ಚಿಕ್ಕಮಗಳೂರು: ಮೆಕ್ಕೆಜೋಳ ಬಲಿಯುವವರೆಗೂ ರಕ್ಷಣಾ ಕವಚದಂತಿರುವ ಮೇಲ್ಮೈ ಹೊದಿಕೆಯನ್ನು ಗಿಳಿವಿಂಡು ಕುಕ್ಕಿರುವ ಪರಿಣಾಮ ಒಳಗೆ ನೀರು ಹೋಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಜಿಲ್ಲೆಯ ಮಲೆನಾಡಿನಲ್ಲಿ ಮಾನ್ಸೂನ್ ಬಳಿಕ ಕಳೆದ 4 ತಿಂಗಳಿಂದ ನಿರಂತರ ಮಳೆಯಾಗುತ್ತಿದ್ದು ಕೆಲವೊಮ್ಮೆ ಜಡಿಮಳೆಯೂ ಬೀಳುತ್ತಿದೆ. ಬಯಲು ಭಾಗದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದು, ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ಆದರೆ, ಪಕ್ಷಿಗಳು ಮಾಡಿರುವ ಯಡವಟ್ಟಿನಿಂದ ರೈತರು ಕೆಲವು ಬೆಳೆಗಳನ್ನು ಕಳೆದುಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ.
ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ ವ್ಯಾಪ್ತಿಯ ಕಳಸಾಪುರ, ಬೆಳವಾಡಿ, ಮಾಚೇನಹಳ್ಳಿ, ಸಿಂದಿಗೆರೆ, ಲಕ್ಯಾ, ದ್ಯಾವ ಗೊಂಡನಹಳ್ಳಿ, ಅಂಬಳೆ ಹೋಬಳಿಯ ಕರ್ತಿಕೆರೆ, ಮರ್ಲೆ, ಮುಗುಳವಳ್ಳಿ, ಕಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೆಕ್ಕೆ ಜೋಳವನ್ನು ಅತಿಹೆಚ್ಚು ಬೆಳೆಯುತ್ತಾರೆ.
ಮಳೆ ತುಸು ಹೆಚ್ಚು ಬಿದ್ದರೂ ಈ ಬೆಳೆಗೆ ಹಾನಿ ಅಷ್ಟಕಷ್ಟೆ. ಕಾರಣ ಜೋಳದ ತೆನೆಯ ಮೇಲ್ಮೈ ಕವಚ ಗಟ್ಟಿಯಾಗಿರುತ್ತದೆ. ಹೀಗಾಗಿ ಜೋಳದ ತೆನೆ ಕೂಡ ಬಹಳ ದೃಢವಾಗಿ, ಗಾತ್ರವಾಗಿ ಮೈದಾಳಿರುತ್ತದೆ. ಇನ್ನೇನು ಒಂದು ತಿಂಗಳಲ್ಲಿ ಜೋಳ ಬಲಿತು ಮುರಿಯಬೇಕಿತ್ತು. ಅಷ್ಟರಲ್ಲೇ ಮಳೆ ಎಡೆಬಿಡದೆ ಸುರಿಯಲಾರಂಭಿಸಿತು. ಈ ಸಂದರ್ಭ ರೈತರು ಮೈಮರೆತಿದ್ದೇ ಇಂದು ಜೋಳ ಹಾಳಾಗಲು ಕಾರಣವಾಗಿದೆ.
ಈಗ ಜೋಳ ಮುರಿದಾಗಿದೆಯಾದರೂ ಗಿಳಿ ದಾಳಿ ಪರಿಣಾಮ ತೆನೆ ಒಳಗೆ ನೀರು ಹೋಗಿ ಕಾಳು ಮುಗ್ಗಿ ಕಮಟು ವಾಸನೆ ಬರುತ್ತಿವೆ. ಮುಗ್ಗಿದ ಜೋಳ ಒಣಗಿಸಲು ಸರಿಯಾಗಿ ಬಿಸಿಲಿಲ್ಲ. ಮೋಡದ ವಾತಾರಣ ಮುಂದುವರಿದಿದ್ದು ರೈತರು ಮನೆ ಮುಂದೆ ಹರಡಿ ಕುಳಿತುಕೊಳ್ಳುವಂತಾಗಿದೆ. ಮನೆಮಂದಿಯಲ್ಲ ಜೋಳದ ರಾಶಿಯಲ್ಲಿ ಮುಗ್ಗಿದ ಜೋಳವನ್ನು ಬೇರ್ಪಡಿಸುತ್ತಿದ್ದು ಅರ್ಧಕರ್ಧ ಜೋಳ ಹಾಳಾಗಿರುವುದು ಕಂಡುಬಂದಿದೆ.