ಹೈಲೈಟ್ಸ್:
- ದೇಶದಲ್ಲೀಗ ದೊಡಕುತ್ತಿದೆ ಕಳೆದ ಹದಿನೈದು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ
- ರಾಜ್ಯ ಮುದ್ರಾಂಕ ಮತ್ತು ನೋಂದಣಿ ಇಲಾಖೆಯಿಂದ ಮಾರ್ಗಸೂಚಿ ದರಗಳಲ್ಲಿ ಕಡಿತ
- ಮುಂಬರುವ ಮೂರು ತಿಂಗಳು ಕಾಲ ಮಾರ್ಗಸೂಚಿ ದರದಲ್ಲಿ ಶೇ. 10ರಷ್ಟು ಇಳಿಕೆ ಮಾಡಿದೆ ರಾಜ್ಯ ಸರಕಾರ
ಸಂಕ್ರಾಂತಿ ಮೇಲೆ ನಿರೀಕ್ಷೆಈ ವರ್ಷದ ಮೊದಲ ಪ್ರಮುಖ ಹಬ್ಬವಾದ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಹೆಚ್ಚಿನ ಜನರು ಹೊಸ ಮನೆ, ನಿವೇಶನ ಖರೀದಿಸಲು ಮುಂದಾಗಬಹುದೆಂದು ರಿಯಾಲ್ಟಿ ತಜ್ಞರು ನಿರೀಕ್ಷಿಸಿದ್ದಾರೆ. ‘ಕಳೆದ ತಿಂಗಳ ಧನುರ್ಮಾಸದ ಬಳಿಕ ದೇಶದ ರಿಯಲ್ ಎಸ್ಟೇಟ್ ವಲಯದಲ್ಲಿ ಸಾಕಷ್ಟು ಚೇತರಿಕೆ ಉಂಟಾಗಿದೆ. 2022ರ ಸಂಕ್ರಾಂತಿ ಹಬ್ಬವೂ ಮನೆ ಖರೀದಿಗೆ ಶುಭದಾಯಕ. ಹಬ್ಬದ ಅವಧಿಯಲ್ಲಿ ಏನಾದರೂ ವಸ್ತು, ಆಸ್ತಿ ಖರೀದಿಸಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಸಂಕ್ರಾಂತಿಯಿಂದ ಮುಂದಿನ ಯುಗಾದಿಯವರೆಗೂ ನಿವೇಶನ, ಮನೆಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಿರುವ ನಿರೀಕ್ಷೆಯಿದೆ’ ಎಂದು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಶಿವರಾಮ್ ಜಿ. ಹೇಳಿದ್ದಾರೆ.
ತೆರಿಗೆ ರಿಟರ್ನ್ಸ್
ಮುಂದಿನ ಮೂರು ತಿಂಗಳು ಪ್ರಾಪರ್ಟಿ ಬೇಡಿಕೆ ಹೆಚ್ಚಲು ಕಾರಣವಾಗುವ ಆಸಕ್ತಿದಾಯಕ ಕಾರಣವೊಂದನ್ನು ಡಿಎಸ್ ಮ್ಯಾಕ್ಸ್‌ನ ಎಕ್ಸಿಕ್ಯುಟಿವ್ ನಿರ್ದೇಶಕರಾದ ದಯಾನಂದ್ ಎಸ್.ಪಿ. ನೀಡಿದ್ದಾರೆ. ‘ಸಾಮಾನ್ಯವಾಗಿ ಹೊಸ ವರ್ಷದ ಮೊದಲ ಮೂರು ತಿಂಗಳು ಹೆಚ್ಚಿನ ಜನರು ಮನೆ ಖರೀದಿಸುತ್ತಾರೆ. ಮಾರ್ಚ್ 31ರ ಮೊದಲು ಐಟಿ ರಿಟರ್ನ್ ಸಲ್ಲಿಸಬೇಕಿರುವುದರಿಂದ ದೊಡ್ಡ ಮಟ್ಟದಲ್ಲಿ ತೆರಿಗೆ ವಿನಾಯಿತಿ ಅಥವಾ ಇನ್ಯಾವುದೋ ವಿನಾಯಿತಿ ಪಡೆಯಲು ಜನರು ಪ್ರಾಪರ್ಟಿ ಖರೀದಿಸುತ್ತಾರೆ. ಮುಂದಿನ ದಿನಗಳಲ್ಲಿ ಈ ಅಂಶವೂ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ನೀಡಲಿದೆ’ ಎಂದು ಅವರು ಹೇಳಿದ್ದಾರೆ.
ಕಡಿಮೆ ಬಡ್ಡಿದರ
ದೇಶದಲ್ಲೀಗ ಕಳೆದ ಹದಿನೈದು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಬಡ್ಡಿದರಕ್ಕೆ ಗೃಹಸಾಲ ದೊರಕುತ್ತಿದೆ. ಕೆಲವು ತಿಂಗಳ ಬಳಿಕ ಈ ಬಡ್ಡಿದರ ಹೆಚ್ಚಾಗಬಹುದೆಂಬ ಆತಂಕವೂ ಜನರಿಗಿದೆ. ‘ಸದ್ಯದ ಓಮಿಕ್ರಾನ್, ಕೋವಿಡ್-19 ಪ್ರಕರಣಗಳನ್ನು ನೋಡಿದರೆ ಬಡ್ಡಿದರ ಏರಿಕೆಯಾಗುವ ಸಾಧ್ಯತೆಗಳಿಲ್ಲ. ಎಲ್ಲಾದರೂ ಬಡ್ಡಿದರ ಏರಿಕೆಯಾದರೆ ಏನು ಗತಿ ಎಂದುಕೊಂಡು ಸಾಕಷ್ಟು ಜನರು ಹೊಸ ಮನೆ ಖರೀದಿ ನಿರ್ಧಾರವನ್ನು ತ್ವರಿತಗೊಳಿಸುತ್ತಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಪ್ರಾಪರ್ಟಿ ಖರೀದಿ ಏರಿಕೆ ಕಾಣಲು ಈ ಅಂಶವೂ ಕಾರಣವಾಗಲಿದೆ’ ಎಂದು ದೇಶದ ಪ್ರಮುಖ ಖಾಸಗಿ ಬ್ಯಾಂಕೊಂದರ ಮ್ಯಾನೇಜರ್ ಅಜನೀಶ್ ಶರ್ಮಾ ಹೇಳಿದ್ದಾರೆ.
ಮಾರ್ಗಸೂಚಿ ದರ
ಕಳೆದೆರಡೂ ಕೋವಿಡ್ ಅಲೆಯಿಂದಾಗಿ 2,000 ಕೋಟಿ ನಷ್ಟದಲ್ಲಿರುವ ರಾಜ್ಯ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು, ಈ ನಷ್ಟವನ್ನು ಸರಿದೂಗಿಸಲು ತನ್ನ ಮಾರ್ಗಸೂಚಿ ದರಗಳನ್ನು ಮುಂಬರುವ ಮೂರು ತಿಂಗಳು ಕಾಲ ಶೇ. 10 ಇಳಿಸಿದೆ. ‘ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂದಿನ ಮೂರು ತಿಂಗಳು ಪ್ರಾಪರ್ಟಿ ಖರೀದಿ ಹೆಚ್ಚಾಗಲು ಇದು ಪ್ರಮುಖ ಕಾರಣವಾಗಲಿದೆ. ಇದರಿಂದ ಜನರಿಗೆ ಸಾಕಷ್ಟು ಉಳಿತಾಯವಾಗಲಿದೆ. ಈ ಮೊತ್ತವನ್ನು ಫರ್ನಿಚರ್ ಖರೀದಿ ಅಥವಾ ಇನ್ಯಾವುದೋ ಖರ್ಚಿಗೆ ಸರಿದೂಗಿಸಬಹುದು. ಸರಕಾರದ ಈ ನಿರ್ಧಾರ ಸ್ವಾಗತಾರ್ಹ’ ಎಂದು ಎಸ್.ಪಿ. ದಯಾನಂದ್ ಹೇಳಿದ್ದಾರೆ.
ಸಂಕ್ರಾಂತಿಯ ಸಮಯವು ಹೊಸ ಮನೆ ಖರೀದಿಗೆ ಅತ್ಯಂತ ಪ್ರಶಸ್ತ ಸಮಯ. ಈಗಾಗಲೇ ರಾಜ್ಯ ಸರಕಾರವು ಮಾರ್ಗಸೂಚಿ ದರವನ್ನು ಶೇ. 10ರಷ್ಟು ಇಳಿಸಿ ಉತ್ತಮ ಕೆಲಸ ಮಾಡಿದೆ. ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ದೊರಕುತ್ತಿರುವುದು, 45 ಲಕ್ಷ ರೂ.ಗಿಂತ ಕಡಿಮೆ ದರದ ಮನೆಗಳಿಗೆ ಮುದ್ರಾಂಕ ಶುಲ್ಕ ಕಡಿತ ಮಾಡಿರುವುದು ಇತ್ಯಾದಿ ಕಾರಣಗಳಿಂದ ವಸತಿ ಬೇಡಿಕೆ ಏರಿಕೆ ಕಾಣಲಿದೆ. ಮುಂದಿನ ಬಜೆಟ್ ಮೇಲೂ ರಿಯಲ್ ಎಸ್ಟೇಟ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ ಎಂದು ಡಿಎಸ್ ಮ್ಯಾಕ್ಸ್‌ನ ಎಕ್ಸಿಕ್ಯುಟಿವ್ ಡೈರೆಕ್ಟರ್ ಎಸ್.ಪಿ. ದಯಾನಂದ್ ಹೇಳಿದ್ದಾರೆ.
Read more
[wpas_products keywords=”deal of the day sale today offer all”]