ವೈಕುಂಠ ಏಕಾದಶಿಯನ್ನು ಜನರು ಸರಳವಾಗಿ ಆಚರಿಸಿದರು. ಕೋವಿಡ್ ಭೀತಿಯಿಂದಾಗಿ ವೈಭವದ ಆಚರಣೆಗೆ ಆಡಳಿತ ತಡೆಯೊಡ್ಡಿದ ಪರಿಣಾಮ ಸೀಮಿತ ಸಂಖ್ಯೆಯಲ್ಲಿ ಭಕ್ತರು ದರ್ಶನ ಪಡೆದರು. ಸ್ವರ್ಗದ ಬಾಗಿಲು ತೆರೆಯುವ ದಿನ ಎಂದೇ ಖ್ಯಾತವಾದ ಏಕಾದಶಿಯಂದು ವೆಂಕಟೇಶ್ವರ ದೇವಾಲಯಗಳಲ್ಲಿ ವೈಕುಂಠ ದ್ವಾರ ನಿರ್ಮಿಸಲಾಗಿತ್ತು. ಈ ದ್ವಾರದಿಂದ ಹಾಯ್ದು ಬಂದು ದೇವರ ದರ್ಶನ ಪಡೆದ ಭಕ್ತರು ಕೋವಿಡ್ ದೂರವಾಗಲಿ, ಸಂತಸ ಹಾಗೂ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಬಾಗಲಕೋಟೆಯ ವಿದ್ಯಾಗಿರಿಯ ಬಾಲಾಜಿ ಮಂದಿರದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಭಕ್ತರು ದರ್ಶನ ಪಡೆದರು. ವೆಂಕಟೇಶ್ವರನ ಫೋಟೊ ಇರಿಸಿ ನಿರ್ಮಿಸಲಾಗಿದ್ದ ದ್ವಾರದಲ್ಲಿ ಹಾಯ್ದು ನಂತರ ಲಕ್ಷ್ಮಿ, ವೆಂಕಟೇಶ್ವರರ ದರ್ಶನ ಪಡೆದರು. ಬೆಳಗ್ಗೆಯಿಂದ ಸಂಜೆಯವರೆಗೂ ಪೂಜೆ, ಪುನಸ್ಕಾರ ನೆರವೇರಿಸಲಾಯಿತು. ವಾರಾಂತ್ಯ ಕರ್ಫ್ಯೂ ನಡುವೆಯೂ ಬೆಂಗಳೂರಿನ ದೇವಾಲಯಗಳಲ್ಲಿ ಭಕ್ತರ ದಂಡು! ವೆಂಕಟೇಶ್ವರ ದೇವಸ್ಥಾನಗಳಲ್ಲಿ ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವಿಷ್ಣು ಸಹಸ್ರನಾಮ ಪಾರಾಯಣ, ಕಕ್ಕಡಾರತಿ ನೆರವೇರಿತು. ಸಂಜೆ ಭಜನೆ, ಸಂಕೀರ್ತನೆ ಆಯೋಜಿಸಲಾಗಿತ್ತು. ಬಾಗಲಕೋಟೆಯ ವೆಂಕಟಪೇಟೆಯ ವೆಂಕಟೇಶ್ವರ ದೇವಸ್ಥಾನ, ಶಿರೂರ ಅಗಸಿ ಬಳಿಯ ವೆಂಕಟೇಶ್ವರ ದೇವಸ್ಥಾನ, ನವನಗರದ ವೆಂಕಟೇಶ್ವರ ದೇವಾಲಯ, ಕೆರೂರನ ವೆಂಕಟೇಶ್ವರ ದೇವಸ್ಥಾನ, ಬಾದಾಮಿಯ ವೆಂಕಟೇಶ್ವರ ದೇವಸ್ಥಾನಗಳಲ್ಲಿ ನೂರಾರು ಭಕ್ತರು ಆಗಮಿಸಿದ್ದರು. ಜಮಖಂಡಿ ತಾಲೂಕಿನ ಕಲ್ಲಹಳ್ಳಿಯ ವೆಂಕಟರಮಣ ದೇವಸ್ಥಾನದಲ್ಲಿ ನೂರಾರು ಭಕ್ತರು ದರ್ಶನ ಪಡೆದರು.
ಕೋವಿಡ್ ನಿಯಮಗಳಿಂದ ದೇವಾಲಯಗಳಲ್ಲಿ ತೀರ್ಥ, ಪ್ರಸಾದ ವಿನಿಯೋಗಕ್ಕೆ ಅವಕಾಶವಿರಲಿಲ್ಲ. ಒಂದು ಬಾರಿಗೆ 50 ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಯಿತು. ದೇವಸ್ಥಾನಕ್ಕೆ ತೆರಳುವ ಮೊದಲು ಸ್ಯಾನಿಟೈಸರ್ ವಿತರಿಸಲಾಯಿತು. ಏಕಾದಶಿ ನಿಮಿತ್ತ ಜನರು ಇಡೀ ದಿನ ಉಪವಾಸ ಮಾಡಿ ಭಗವಂತನ ನಾಮ ಸ್ಮರಣೆ ಕೈಗೊಂಡರು.