ಹೈಲೈಟ್ಸ್:
- ಆಧುನಿಕ ಯುಗದಲ್ಲಿ ಯಂತ್ರೋಪಕರಣದ ಬಳಕೆ ಇದ್ದರೂ ಪ್ರಕರಣಗಳು ದಾಖಲಾಗುತ್ತಿವೆ
- ವಸ್ತು ಸ್ಥಿತಿ ಪರಿಶೀಲನೆ ಕುರಿತು 6 ತಿಂಗಳಿಗೊಮ್ಮೆ ಸಭೆ ನಡೆಯಬೇಕಿದೆ
- ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಸಭೆ ನಡೆಸಿದ್ದೇನೆ: ಕೋಟ ಶ್ರೀನಿವಾಸ ಪೂಜಾರಿ
ಬಿ. ಕೆ. ಹರಿಪ್ರಸಾದ್ ಗಮನ ಸೆಳೆಯುವ ಸೂಚನೆ ಪ್ರಶ್ನೆಗೆ ಉತ್ತರಿಸಿ ‘ಆಧುನಿಕ ಯುಗದಲ್ಲಿ ಯಂತ್ರೋಪಕರಣದ ಬಳಕೆ ಇದ್ದರೂ ಪ್ರಕರಣಗಳು ದಾಖಲಾಗುತ್ತಿವೆ. ವಸ್ತು ಸ್ಥಿತಿ ಪರಿಶೀಲನೆ ಕುರಿತು 6 ತಿಂಗಳಿಗೊಮ್ಮೆ ಸಭೆ ನಡೆಯಬೇಕಿದೆ. ಈ ಮೊದಲು ಸಭೆಗಳೇ ನಡೆದಿರಲಿಲ್ಲ. ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಸಭೆ ನಡೆಸಿದ್ದೇನೆ. ಬಿಬಿಎಂಪಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಸರಕಾರ ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆ ಬಹು ಬೇಗ ಪರಿಹರಿಸಬಹುದು’ ಎಂದರು.
ಪ್ರತ್ಯೇಕ ವಿಧೇಯಕಕ್ಕೆ ಆಗ್ರಹ
ಮಲ ಹೊರುವ ಪದ್ಧತಿ ನಿಷೇಧ ಕಾಯಿದೆ ಸ್ವಾಗತಿಸಿದ ಬಿ. ಕೆ. ಹರಿಪ್ರಸಾದ್, ಮಲ ಹೊರುವುದಕ್ಕೆ ಉತ್ತೇಜನ ನೀಡುವ ಅಧಿಕಾರಿಗಳಿಗೆ ನೇರವಾಗಿ ಜೈಲು ವಾಸ ನೀಡುವ ಹೊಸ ವಿಧೇಯಕದಲ್ಲಿರಬೇಕು. ಯಾಂತ್ರಿಕವಾಗಿ ಕೆಲಸ ಮಾಡಬಹುದಾಗಿದ್ದರೂ ಒಂದೇ ಜಾತಿಯ ಜನರನ್ನು ಈ ಪದ್ಧತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ’ ಎಂದರು.
ರಾಮನಗರ ಪ್ರಕರಣ ಉಲ್ಲೇಖಿಸಿದ ಹರಿಪ್ರಸಾದ್, ‘ಡ್ರೈನೇಜ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಈವರೆಗೆ ರಾಜ್ಯದಲ್ಲಿ 400 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾರಾಯಿ ಕುಡಿಯದೇ ಚರಂಡಿಗಳಲ್ಲಿ ಇಳಿಯಲು ಸಾಧ್ಯವೇ ಇಲ್ಲ. ಒಂದೆಡೆ ಆರೋಗ್ಯ ಹದಗೆಡುತ್ತದೆ. ಮತ್ತೊಂದೆಡೆ ಅವರ ಕುಟುಂಬ ಅನಾಥವಾಗುತ್ತದೆ. ಇನ್ನೊಂದೆಡೆ ಸರಕಾರ ವಿನಾಕಾರಣ ಸ್ಪಷ್ಟನೆ ನೀಡುತ್ತಿದೆ’ ಎಂದು ಹರಿಹಾಯ್ದರು.
ಬಸವಣ್ಣ, ಈಶ್ವರನ ಜಗ್ಗಾಡಿದರು..
ಮಲ ಹೊರುವ ವಿಚಾರದ ಚರ್ಚೆ ವೇಳೆ ಬಸವಣ್ಣ ಮತ್ತು ಈಶ್ವರನ ಕುರಿತು ಸದಸ್ಯರು ಜಗ್ಗಾಡಿದ ಪ್ರಸಂಗ ನಡೆಯಿತು. ‘ಬಸವಣ್ಣ ನಮ್ಮವನೇ ಅಂತೀರಿ, ನೀವು ಬಸವಣ್ಣನ ನಾಡಿನವರು, ಸಮಾನತೆಗಾಗಿ ಹೊಸ ವಿಧೇಯಕ ಮಂಡನೆ ಮಾಡಿ, ಉದಾರಿಗಳಾಗಿ’ ಎಂದು ಬಿ. ಕೆ. ಹರಿಪ್ರಸಾದ್ ಎನ್ನತ್ತಿದ್ದಂತೆ ‘ಬಸವಣ್ಣ ಜಾತಿಗೆ ಸೀಮಿತವಲ್ಲದ ವ್ಯಕ್ತಿ’ ಎಂದು ಮಹಾಂತೇಶ್ ಕವಠಗಿಮಠ ಕಾಲೆಳೆದರು.
‘ಬಸವಣ್ಣ ಅವರನ್ನು ನೀವೇ ಬಿಡ್ತಿಲ್ಲ. ಹಿಡ್ಕೊಂಡಿದಿರಾ. ಬಿಟ್ ಕೊಡಿ ನಮಗೆ’ ಎಂದು ಹರಿಪ್ರಸಾದ್ ತಿರುಗೇಟು ನೀಡಿದರು. ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ ‘ಕೇಂದ್ರದಲ್ಲಿ ಈಶ್ವರನ್ನು ನೀವು ಬಿಡ್ತಿಲ್ಲ ಸ್ವಾಮಿ’ ಎಂದು ಹರಿಪ್ರಸಾದ್ ಕಾಲೆಳೆದರು. ‘ಈಶ್ವರ ಒಬ್ಬ ಶೂದ್ರ ದೇವರು’ ಎಂದು ಹರಿಪ್ರಸಾದ್ ಚರ್ಚೆ ಇತ್ಯರ್ಥ ಹಾಡಿದರು.
ಪ್ರತ್ಯೇಕ ಮೀಸಲಾತಿ
‘ಮಲ ಹೊರುವ ಕೆಲಸವನ್ನು ತೆಲುಗು, ತಮಿಳಿನಿಂದ ಬಂದವರು ನಿರ್ವಹಿಸುತ್ತಿದ್ದಾರೆ. ಅವರಿಗೆ ಸೌಕರ್ಯ ಕಲ್ಪಿಸುವುದರಲ್ಲಿ ನನ್ನ ತಕರಾರಲಿಲ್ಲ. ಆದರೆ, ಇಲ್ಲಿನ ದಲಿತರ ಸೌಲಭ್ಯ ವರ್ಗಾಯಿಸದೇ ಪ್ರತ್ಯೇಕ ಮೀಸಲಾತಿ ನೀಡಿ’ ಎಂದು ಆರ್. ಧರ್ಮಸೇನ ತಿಳಿಸಿದರು.