ಹೈಲೈಟ್ಸ್:
- ನಾನಾ ಇಲಾಖೆಗಳಲ್ಲಿ ನಡೆಯುತ್ತಿದೆ ವ್ಯಾಪಕ ಭ್ರಷ್ಟಾಚಾರ..?
- ಸರಕಾರದ ಮೇಲೆ ಒತ್ತಡ ಹೇರಲು ಗುತ್ತಿಗೆದಾರರ ಪ್ರತಿಭಟನೆ..!
- 2022ರ ಜನವರಿಯಲ್ಲಿ 1 ಲಕ್ಷ ಗುತ್ತಿಗೆದಾರರಿಂದ ಬೃಹತ್ ಪ್ರತಿಭಟನೆ..!
ರಾಜ್ಯದಲ್ಲಿ ಸಿವಿಲ್ ಕಾಮಗಾರಿಗಳ ಮಂಜೂರಾತಿಗೆ 40% ಕಮಿಷನ್ ನೀಡಬೇಕಾಗುತ್ತದೆ. ಇದರಿಂದ ಗುಣಮಟ್ಟದ ಕೆಲಸ ಸಾಧ್ಯವೇ ಎಂದು ಪ್ರಶ್ನಿಸಿ ಪ್ರಧಾನಿವರೆಗೆ ಪತ್ರ ಬರೆದು ಕೈ ಸೋತಿರುವ ಗುತ್ತಿಗೆದಾರರು, ಇದೀಗ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ.
‘ಸರಕಾರದ ನಾನಾ ಇಲಾಖೆಗಳಲ್ಲಿ 10 ಕೋಟಿ ರೂ. ಗೂ ಅಧಿಕ ಅನುದಾನದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮತ್ತು ಬಿಲ್ ಪಾವತಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಿಎಂ ಆದೇಶಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಅದೇ ರೀತಿ ಭ್ರಷ್ಟಾಚಾರ ಕುರಿತೂ ಉನ್ನತ ಮಟ್ಟದ ತನಿಖೆ ನಡೆಸಬೇಕು. ಕಳೆದ ಹಲವು ವರ್ಷಗಳಿಂದ ಭ್ರಷ್ಟಾಚಾರವನ್ನು ಕೊನೆಗಾಣಿಸುವಂತೆ ಎಲ್ಲಾ ಸರಕಾರಗಳಿಗೂ ಮನವಿ ಮಾಡಿಕೊಳ್ಳುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಹೋರಾಟದ ಹಾದಿ ಹಿಡಿದಿದ್ದೇವೆ’ ಎಂದು ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
‘ಸರಕಾರಗಳು ಬದಲಾದಂತೆ ಭ್ರಷ್ಟಾಚಾರ ಕಡಿಮೆಯಾಗಬೇಕು. ಆದರೆ ಬೆಲೆಗಳು ಏರಿದಂತೆ ಭ್ರಷ್ಟಾಚಾರವೂ ಹೆಚ್ಚುತ್ತಿದೆ. ಇದರಿಂದ ಕಾಮಗಾರಿಗಳ ಗುಣಮಟ್ಟ ಕುಸಿಯುತ್ತಿದೆ ಮತ್ತು ಗುತ್ತಿಗೆದಾರರು ಸಂಕಷ್ಟಕ್ಕೀಡಾಗಲು ಕಾರಣವಾಗಿದೆ. ಪ್ರಮುಖ ಕಾಮಗಾರಿಗಳನ್ನು ನಿರ್ವಹಿಸುವ ಲೋಕೋಪಯೋಗಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಣ್ಣ ನೀರಾವರಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಕಾಮಗಾರಿಗಳಿಗೆ ಮಂಜೂರಾಗುವ ಒಟ್ಟು ಅನುದಾನದಲ್ಲಿ ಶೇ. 30 – 40ಕ್ಕಿಂತ ಹೆಚ್ಚು ಮೊತ್ತದ ಭ್ರಷ್ಟಾಚಾರ ಮತ್ತಿತರ ವೆಚ್ಚಗಳಿಗೆ ಸರಿದೂಗಿಸಬೇಕಾಗಿದೆ. ಟೆಂಡರ್ ಅನುಮೋದನೆಗೂ ಮುನ್ನ ಆರಂಭವಾಗುವ ಭ್ರಷ್ಟಾಚಾರ ಪ್ರಕ್ರಿಯೆ, ಬಿಲ್ ಪಾವತಿ ಆಗುವವರೆಗೆ ಮುಂದುವರಿಯುತ್ತಲೇ ಇರುತ್ತದೆ. ಆದ್ದರಿಂದ ಡಿಸೆಂಬರ್ ಎಂಟರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರಕಾರವನ್ನು ಎಚ್ಚರಿಸಲು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಒಕ್ಕೊರಲ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ’ ಎಂದರು.
ಈ ಹೋರಾಟಕ್ಕೆ ಪೂರ್ವಭಾವಿಯಾಗಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಒಂದು ವೇಳೆ ಸರಕಾರ ಮಾತುಕತೆಗೆ ಆಹ್ವಾನಿಸಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಕ್ರಿಯೆ ಆರಂಭಿಸಿದರೆ, ಇಡೀ ರಾಜ್ಯದ ಗುತ್ತಿಗೆದಾರರು ಮತ್ತು ಕಾರ್ಮಿಕರು ಸರಕಾರಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ ಎಂದರು ಕೆಂಪಣ್ಣ.
22 ಸಾವಿರ ಕೋಟಿ ಬಾಕಿ ಕೊಡಿ
ಗುತ್ತಿಗೆದಾರರಿಗೆ ನಾನಾ ಇಲಾಖೆಗಳಿಂದ ಸುಮಾರು 22 ಸಾವಿರ ಕೋಟಿ ರೂ. ಗಳಿಗೂ ಹೆಚ್ಚು ಹಣ ಬಾಕಿ ಬರಬೇಕಿದೆ. ಪ್ರಮುಖವಾಗಿ ಲೋಕೋಪಯೋಗಿ, ನೀರಾವರಿ ಮತ್ತು ಬಿಬಿಎಂಪಿಯಲ್ಲಿ ಅತಿ ಹೆಚ್ಚು ಕಾಮಗಾರಿಗಳು ನಡೆಯುತ್ತಿದ್ದು, ಸಹಸ್ರಾರು ಕೋಟಿ ಬಾಕಿ ಬರಬೇಕಿದೆ. ಇದನ್ನು ತಕ್ಷಣ ಕೊಡಿಸಿ ಎಂದು ಗುತ್ತಿಗೆದಾರರು ಒತ್ತಾಯಿಸಿದ್ದಾರೆ.
ಪ್ಯಾಕೇಜ್ ಪದ್ಧತಿ ರದ್ದುಗೊಳಿಸಿ
ಸ್ಥಳೀಯ ಗುತ್ತಿಗೆದಾರರನ್ನು ಹೊರಗಿಡುವ ಉದ್ದೇಶದಿಂದಲೇ ಪ್ಯಾಕೇಜ್ ಪದ್ಧತಿ ಎಂಬ ತಂತ್ರವನ್ನು ಸರಕಾರ ಕಂಡುಕೊಂಡಿದೆ. ಅನಗತ್ಯವಾಗಿ ಇಲ್ಲ ಸಲ್ಲದ ಅರ್ಹತೆ ಇರಬೇಕು ಎಂಬ ನಿಯಮಗಳನ್ನು ಹೇರಲಾಗುತ್ತಿದೆ. ಹತ್ತಿಪ್ಪತ್ತು ಕೋಟಿ ರೂ. ಗಳ ಟೆಂಡರ್ ಕರೆಯುವ ಬದಲು ಹಲವು ಕಾಮಗಾರಿಗಳನ್ನು ಒಗ್ಗೂಡಿಸಿ ನೂರಾರು ಕೋಟಿ ರೂ.ಗಳ ಪ್ಯಾಕೇಜ್ ಎಂದು ಘೋಷಿಸಿ ಟೆಂಡರ್ ಕರೆಯಲಾಗುತ್ತಿದೆ. ಇದರಿಂದ ಸ್ಥಳೀಯ ಮತ್ತು ರಾಜ್ಯ ಗುತ್ತಿಗೆದಾರರನ್ನು ಹೊರಗಿಟ್ಟು ನೆರೆ ರಾಜ್ಯದ ಗುತ್ತಿಗೆದಾರರನ್ನು ಕರೆತಂದು ಟೆಂಡರ್ ನೀಡಲಾಗುತ್ತಿದೆ. ಆದ್ದರಿಂದ ಸರಕಾರ ಪ್ಯಾಕೇಜ್ ಟೆಂಡರ್ ಕರೆಯುವ ಬದಲು ಪ್ರತಿ ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆದರೆ ರಾಜ್ಯದ ಗುತ್ತಿಗೆದಾರರಿಗೆ ಹೆಚ್ಚು ಸಹಾಯಕವಾಗುತ್ತದೆ ಎಂದಿದ್ದಾರೆ ಕೆಂಪಣ್ಣ.