಿಂದಲೂ 24 ತಾಸು ಮುಷ್ಕರ
- ತೀವ್ರ ನಿಗಾ ಘಟಕ ಸೇರಿದಂತೆ ಮೆಡಿಕಲ್ ಕಾಲೇಜಿನ ಎಲ್ಲ ಚಟುವಟಿಕೆ ಸ್ಥಗಿತ
- ಪಿಜಿ ಡಾಕ್ಟರ್‌ಗಳಿಂದ ಸೆಕ್ರೆಟರಿಯೇಟ್ ಎದುರು ಧರಣಿ
ಮೆಡಿಕಲ್ ಕಾಲೇಜಿನಲ್ಲಿ ಕಳೆದ ಐದು ದಿನಗಳಿಂದ ಚಿಕಿತ್ಸೆ ವ್ಯವಸ್ಥೆ ಹಳಿ ತಪ್ಪಿದೆ. ಹೌಸ್ ಸರ್ಜನ್‌ಗಳು ಸೋಮವಾರ 8 ಗಂಟೆಗೆ 24 ತಾಸು ಮುಷ್ಕರ ಆರಂಭಿಸಿದ್ದಾರೆ. ಪಿಜಿ ಡಾಕ್ಟರ್‌ಗಳು ಸೆಕ್ರೆಟರಿಯೇಟ್ ಎದುರು ಧರಣಿ ನಡೆಸಿದ್ದಾರೆ. ರೋಗಿಗಳ ಶಸ್ತ್ರಚಿಕಿತ್ಸೆ ಸಹಿತ ಎಲ್ಲ ಚಿಕಿತ್ಸೆಗಳನ್ನು ಮುಂದೂಡಲಾಗಿದೆ. ಓಪಿ ಚಿಕಿತ್ಸೆ ಸ್ಥಗಿತಗೊಂಡಿದೆ. ಮುಷ್ಕರ ಹಿನ್ನೆಲೆಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿದೆ. ಶೇ. 4 ಸ್ಟೈಪಂಡ್ ಹೆಚ್ಚಳ ಆಗ್ರಹಿಸಿ ಓಪಿ ಹಾಗೂ ವಾರ್ಡ್‌ಗಳಲ್ಲಿ ಕರ್ತವ್ಯದಲ್ಲಿರುವ ಹೌಸ್ ಸರ್ಜನ್‌ಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ಆಲಪ್ಪುಯ ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯದಲ್ಲಿದ್ದ ಹೌಸ್ ಸರ್ಜನ್ ಮೇಲಿನ ಆಕ್ರಮಣ ಹಾಗೂ ಸಹ ಪ್ರಾಧ್ಯಾಪಕರ ಜತೆ ಅಸಭ್ಯ ವರ್ತನೆ, ವಾರದಲ್ಲಿ 60 ತಾಸಿಗಿಂತ ಹೆಚ್ಚು ವಿಶ್ರಾಂತಿ ಇಲ್ಲದೆ ಕೆಲಸ ಮಾಡಬೇಕಾದ ಅನಿವಾರ್ಯತೆ ವಿರೋಧಿಸಿ ಸರಕಾರಿ ಪಿಜಿ ಡಾಕ್ಟರ್ ಟೀಚರ್ಸ್ ಅಸೋಸಿಯೇಶನ್ ವ್ಯಾಪಕವಾಗಿ ಪ್ರತಿಭಟನೆ ನಡೆಸಿದೆ.
ಮೆಡಿಕಲ್ ಕಾಲೇಜಿನಲ್ಲಿ ಪಿಜಿ ಡಾಕ್ಟರ್‌ಗಳ ಮುಷ್ಕರ 14ನೇ ದಿನ ತಲಪಿರುವಂತೆ ಚಿಕಿತ್ಸೆ ವ್ಯವಸ್ಥೆಗಳ ಮೇಲೆ ತೀವ್ರ ಪರಿಣಾಮ ಬೀರಲಾರಂಭಿಸಿದೆ. ಇತರ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳನ್ನು ಮೆಡಿಕಲ್ ಕಾಲೇಜಿಗೆ ಶಿಫಾರಸು ಮಾಡದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮುಷ್ಕರ ಸಂಬಂಧ ಎರಡು ಬಾರಿ ಸಮಾಲೋಚನೆ ನಡೆಸಲಾಗಿದ್ದು, ಬೇಡಿಕೆಗಳನ್ನು ಅಂಗೀಕರಿಸಿರುವುದಾಗಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದರೂ ಇತರ ಬೇಡಿಕೆ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲಾಗಿಲ್ಲ. ಅಲ್ಲದೆ ಹಾಜರಿ ಹಾಗೂ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಸರಕಾರ ಬೆದರಿಕೆ ಒಡ್ಡಿರುವುದಾಗಿ ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪ್ರತಿಭಟನೆ ದಮನಿಸುವ ಯತ್ನ ಫಲಿಸದು: ಪಿಜಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ದಮನಿಸುವ ಯತ್ನದಿಂದ ಸರಕಾರ ಹಿಂಜರಿಯುವಂತೆ ಕೇರಳ ಸರಕಾರಿ ಮೆಡಿಕಲ್ ಟೀಚರ್ಸ್ ಅಸೋಸಿಯೇಷನ್ (ಕೆಜಿಎಂಸಿಟಿಎ) ಆಗ್ರಹಿಸಿದೆ.
ರೆಸಿಡೆನ್ಸಿ ವ್ಯವಸ್ಥೆ ಜಾರಿಯಲ್ಲಿರುವ ಮೆಡಿಕಲ್ ಕಾಲೇಜುಗಳಲ್ಲಿ ರೋಗಿಗಳ ಶುಶ್ರೂಷೆ ಪಿಜಿ ವಿದ್ಯಾರ್ಥಿಗಳ ತರಬೇತಿಯ ಭಾಗವಾಗಿದೆ. ಪಿಜಿ ವಿದ್ಯಾರ್ಥಿಗಳ ಅಭಾವದ ಹಿನ್ನೆಲೆಯಲ್ಲಿ ಚಿಕಿತ್ಸೆ ಸಂಬಂಧ ಹೆಚ್ಚುವರಿ ಕೆಲಸದ ಒತ್ತಡ ನಿಭಾಯಿಸಲು ಮೆಡಿಕಲ್ ಕಾಲೇಜು ಶಿಕ್ಷಕರಿಗೆ ಸಾಧ್ಯವಿಲ್ಲ ಎಂದು ಕೆಜಿಎಂಸಿಟಿಎ ಪದಾಕಾರಿಗಳು ತಿಳಿಸಿದ್ದಾರೆ.
ಸಮಾಲೋಚನಗೆ ಸರಕಾರ ಬುಲಾವ್: ಕೇರಳದಲ್ಲಿ ವೈದ್ಯರ ಮುಷ್ಕರ 14ನೇ ದಿನಕ್ಕೆ ಕಾಲಿರಿಸಿರುವಂತೆ ಮುಷ್ಕರ ನಿರತ ಹೌಸ್ ಸರ್ಜನ್‌ಗಳನ್ನು ಸರಕಾರ ಚರ್ಚೆಗೆ ಆಹ್ವಾನಿಸಿದೆ. ರೋಗಿಗಳ ಶಸ್ತ್ರ ಚಿಕಿತ್ಸೆ ಮುಂದೂಡಲ್ಪಟ್ಟಿದ್ದು, ಓಪಿ ಚಿಕಿತ್ಸೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಆರೋಗ್ಯ ಸಚಿವರ ಕಚೇರಿಗೆ ಬರುವಂತೆ ಸೂಚಿಸಲಾಗಿದೆ.