ಹೈಲೈಟ್ಸ್:
- ಮೇಲ್ಮನೆಯ 25 ಸ್ಥಾನಗಳ ಚುನಾವಣೆ ಮತ ಎಣಿಕೆ ಮಂಗಳವಾರ
- 25 ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ
- ಬೆಳಗ್ಗೆ 8ರಿಂದಲೇ ಆರಂಭವಾಗಲಿದೆ ಕೌಂಟಿಂಗ್
- ಬಿಜೆಪಿ, ಕಾಂಗ್ರೆಸ್‌ನಿಂದ ತಲಾ 20 ಕಡೆ ಸ್ಪರ್ಧೆ, ಜೆಡಿಎಸ್ 6 ಕಡೆ ಕಣದಲ್ಲಿ
ಮೇಲ್ಮನೆಯಲ್ಲಿ ಬಹುಮತ ಗಳಿಸುವ ನಿಟ್ಟಿನಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಈ ಚುನಾವಣೆಯನ್ನು ಬಿಜೆಪಿ ಆದ್ಯತೆಯಾಗಿ ತೆಗೆದುಕೊಂಡಿತ್ತು. ಹಾಗೆಯೇ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಕೂಡ ಪರಿಷತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿತ್ತು. ಮತ್ತೊಂದೆಡೆ ತನ್ನ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಪ್ರಭಾವ ಕಳೆದುಕೊಳ್ಳಬಾರದು ಎಂಬ ಲೆಕ್ಕಾಚಾರದೊಂದಿಗೆ ಜೆಡಿಎಸ್ ಈ ಚುನಾವಣೆಯಲ್ಲಿ ಕಣಕ್ಕಿಳಿದಿತ್ತು. ಈ ಹಿನ್ನೆಲೆಯಲ್ಲಿ ಮೂರೂ ಪ್ರಮುಖ ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯಾಗಿತ್ತು. ಹಾಗಾಗಿ ರಾಜಕೀಯ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದರು.
ಯಾರಿಗೆಷ್ಟು ಸ್ಥಾನ?
ಬಿಜೆಪಿಯವರು ಮೊದಲಿನಿಂದಲೂ ಹೇಳುತ್ತಿರುವ ಪ್ರಕಾರ, 15 ಸೀಟುಗಳನ್ನು ಗೆಲ್ಲಲು ರಣತಂತ್ರ ರೂಪಿಸಲಾಗಿದೆ. ಮತದಾನದ ಬಳಿಕವೂ ಇದೇ ಲೆಕ್ಕಾಚಾರದಲ್ಲಿ ಬಿಜೆಪಿ ಮುಖಂಡರು ಮಾತನಾಡುತ್ತಿದ್ದಾರೆ. ಆದರೆ, 10 – 12 ಸೀಟು ಬರಬಹುದು ಎಂಬ ಮಾತುಗಳು ಬಿಜೆಪಿಯ ಒಳವಲಯದಲ್ಲಿ ಕೇಳಿ ಬರುತ್ತಿವೆ. ಕಾಂಗ್ರೆಸ್ ಕೂಡ 10 – 12 ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದೆ. ಜೆಡಿಎಸ್‌ಗೆ 1 – 3 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ. ಈ ಲೆಕ್ಕಾಚಾರಗಳು ಏನೇ ಇದ್ದರೂ ಮಂಗಳವಾರ ಸಂಜೆಯ ಹೊತ್ತಿಗೆ ಈ ಚುನಾವಣೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ. ಕಣದಲ್ಲಿ 91 ಅಭ್ಯರ್ಥಿಗಳಿದ್ದು ಇವರ ಭವಿಷ್ಯ ನಿರ್ಧಾರವಾಗಲಿದೆ.
ಈ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ 20 ಕಡೆ ಹಾಗೂ ಜೆಡಿಎಸ್ 6 ಕಡೆ ಸ್ಪರ್ಧೆ ಮಾಡಿದೆ.
ಫಲಿತಾಂಶ ನಿರ್ಣಯ ಹೇಗೆ?
* ಒಬ್ಬ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡಬೇಕಾದ ಕ್ಷೇತ್ರಗಳಲ್ಲಿ ಕ್ರಮಬದ್ಧ ಮತಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಗಳಿಸುವ ಅಭ್ಯರ್ಥಿಯನ್ನು ವಿಜೇತ ಎಂದು ಪರಿಗಣಿಸಲಾಗುತ್ತದೆ.
* ಶೇ.50 ಮತ ಬಾರದೆ ಇದ್ದರೆ, ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಸಬೇಕಾಗುತ್ತದೆ. ಹೀಗೆ ಶೇ. 50 ದಾಟುವವರೆಗೂ ಕ್ರಮಾನುಸಾರ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಲಾಗುತ್ತದೆ.
* ಇಬ್ಬರು ಸದಸ್ಯರನ್ನು ಆಯ್ಕೆ ಮಾಡಬೇಕಾದ ಕ್ಷೇತ್ರದಲ್ಲಿ ಆಯ್ಕೆಯಾಗುವ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಶೇ. 33ಕ್ಕಿಂತ ಹೆಚ್ಚು ಮತ ಪಡೆಯಬೇಕಾಗುತ್ತದೆ. ಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆ ನಡೆಯಬೇಕಾದರೆ ಫಲಿತಾಂಶ ವಿಳಂಬವಾಗಬಹುದು.
ಮತ ಎಣಿಕೆಯ ಕ್ಷಣ ಕ್ಷಣದ ಮಾಹಿತಿ, ವಿವರಗಳು, ವಿಶ್ಲೇಷಣೆಗಳಿಗಾಗಿ ನಿಮ್ಮ ನೆಚ್ಚಿನ ವಿಜಯ ಕರ್ನಾಟಕ ವೆಬ್‌ಸೈಟ್‌ನ್ನು ನೋಡುತ್ತಿರಿ.