Karnataka news paper

ಸೆರಾಮಿಕ್‌ ಉದ್ಯಮದ ಡಾರ್ಲಿಂಗ್‌ ಆಗಲಿದೆ ಕಲಬುರಗಿ – ಸೆರಾಮಿಕ್‌ ಸೊಸೈಟಿ ರಾಷ್ಟ್ರೀಯ ಅಧ್ಯಕ್ಷ


ಹೈಲೈಟ್ಸ್‌:

  • ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 2 ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಆರಂಭ
  • ‘ಸೆರಾಮಿಕ್‌ ಮತ್ತು ಸಿಮೆಂಟ್‌ ತಂತ್ರಜ್ಞಾನದ ಮತ್ತು ತಯಾರಿಕೆಯಲ್ಲಿನ ನಾವೀನ್ಯತೆಗಳು’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ
  • ಕಲಬುರಗಿ ಸೆರಾಮಿಕ್ಸ್‌ ಡಾರ್ಲಿಂಗ್‌ ಆಗಲಿದೆ ಎಂದ ಇಂಡಿಯನ್‌ ಸೆರಾಮಿಕ್‌ ಸೊಸೈಟಿ ರಾಷ್ಟ್ರೀಯ ಅಧ್ಯಕ್ಷ ಡಾ.ಎಲ್‌.ಕೆ. ಶರ್ಮಾ

ಕಲಬುರಗಿ: ಕಲಬುರಗಿ ಸೇರಿ ಸುತ್ತಲಿನ ಪರಿಸರದಲ್ಲಿ ಸುಣ್ಣದ ಕಲ್ಲಿನ ನಿಕ್ಷೇಪ ಹೆಚ್ಚಿದೆ. ಇದರಿಂದ ಈಗಾಗಲೇ ಇಲ್ಲಿ ಸಿಮೆಂಟ್‌ ಉದ್ಯಮ ವಿಫುಲವಾಗಿ ಹರಡಿಕೊಂಡಿದೆ. ಸೆರಾಮಿಕ್‌ ಉದ್ಯಮಕ್ಕೂ ಉತ್ತಮ ನೆಲವಾಗಿದ್ದು, ಕಲಬುರಗಿ ಸೆರಾಮಿಕ್ಸ್‌ ಡಾರ್ಲಿಂಗ್‌ ಆಗಲಿದೆ ಎಂದು ಇಂಡಿಯನ್‌ ಸೆರಾಮಿಕ್‌ ಸೊಸೈಟಿ ರಾಷ್ಟ್ರೀಯ ಅಧ್ಯಕ್ಷ ಡಾ.ಎಲ್‌.ಕೆ. ಶರ್ಮಾ ಹೇಳಿದರು.

ನಗರದ ಎಚ್‌ಕೆಇ ಸಂಸ್ಥೆಯ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಸೆರಾಮಿಕ್‌ ಮತ್ತು ಸಿಮೆಂಟ್‌ ವಿಭಾಗದಲ್ಲಿ ಸೋಮವಾರದಿಂದ ಆಯೋಜಿಸಿರುವ 2 ದಿನಗಳ ‘ಸೆರಾಮಿಕ್‌ ಮತ್ತು ಸಿಮೆಂಟ್‌ ತಂತ್ರಜ್ಞಾನದ ಮತ್ತು ತಯಾರಿಕೆಯಲ್ಲಿನ ನಾವೀನ್ಯತೆಗಳು’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಕಲಬುರಗಿ ಸೆರಾಮಿಕ್‌ ಹಬ್‌ ಆಗಬೇಕಾದರೆ ಇಲ್ಲಿ ಮೂಲ ಸೌಕರ್ಯ ಮತ್ತು ಕೌಶಲ ಹೆಚ್ಚಬೇಕು. ಆ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ಕೈಗಾರಿಕೆ ವೃದ್ಧಿಗೆ, ಉದ್ಯಮಿಗಳಿಗೆ ರತ್ನಗಂಬಳಿ ಹಾಸಲಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಇಲ್ಲಿನ ಕಾಲೇಜುಗಳು, ಸಂಸ್ಥೆಗಳು ಸೆರಾಮಿಕ್‌ ಉದ್ಯಮ ವಿಸ್ತಾರಕ್ಕೆ ಬೇಕಾದ ಸೌಲಭ್ಯದ ತಿಳಿವು ಮತ್ತು ಅರಿವು ಹಾಗೂ ವ್ಯಾಪಾರದ ಅನುಕೂಲಗಳ ಸಂಶೋಧನೆ, ಸೆರಾಮಿಕ್‌ ಮತ್ತು ಸಿಮೆಂಟ್‌ ಉದ್ಯಮಗಳ ಬೆಳವಣಿಗೆಗಳ ಕುರಿತು ಅಧ್ಯಯನಗಳು ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹೈ.ಕ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಸಿ. ಬಿಲಗುಂದಿ ಮಾತನಾಡಿ, ಪಿಡಿಎ ಎಂಜಿನಿಯರಿಂಗ್‌ ಕಾಲೇಜು ಸ್ವಾಯತ್ತ ಸಂಸ್ಥೆ. ಸೆರಾಮಿಕ್‌ ಉದ್ಯಮ ಬೃಹದಾಕಾರವಾಗಿ ಬೆಳೆದು ನಮ್ಮಲ್ಲಿ ಜಾಗತಿಕ ವಿಕಾಸ ಆಗುವುದಾದರೆ ಪಠ್ಯಕ್ರಮ ಬದಲಾವಣೆಗೆ ಸಿದ್ದ. ಈ ನಿಟ್ಟಿನಲ್ಲಿ ಅಧ್ಯಾಪಕರು ಹೆಚ್ಚು ತಿಳಿವು ಪಡೆದು ಸಂಶೋಧನೆಗೆ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.

ಡಿಜಿಟಲ್‌ ತಂತ್ರಜ್ಞಾನ ಶಿಕ್ಷಣ ಅಗತ್ಯ

ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಅತ್ಯುತ್ತಮ ಅವಕಾಶಗಳನ್ನು ಬಾಚಿಕೊಳ್ಳಬೇಕಾದರೆ ಡಿಜಿಟಲ್‌ ತಂತ್ರಜ್ಞಾನ ಮತ್ತು ಕೌಶಲ ಕೇಂದ್ರೀಕೃತ ಶಿಕ್ಷಣ ಪಡೆದಾಗಲೇ ಸಾಧ್ಯವಾಗುತ್ತದೆ. ಸಾಂಪ್ರಾದಾಯಿಕ ಗುಣಮಟ್ಟದ ಶಿಕ್ಷಣವೂ ನಮ್ಮ ವಿದ್ಯಾರ್ಥಿಗಳನ್ನು ಸ್ಪರ್ಧಾಕಣದಿಂದ ಹೊರಗಿಡುತ್ತದೆ ಎಂದು ಬಳ್ಳಾರಿ ಜೆಎಸ್‌ಡಬ್ಲ್ಯೂ ಜಿಂದಾಲ್‌ ಕಾರ್ಖಾನೆಯ ಉಪಾಧ್ಯಕ್ಷ ಎಸ್‌.ಸಿ. ವಿಶ್ವನಾಥ ಕಿವಿಮಾತು ಹೇಳಿದರು.

ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ಹಂತದಲ್ಲೂ ನಮ್ಮ ಮಕ್ಕಳು ಅಥವಾ ವಿದ್ಯಾರ್ಥಿಗಳು ಪ್ರತಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಗಳು ಮುಂದಿನ ದಿನಗಳು ಸೃಷ್ಟಿ ಮಾಡಲಿವೆ ಎಂದರು.

ಸಾಧಕರಿಗೆ ಪುರಸ್ಕಾರ

ಸೆರಾಮಿಕ್‌ ಕ್ಷೇತ್ರದಲ್ಲಿ ಜೀವಮಾನ ಸಾಧನೆಗೈದ ಸಾಧಕರಾದ ಸಿಂಥೋಡ್‌ ಮಂಡಲ್‌, ಸಚಿದುಲಾಲ್‌ ಮಜುಂಮದಾರ್‌, ಆರ್‌.ಎಲ್‌. ಠಾಕೂರ್‌, ಸುನೀಲ ಕುಮಾರ ದೌಡಾ, ಡಾ.ಚಂದ್ರಶೇಖರ್‌ ಸೇರಿ ಅನೇಕರಿಗೆ ವಿವಿಧ ದತ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಅದೇ ರೀತಿ ಕಾಲೇಜಿನ ವಿದ್ಯಾರ್ಥಿಗಳಾದ ಸಂತೋಷ ರಾಠೋಡ ಸೇರಿ ಇಬ್ಬರಿಗೆ ನಗದು ಬಹುಮಾನ ನೀಡಿ ಸತ್ಕರಿಸಲಾಯಿತು.

ಸಮ್ಮೇಳನದಲ್ಲಿ ಅಮೆರಿಕಾ, ಜಪಾನ್‌, ಜರ್ಮನಿ, ಪೋರ್ಚುಗಲ್‌, ಸ್ಪೇನ್‌, ಫ್ರಾನ್ಸ್‌, ಯು.ಕೆ., ಯುಎಇ, (ದುಬೈ), ಕತಾರ್‌, ಆಸ್ಪ್ರೇಲಿಯಾ, ಮಲೇಶಿಯಾ, ಸಿಂಗಾಪುರ ದೇಶಗಳಿಂದ ಸೆರಾಮಿಕ್‌ ಮತ್ತು ಸಿಮೆಂಟ್‌ ಕ್ಷೇತ್ರದ ಸಂಶೋಧಕರು, ವಿಜ್ಞಾನಿಗಳು, ಪ್ರಾಧ್ಯಾಪಕರು, ಇಂಡಸ್ಟ್ರೀ ಪ್ರೊಫೆಶನಲ್‌ ವಿದ್ಯಾರ್ಥಿಗಳು ಸೇರಿ ಒಟ್ಟು 50ಕ್ಕೂ ಹೆಚ್ಚು ಗಣ್ಯರು ವರ್ಚುವಲ್‌ ಮೂಲಕ ತಮ್ಮ ಪ್ರಬಂಧಗಳನ್ನು ಪ್ರಸ್ತುತಪಡಿಸಿದರು.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೆರಾಮಿಕ್ಸ್‌ ಉಪಾಧ್ಯಕ್ಷ ಡಾ.ಎಚ್‌.ಎಸ್‌. ತ್ರಿಪಾಠಿ, ಅಖಿಲ ಭಾರತ ಪಾಟರಿ ಮೇಕರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ. ಸಬ್ಯಸಾಚಿ ರಾಯ್‌ ಮಾತನಾಡಿದರು.

ಹೈ.ಕ. ಶಿ ಸಂಸ್ಥೆಯ ಉಪಾಧ್ಯಕ್ಷ ಡಾ.ಶರಣಬಸಪ್ಪ ಹರವಾಳ, ಕಾರ್ಯದರ್ಶಿ ಡಾ. ಜಗನ್ನಾಥ ಬಿಜಾಪುರ್‌, ಆಡಳಿತ ಮಂಡಳಿ ಸದಸ್ಯ ಬಸವರಾಜ್‌ ಜೆ. ಖಂಡೇರಾವ್‌, ಉಪ ಪ್ರಚಾರ್ಯ ಡಾ. ಶಶಿಧರ ಕಲಶೆಟ್ಟಿ, ವಿಭಾಗದ ಮುಖ್ಯಸ್ಥ ಡಾ. ಬಾಬುರಾವ ಶೇರಿಕಾರ, ಡಾ. ವೀರೇಶ ಮಲ್ಲಾಪುರ, ಡಾ.ಎಸ್‌.ಬಿ. ಪಾಟೀಲ್‌, ಪ್ರೊ. ಪವನ ರಂಗದಾಳ, ಡಾ.ಜಾನ್‌ ಯು. ಇತರರಿದ್ದರು.



Read more