ಹೈಲೈಟ್ಸ್:
- ಜ.18 ರಂದು ವೈಭವದ ಪರ್ಯಾಯ ಮಹೋತ್ಸವ
- ಕೃಷ್ಣಾಪುರ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದ ಅಂದು ಏನು ಮಾಡುತ್ತಾರೆ?
- ಉಡುಪಿ ಮಠದಲ್ಲಿ ಅಂದು ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಹೇಗೆ ಇರುತ್ತವೆ?
ಅತ್ಯಂತ ಅದ್ಧೂರಿಯ ಮೆರವಣಿಗೆಯಲ್ಲಿ ಭಾವಿ ಪರ್ಯಾಯ ಶ್ರೀಗಳು ಅಲಂಕೃತ ಪಲ್ಲಕ್ಕಿಯಲ್ಲಿ ಆಗಮಿಸುತ್ತಾರೆ. ಪರ್ಯಾಯ ಶ್ರೀಗಳನ್ನು ಹೊರತುಪಡಿಸಿ ಉಳಿದೆಲ್ಲ ಯತಿಗಳೂ ಅಲಂಕೃತ ಪಲ್ಲಕ್ಕಿಯಲ್ಲಿ ಆಗಮಿಸುತ್ತಾರೆ. ಮೆರವಣಿಯಲ್ಲಿ ಚಿನ್ನದ ಪಲ್ಲಕ್ಕಿಯಲ್ಲಿ ಭಾವಿ ಪರ್ಯಾಯ ಶ್ರೀಗಳ ಪಟ್ಟದ ದೇವರನ್ನು ತರುತ್ತಾರೆ. ರಥಬೀದಿಗೆ ಆಗಮಿಸಿದ ಕೂಡಲೇ ಪಲ್ಲಕ್ಕಿಯಿಂದ ಕೆಳಗಿಳಿದು ನಡೆದುಕೊಂಡು ಬರುತ್ತಾರೆ.
ಶ್ರೀಚಂದ್ರಮೌಳೀಶ್ವರ- ಶ್ರೀಅನಂತೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಶ್ರೀಕೃಷ್ಣಮಠವನ್ನು ಪ್ರವೇಶಿಸುತ್ತಾರೆ. ಪರ್ಯಾಯ ಶ್ರೀಪಾದರು ಪರ್ಯಾಯ ಸ್ವೀಕರಿಸುವ ಯತಿಗಳನ್ನು ಆದರದಿಂದ ಸ್ವಾಗತಿಸುತ್ತಾರೆ. ಶ್ರೀಕೃಷ್ಣ-ಮುಖ್ಯಪ್ರಾಣ – ಶ್ರೀಮಧ್ವಾಚಾರ್ಯರ- ಗರುಡದೇವರ ದರ್ಶನವನ್ನು ಮಾಡುತ್ತಾರೆ.
ಶ್ರೀಮಧ್ವಾಚಾರ್ಯರ ಸನ್ನಿಧಿಯಲ್ಲಿ ಪ್ರಧಾನ ಮುಹೂರ್ತವಾದ ಅಕ್ಷಯಪಾತ್ರೆ ಹಸ್ತಾಂತರ ಕಾರ್ಯಕ್ರಮವು ನಡೆಯುತ್ತದೆ. ಅಲ್ಲಿಂದ ಸಿಂಹಾಸನಕ್ಕೆ ಕರೆದುಕೊಂಡು ಬರುತ್ತಾರೆ. ಮೊದಲು ತಮ್ಮ ಪಟ್ಟದ ದೇವರನ್ನು ಪೀಠದಲ್ಲಿಟ್ಟು ನಮಸ್ಕರಿಸುತ್ತಾರೆ. ಶುಭ ಮುಹೂರ್ತದಲ್ಲಿ ಇಲ್ಲಿಯವರೆಗೆ ಪರ್ಯಾಯವನ್ನು ನಡೆಸಿದ ಶ್ರೀಗಳು ಆಗಮಿಸಿದ ಪಯಾರ್ಯ ಶ್ರೀಗಳನ್ನು ಕೈಹಿಡಿದು ಈ ಸರ್ವಜ್ಞ ಪೀಠದಲ್ಲಿ ಕೂಡಿಸುತ್ತಾರೆ.
ಇಲ್ಲಿಂದ ಇನ್ನು ಎರಡು ವರ್ಷಗಳ ಕಾಲ ಪರ್ಯಾಯ ಶ್ರೀಗಳು ಎಂದೆನಿಸಿಕೊಳ್ಳುತ್ತಾರೆ. ಸರ್ವಜ್ಞಪೀಠದ ಕಾರ್ಯಕ್ರಮದ ನಂತರ ಎಲ್ಲ ಯತಿಗಳೂ ಬಡಗುಮಾಳಿಗೆ ಬರುತ್ತಾರೆ. ಅಲ್ಲಿ ಅಲಂಕರಿಸಿರುವ ಅರಳು ಗದ್ದಿಗೆಯಲ್ಲಿ ಆಸೀನರಾಗುತ್ತಾರೆ. ಎಲ್ಲ ಶ್ರೀಪಾದರಿಗೂ ಪರ್ಯಾಯಮಠದಿಂದ ಗಂಧಾದ್ಯುಪಚಾರಗಳನ್ನು ಸಲ್ಲಿಸಲಾಗುತ್ತದೆ. ಶ್ರೀವಾದಿರಾಜರ ಕಾಲದಲ್ಲಿ ಇಲ್ಲಿಯೇ ಪರ್ಯಾಯ ದರ್ಭಾರ ನಡೆಯುತ್ತಿತ್ತು. ಈಗ ರಾಜಾಂಗಣದಲ್ಲಿ ನಡೆಯುತ್ತದೆ. ಆದ್ದರಿಂದ ಸಾಂಕೇತಿಕವಾದ ದರ್ಬಾರನ್ನು ಇಲ್ಲಿ ಮಾಡಿ ರಾಜಾಂಗಣಕ್ಕೆ ಬರುತ್ತಾರೆ.
ರಾಜಾಂಗಣದ ಭವ್ಯವಾದ ವೇದಿಕೆಯಲ್ಲಿ ಎಲ್ಲ ಶ್ರೀಗಳೂ ಉಪಸ್ಥಿತರಿರುತ್ತಾರೆ. ದೇಶದ ಹಾಗೂ ರಾಜ್ಯದ ಆಡಳಿತ ಮುಖಂಡರು ಸಭೆಯಲ್ಲಿ ಆಸೀನರಾಗಿರುತ್ತಾರೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಪರ್ಯಾಯ ಶ್ರೀಪಾದರು ತಮ್ಮ ಮುಂದಿನ ಎರಡು ವರ್ಷಗಳ ಯೋಜನೆಯನ್ನು ಮತ್ತು ಆಡಳಿತ ಮಂಡಳಿಯನ್ನು ಆಸ್ಥಾನ ವಿದ್ವಾಂಸರ ಹೆಸರನ್ನು ಪ್ರಕಟಿಸುತ್ತಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಈ ಸಂದರ್ಭದಲ್ಲಿ ಶ್ರೀಗಳಿಗೆ ದೇಶದ ವಿವಿಧ ಕ್ಷೇತ್ರಗಳ ಪ್ರಸಾದವನ್ನು ನೀಡಲಾಗುತ್ತದೆ. ಮಧ್ಯಾಹ್ನದ ಮಹಾಪೂಜೆಯ ನಂತರ ಮಹಾ ಅನ್ನಸಂತರ್ಪಣೆ ನಡೆಯುತ್ತದೆ. ಸಂಜೆ ಧಾರ್ಮಿಕ ಪ್ರವಚನ, ಸಾಧರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. ಮುಂದಿನ ಎರಡು ವರ್ಷಗಳ ಕಾಲ ನಿರಂತರವಾದ ಧಾರ್ಮಿಕ, ಜನಪರವಾದ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ.
Read more
[wpas_products keywords=”deal of the day sale today offer all”]