ಹೈಲೈಟ್ಸ್:
- ಅಕ್ರಮ ಸಾಗಣೆ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಅದಿರು
- ಹರಾಜಿಗೆ ದಶಕಗಳ ಬಳಿಕ ಕೂಡಿಬಂತು ಕಾಲ..!
- ಬೈತಖೋಲ್ ಬಂದರು ಪ್ರದೇಶದಲ್ಲಿದ್ದ ಅದಿರು
ಬಳ್ಳಾರಿ ಜಿಲ್ಲೆಯ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಕಬ್ಬಿಣದ ಅದಿರನ್ನ ತೆಗೆದು ಸರ್ಕಾರದ ಬೊಕ್ಕಸಕ್ಕೆ ಹಾನಿಯುಂಟು ಮಾಡಿ ಚೀನಾಕ್ಕೆ ಕಾರವಾರ ಹಾಗೂ ಅಂಕೋಲಾದ ಬೇಲೆಕೇರಿ ಬಂದರಿನ ಮೂಲಕ ರವಾನೆ ಮಾಡಲಾಗುತ್ತಿದೆ ಎನ್ನುವ ಆರೋಪದ ಮೇಲೆ 2010ರ ಮಾರ್ಚ್‌ನಲ್ಲಿ ದಾಳಿ ನಡೆಸಿದ್ದ ಅರಣ್ಯ ಅಧಿಕಾರಿಗಳು, ಕಾರವಾರದ ಬೈತಖೋಲ್ ಬಂದರಿನಲ್ಲಿ 50 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಹಾಗೂ ಬೇಲೇಕೇರಿಯಲ್ಲಿ 8 ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಅದಿರನ್ನು ಜಪ್ತಿ ಮಾಡಿದ್ದರು. ಕಾರವಾರ ಬಂದರಿನಲ್ಲಿ ಸಂಗ್ರಹಿಸಿಟ್ಟಿದ್ದ 50 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಅದಿರಿನಲ್ಲಿ ಅರ್ಧದಷ್ಟು ಕಳವಾಗಿದ್ದಲ್ಲದೆ, ಮಳೆಯಲ್ಲಿ ಕೊಚ್ಚಿ ಹೋಗಿವೆ. ಹರಾಜಿಗಾಗಿ ಅಧಿಕಾರಿಗಳು ನಡೆಸಿದ ಮೌಲ್ಯ ಮಾಪನದಲ್ಲಿ ಕೇವಲ 30 ಸಾವಿರ ಮೆಟ್ರಿಕ್ ಟನ್ ಅದಿರು ಲೆಕ್ಕಕ್ಕೆ ಸಿಕ್ಕಿದ್ದು, ಇದನ್ನ ಈಗ ಹರಾಜು ಹಾಕಲಾಗುತ್ತಿದೆ.
ಈ ಪ್ರಕರಣವನ್ನ ಸಿಬಿಐ ತನಿಖೆ ನಡೆಸುತ್ತಿದ್ದು, ವಿಚಾರಣೆ ಹಂತದಲ್ಲಿದೆ. ಈ ನಡುವೆ ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದ ಅದಿರನ್ನು ಹರಾಜಿನ ಮೂಲಕ ಮಾರಾಟ ಮಾಡಲು ಕೇಳಿದ್ದ ಅವಕಾಶಕ್ಕೆ ಕಾರವಾರ ಜೆ.ಎಂ.ಎಫ್.ಸಿ ಕೋರ್ಟ್ ಅಸ್ತು ಎಂದಿತ್ತು. ಅದರಂತೆ ಈಗ ಅದಿರು ಹರಾಜಿಗೆ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಅದಿರು ಕೊಳ್ಳಲು ಆಸಕ್ತಿ ಹೊಂದಿರುವ ಕಂಪನಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಬೇರೆ ರಾಜ್ಯದ ಕಂಪನಿಗಳು ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದ್ದು, ಇನ್ನು ಕೆಲ ದಿನದಲ್ಲಿಯೇ ಹರಾಜು ನಡೆಯಲಿದೆ.
ಇನ್ನು ಈ ಸಂಬಂಧ ಅಧಿಕಾರಿಗಳ ಸಭೆಯನ್ನೂ ನಡೆಸಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಬಂದರು ಪ್ರದೇಶದಲ್ಲಿರುವ ಕಬ್ಬಿಣ ಅದಿರನ್ನು ಸಾಗಾಟ ಮಾಡುವಾಗ ಸಿಸಿ ಟಿವಿ ಕ್ಯಾಮೆರಾ ಹಾಗೂ ಅಲ್ಲಿ ತೆರಳುವ ವಾಹನಗಳ ಸಂಖ್ಯೆ, ಸಮಯ ಇತ್ಯಾದಿ ಕ್ರಮಗಳೊಂದಿಗೆ ಸಾಗಾಣಿಕೆಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಅರಣ್ಯ ಇಲಾಖೆ, ಬಂದರು ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆಯನ್ನು ಕೈಗೊಂಡು ಕಬ್ಬಿಣ ಅದಿರು ಸಾಗಾಟವನ್ನು ಸುಗಮಗೊಳಿಸಲು ಕಟ್ಟಪ್ಪಣೆ ನೀಡಿದ್ದಾರೆ.
ಒಟ್ಟಾರೆ ಸುಮಾರು 12 ವರ್ಷಗಳಿಂದಲೂ ಪ್ರಯೋಜನಕ್ಕೆ ಬರದೆ ಕಾರವಾರದ ಬಂದರಿನಲ್ಲಿ ಕೊಳೆಯುತ್ತಿದ್ದ ಅದಿರಿಗೆ ಅಂತೂ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ. ಅಂತೆಯೇ ಬೇಲೇಕೇರಿಯಲ್ಲಿರುವ ಅದಿರನ್ನೂ ಹರಾಜು ಹಾಕಲು ಅಧಿಕಾರಿಗಳು ಪ್ರಯತ್ನ ನಡೆಸಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
Read more
[wpas_products keywords=”deal of the day sale today offer all”]