
ವಾಷಿಂಗ್ಟನ್: ಭಾರತವು ರಷ್ಯಾದಿಂದ ಎಸ್–400 ಕ್ಷಿಪಣಿ ತಂತ್ರಜ್ಞಾನ ಪಡೆಯುವ ತೀರ್ಮಾನವನ್ನು ತಾನು ಬೆಂಬಲಿಸುವುದಿಲ್ಲ ಎಂದು ಅಮೆರಿಕ ಹೇಳಿದೆ. ಇದೇ ವೇಳೆ ಭಾರತದ ಮೇಲೆ ನಿರ್ಬಂಧ ಕ್ರಮಗಳನ್ನು ಹೇರುವ ಮೊದಲು ‘ಪ್ರಮುಖ ಭೌಗೋಳಿಕ ಕಾರ್ಯತಂತ್ರಗಳನ್ನು ಪರಿಗಣಿಸಲಾಗುವುದು’ ಎಂದು ತಿಳಿಸಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ನಾಮನಿರ್ದೇಶನ ಸದಸ್ಯ ಜೆಮ್ಸ್ ಒ’ಬ್ರಿಯಾನ್ ಅವರು, ನಿರ್ಬಂಧ ನೀತಿ ಕುರಿತಂತೆ ಅಮೆರಿಕದ ಜನಪ್ರತಿನಿಧಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.
ರಷ್ಯಾದಿಂದ ಐದು ಎಸ್–400 ಕ್ಷಿಪಣಿ ಪಡೆಯುವ ಸಂಬಂಧ 2018ರ ಅಕ್ಟೋಬರ್ ತಿಂಗಳಲ್ಲಿ ಭಾರತ ಒಪ್ಪಂದಕ್ಕೆ ಸಹಿ ಹಾಕಿತ್ತು. ಆಗ, ಅಧಿಕಾರದಲ್ಲಿದ್ದ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು, ಖರೀದಿ ಪ್ರಕ್ರಿಯೆ ಮುಂದುವರಿಸಿದರೆ ಭಾರತಕ್ಕೆ ನಿರ್ಬಂಧ ಹೇರುವ ಕುರಿತಂತೆ ಎಚ್ಚರಿಕೆಯನ್ನು ನೀಡಿತ್ತು.
ರಷ್ಯಾದಿಂದ ಪ್ರಮುಖ ರಕ್ಷಣಾ ಪರಿಕರ, ತಂತ್ರಜ್ಞಾನವನ್ನು ಖರೀದಿಸುವ ದೇಶಗಳ ವಿರುದ್ಧ ಕಟ್ಟುನಿಟ್ಟಿನ ನಿರ್ಬಂಧ ಕ್ರಮಗಳನ್ನು ಹೇರಲು ಅಮೆರಿಕ 2017ರಲ್ಲಿ ಕಾಸ್ಟಾ (ಸಿಎಎಟಿಎಸ್‌ಎ) ಕಾಯ್ದೆಯನ್ನು ರೂಪಿಸಿದೆ. ಈಗಲೂ, ಭಾರತದ ವಿರುದ್ಧ ಈ ಕಾಯ್ದೆಯ ಅನ್ವಯಯೇ ಕ್ರಮಜರುಗಿಸುವ ಇಂಗಿತವನ್ನು ಅಮೆರಿಕ ವ್ಯಕ್ತಪಡಿಸಿದೆ.
‘ಭಾರತದ ವಿರುದ್ಧ ಕ್ರಮಕೈಗೊಳ್ಳಲು ಟರ್ಕಿ ವಿರುದ್ಧದ ಅನುಭವ ಪಾಠ ಕಲಿಸಿದೆಯೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೆಮ್ಸ್ ಒ’ಬ್ರಿಯಾನ್ ನಿರ್ಬಂಧ ಕುರಿತ ಇಂಗಿತವನ್ನು ನೀಡಿದ್ದಾರೆ.
ಟರ್ಕಿಯು ಈಗಾಗಲೇ ರಷ್ಯಾದಿಂದ ಎಸ್–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕ ಕಾಸ್ಟಾ ಅನ್ವಯ ಅದರ ವಿರುದ್ಧ ನಿರ್ಬಂಧವನ್ನು ಹೇರಿದೆ.
Read more from source
[wpas_products keywords=”deals of the day offer today electronic”]