Karnataka news paper

ತರಕಾರಿ ಬೆಲೆಯಲ್ಲಿ ಭಾರೀ ಹೆಚ್ಚಳ, ಚಿಲ್ಲರೆ ಹಣದುಬ್ಬರ ದರ 4.91%ಗೆ ಏರಿಕೆ!


ಹೈಲೈಟ್ಸ್‌:

  • ಹಣ್ಣು, ತರಕಾರಿ ಸೇರಿ ಇತರ ಆಹಾರ ವಸ್ತುಗಳಾದ ಮೊಟ್ಟೆ, ಧಾನ್ಯ ಮತ್ತು ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ತೀವ್ರ ಹೆಚ್ಚಳ
  • ನವೆಂಬರ್‌ 2021ರಲ್ಲಿ ಚಿಲ್ಲರೆ ಹಣದುಬ್ಬರ ದರ ಮತ್ತಷ್ಟು ಏರಿಕೆ
  • ಅಕ್ಟೋಬರ್‌ನಲ್ಲಿ ಶೇ. 4.48 ಇದ್ದ ಚಿಲ್ಲರೆ ಹಣದುಬ್ಬರ ದರ ನವೆಂಬರ್‌ 2021ರಲ್ಲಿ ಶೇ. 4.91ಕ್ಕೆ ಏರಿಕೆ

ಹೊಸದಿಲ್ಲಿ: ನವೆಂಬರ್‌ 2021ರಲ್ಲಿ ಚಿಲ್ಲರೆ ಹಣದುಬ್ಬರ ದರ ಶೇ. 4.91ಕ್ಕೆ ಏರಿಕೆಯಾಗಿದೆ. ಅಕ್ಟೋಬರ್‌ನಲ್ಲಿ ಶೇ. 4.48 ಇದ್ದ ಚಿಲ್ಲರೆ ಹಣದುಬ್ಬರ ದರ, ನವೆಂಬರ್‌ನಲ್ಲಿ ಮತ್ತಷ್ಟು ಏರಿಕೆ ಕಂಡಿದೆ. ಈ ಸಂಬಂಧ ಸೋಮವಾರ ಕೇಂದ್ರದ ಅಂಕಿ-ಅಂಶ ಮತ್ತು ಯೋಜನೆ ಅನುಷ್ಠಾನ ಇಲಾಖೆ ದತ್ತಾಂಶ ಬಿಡುಗಡೆ ಮಾಡಿದೆ.

ಹಣ್ಣು ಮತ್ತು ತರಕಾರಿ ಸೇರಿದಂತೆ ಇತರ ಆಹಾರ ವಸ್ತುಗಳಾದ ಮೊಟ್ಟೆ, ಧಾನ್ಯ ಮತ್ತು ಹಾಲಿನ ಉತ್ಪನ್ನಗಳ ಬೆಲೆಯಲ್ಲಾದ ತೀವ್ರ ಏರಿಕೆ ಹಣದುಬ್ಬರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಅಕ್ಟೋಬರ್‌ನಲ್ಲಿ ಶೇ. 0.85ರಷ್ಟಿದ್ದ ಆಹಾರ ಹಣದುಬ್ಬರ ಪ್ರಮಾಣ, ನವೆಂಬರ್‌ನಲ್ಲಿ ಏಕಾಏಕಿ ಶೇ. 1.87ಕ್ಕೆ ಏರಿಕೆಯಾಗಿದೆ. ಆಹಾರ ಮತ್ತು ತೈಲವನ್ನು ಹೊರತಾದ ಕೋರ್‌ ಇನ್ಫ್ಲೇಷನ್‌ ಶೇ. 6.1 ಇದೆ. ಇದು ಅಕ್ಟೋಬರ್‌ನಲ್ಲಿ ಶೇ. 5.8 ಇತ್ತು. ತೈಲ ಮತ್ತು ವಿದ್ಯುತ್‌ ಹಣದುಬ್ಬರ ಅಕ್ಟೋಬರ್‌ನಲ್ಲಿದ್ದ ಶೇ. 14.35 ರಿಂದ ನವೆಂಬರ್‌ನಲ್ಲಿ ಶೇ. 13.35ಕ್ಕೆ ಇಳಿಕೆಯಾಗಿದೆ.

ಹಣದುಬ್ಬರ ದಿಢೀರ್‌ ಜಿಗಿತ, 5 ವರ್ಷದಲ್ಲೇ ಗರಿಷ್ಠ!
ಇದಕ್ಕೂ ಮೊದಲು ಗ್ರಾಹಕ ದರ ಸೂಚ್ಯಂಕ ಆಧಾರಿತ ಹಣದುಬ್ಬರ ದರ ಅಕ್ಟೋಬರ್‌ನಲ್ಲಿ ಶೇ. 4.48ಕ್ಕೆ ಏರಿಕೆಯಾಗಿತ್ತು. ಇದು ಸೆಪ್ಟೆಂಬರ್‌ನಲ್ಲಿ ಶೇ. 4.35ರಷ್ಟಿತ್ತು. ಈ ವೇಳೆ ಕೂಡ ಆಹಾರ ವಸ್ತುಗಳು ಮತ್ತು ತೈಲ ದರದಲ್ಲಾದ ಹೆಚ್ಚಳ ಹಣದುಬ್ಬರದ ಏರಿಕೆಗೆ ಪ್ರಮುಖ ಕಾರಣವಾಗಿತ್ತು.

2020ರ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಚಿಲ್ಲರೆ ಹಣದುಬ್ಬರ ಮತ್ತು ಆಹಾರ ಹಣದುಬ್ಬರ ಕಡಿಮೆ ಇದೆ. ಕಳೆದ ವರ್ಷ ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.93 ಹಾಗೂ ಆಹಾರ ಹಣದುಬ್ಬರ ಶೇ. 9.50ಯಷ್ಟಿತ್ತು.

ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ ದಾಖಲೆಯ ಶೇ.10.49ಕ್ಕೆ ಜಿಗಿತ; 11 ವರ್ಷಗಳಲ್ಲೇ ಗರಿಷ್ಠ
ಹಣ್ಣು ಮತ್ತು ತರಕಾರಿಗಳ ಬೆಲೆಗಳ ಜತೆಗೆ ಜವಳಿ ಮತ್ತು ಪಾದರಕ್ಷೆಗಳು, ಮನೆಬಳಕೆಯ ವಸ್ತುಗಳು ಮತ್ತು ಸೇವೆಗಳು, ಮನರಂಜನೆಯ ಜತೆಗೆ ಶಿಕ್ಷಣದ ವೆಚ್ಚಗಳಲ್ಲೂ ಗಮನಾರ್ಹವಾದ ಏರಿಕೆ ದಾಖಲಾಗಿದೆ.

ಬಹಳ ಪ್ರಮುಖವಾಗಿ ತರಕಾರಿಗಳ ಸೂಚ್ಯಂಕದಲ್ಲಿ ದೊಡ್ಡ ಪ್ರಮಾಣದ ಏರಿಕೆ ದಾಖಲಾಗಿದ್ದು, ಅಕ್ಟೋಬರ್‌ನಲ್ಲಿ 185.3 ಇದ್ದ ಸೂಚ್ಯಂಕ ನವೆಂಬರ್‌ನಲ್ಲಿ 199.1ಕ್ಕೆ ಏರಿಕೆಯಾಗಿರುವುದಾಗಿ ಅಂಕಿ-ಅಂಶ ಮತ್ತು ಯೋಜನೆ ಅನುಷ್ಠಾನ ಇಲಾಖೆಯ ದತ್ತಾಂಶಗಳು ಹೇಳಿವೆ.

ಹೀಗಿದ್ದೂ ನವೆಂಬರ್‌ನ ಚಿಲ್ಲರೆ ಹಣದುಬ್ಬರ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ನ ತಾಳಿಕೆ ವ್ಯಾಪ್ತಿಯಲ್ಲೇ ಇದೆ. ಶೇ. 2 – ಶೇ. 6ರ ನಡುವಿನ ಹಣದುಬ್ಬರವನ್ನು ಆರ್‌ಬಿಐ ತಾಳಿಕೆ ವಲಯ ಎನ್ನುತ್ತದೆ. ಸತತ ಐದು ತಿಂಗಳಿನಿಂದಲೂ ಹಣದುಬ್ಬರ ಇದೇ ವ್ಯಾಪ್ತಿಯಲ್ಲಿ ಇದೆ.

ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ದರ ಶೇ. 5.1 ಇರಬಹುದು ಎಂದು ಆರ್‌ಬಿಐ ಅಂದಾಜಿಸಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಸಿಪಿಐ ಆಧಾರಿತ ಹಣದುಬ್ಬರ ಶೇ. 5.7ರಷ್ಟು ಇರಬಹುದು ಎಂದು ಕೇಂದ್ರೀಯ ಬ್ಯಾಂಕ್‌ ಅಂದಾಜಿಸಿದೆ. ಅಂದರೆ ಮುಂದಿನ ದಿನಗಳಲ್ಲಿ ಹಣದುಬ್ಬರ ಮತ್ತಷ್ಟು ಹೆಚ್ಚಾಗಲಿದೆ ಎಂದು ಆರ್‌ಬಿಐ ಹೇಳಿದೆ.



Read more…