ಹೈಲೈಟ್ಸ್:
- ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ 2 ದಿನ ಮಳೆಯಾಗುವ ಸಾಧ್ಯತೆ
- ಸೋಮವಾರ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
- ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಕೆ
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ರಾಮನಗರ, ಕೋಲಾರ, ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ರಾಯಚೂರು, ಹಾವೇರಿ, ಬೆಳಗಾವಿ, ಗದಗ, ಯಾದಗಿರಿ, ವಿಜಯಪುರ, ಕೊಪ್ಪಳ, ಧಾರವಾಡದಲ್ಲಿ ಒಣ ಹವೆ ಮುಂದುವರಿಯಲಿದೆ.
ಸೋಮವಾರ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದ್ದು, ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರದಲ್ಲಿ 2 ಸೆಂ.ಮೀ ಮಳೆ ದಾಖಲಾಗಿದೆ.
ಬೆಂಗಳೂರು ನಗರದಲ್ಲಿ ಸೋಮವಾರ ಹಗುರ ಮಳೆ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಹುತೇಕ ಎಲ್ಲ ಕಡೆ ಸೋಮವಾರ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದೆ.
ನಗರದ ಹೊರಮಾವು, ಮನೋರಾಯನಪಾಳ್ಯ, ರಾಧಾಕೃಷ್ಣ ದೇವಸ್ಥಾನ, ಶೆಟ್ಟಿಹಳ್ಳಿ, ಬಾಗಲಕುಂಟೆ, ದೊಡ್ಡಬೊಮ್ಮಸಂದ್ರ, ಜಕ್ಕೂರು, ಯಲಹಂಕ, ಚೌಡೇಶ್ವರಿ ವಾರ್ಡ್, ಸಂಪಂಗಿರಾಮನಗರ, ಚಾಮರಾಜಪೇಟೆ, ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶ, ಮಲ್ಲೇಶ್ವರಂ, ವಿದ್ಯಾಪೀಠ, ಕೋರಮಂಗಲ, ಸಾರಕ್ಕಿ, ಕಾಟನ್‌ಪೇಟೆ, ಲಿಂಗರಾಜಪುರಂ, ಹೆಮ್ಮಿಗೆಪುರ, ಹಂಪಿನಗರ, ಜ್ಞಾನಭಾರತಿ, ಬನಶಂಕರಿ, ಕೆಂಗೇರಿ, ವಿಜಯನಗರ, ಬಸವೇಶ್ವರ ನಗರ ಸೇರಿದಂತೆ ಹಲವು ಕಡೆ ಮಳೆಯಾಗಿದೆ.
ಇನ್ನೂ ಎರಡು ದಿನ ಮಳೆ
ರಾಜಧಾನಿಯಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನೆಯಲ್ಲಿ ಹೇಳಿದೆ.