ಬೆಂಗಳೂರು: ‘ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರನ್ನು ಬಂಧಿಸುವುದು ಸರ್ಕಾರಕ್ಕೆ ದೊಡ್ಡ ವಿಷಯವಲ್ಲ. ಅವರಿಗೂ ಸಾರ್ವಜನಿಕರ ಆರೋಗ್ಯದ ಬಗ್ಗೆ ಹೊಣೆಗಾರಿಕೆ ಇರಬೇಕಲ್ಲವೇ’ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
‘ಕಾಂಗ್ರೆಸ್ ನಾಯಕರು ರಾಜಕೀಯ ಪ್ರತಿಷ್ಠೆ, ಮೇಲಾಟವನ್ನು ಬಿಟ್ಟು, ಪಾದಯಾತ್ರೆ ಮುಂದುವರಿಸುವ ಬಗ್ಗೆ ಮರು ಚಿಂತನೆ ನಡೆಸಬೇಕು’ ಎಂದು ಅವರು ಬುಧವಾರ ಹೇಳಿದರು.
‘ಕೋವಿಡ್ ನಿಯಮ ಪಾಲನೆ ಬಗ್ಗೆ ಸಲಹೆ ಕೊಡಬೇಕಿದ್ದ ನಾಯಕರೇ ಮಕ್ಕಳ ಜತೆ ಸಭೆ ನಡೆಸಿ ಕೊರೊನಾ ಇನ್ನಷ್ಟು ಹರಡಲು ಕಾರಣರಾಗುತ್ತಿದ್ದಾರೆ. ಕಾಂಗ್ರೆಸ್ ಈ ನೆಲದ ಕಾನೂನನ್ನು ಗೌರವಿಸುತ್ತಿಲ್ಲ. ಇವರಿಗೆ ಅಂಕಿ– ಅಂಶದ ಮೇಲೂ ನಂಬಿಕೆ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
‘ಕೋವಿಡ್ ನಿಯಮಾವಳಿಗಳು ಎಲ್ಲರಿಗೂ ಒಂದೇ. ಮೊಕದ್ದಮೆ ಹೂಡುವುದು ಮತ್ತು ಬಂಧನ ಮಾಡುವುದು ದೊಡ್ಡ ವಿಷಯವಲ್ಲ. ಈ ಹಿಂದೆ ಆಡಳಿತ ನಡೆಸಿರುವ ಪಕ್ಷ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.
‘ನೈತಿಕ ನಿಲುವೇ ಹೊರತು ದೌರ್ಬಲ್ಯವಲ್ಲ’
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷದ ಪ್ರತಿಭಟನೆ ಅಡ್ಡಿ ಮಾಡಬಾರದು ಎಂಬುದು ಬಿಜೆಪಿ ಸರ್ಕಾರದ ಪ್ರಜಾಸತ್ತಾತ್ಮಕ ಹಾಗೂ ನೈತಿಕ ನಿಲುವೇ ಹೊರತು ದೌರ್ಬಲ್ಯವಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
‘ಸರ್ಕಾರದ ನಿಯಮಗಳನ್ನು ಪಾಲಿಸಲಿಲ್ಲ. ಅಧಿಕಾರಿಗಳಿಗೆ ತಮ್ಮ ಕರ್ತವ್ಯ ಮಾಡಲು ಬಿಡಲಿಲ್ಲ. ಈಗ ಮಾನ್ಯ ಉಚ್ಚ ನ್ಯಾಯಾಲಯದ ಛೀಮಾರಿಗಾದರೂ ಕಾಂಗ್ರೆಸ್ ಪಕ್ಷ ತಲೆಬಾಗುವುದೇ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಪ್ರಾಣ ಬಲಿ ಪಡೆಯುವ ದುರುದ್ದೇಶ’
‘ಮೇಕೆದಾಟು ಪಾದಯಾತ್ರೆಯು ಕೋವಿಡ್ ಹರಡುವ ಮೂಲಕ ಜನರ ಪ್ರಾಣಬಲಿ ಪಡೆಯುವ ದುರುದ್ದೇಶದಿಂದ ಕೂಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಟೀಕಿಸಿದ್ದಾರೆ.
‘ಪಾದಯಾತ್ರೆ ಬಗ್ಗೆ ರಾಜ್ಯ ಹೈಕೋರ್ಟ್ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷದವರಿಗೆ ನ್ಯಾಯಾಂಗದ ಕುರಿತು ವಿಶ್ವಾಸ ಇದ್ದರೆ ಮತ್ತು ಜನರ ಜೀವದ ಬಗ್ಗೆ ಕಳಕಳಿ ಇದ್ದರೆ ತಕ್ಷಣವೇ ಪಾದಯಾತ್ರೆ ರದ್ದುಪಡಿಸಿ, ಕೋವಿಡ್ ಹೆಚ್ಚಳಕ್ಕೆ ಕಾರಣವಾದ ಬಗ್ಗೆ ಜನರ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದ್ದಾರೆ.
Read more from source
[wpas_products keywords=”deal of the day sale today kitchen”]