The New Indian Express
ಬೆಂಗಳೂರು: ರಾಮನಗರದ ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು, ಜಿಲ್ಲೆಯಲ್ಲಿ ಸೋಂಕು ಹರಡುತ್ತಿರುವುದನ್ನು ತಡೆಯಲು ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವಂತೆ ಆರೋಗ್ಯಾಧಿಕಾರಿಗಳಿಗೆ ಮಂಗಳವಾರ ಸೂಚನೆ ನೀಡಿದರು.
ಕೋವಿಡ್-19 ಮತ್ತು ಓಮಿಕ್ರಾನ್ ಪತ್ತೆಗಾಗಿ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕಿದ್ದು, ಸೋಂಕಿತರಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲು ಶೀಘ್ರಗತಿಯಲ್ಲಿ ವೈದ್ಯಕೀಯ ವರದಿ ಪಡೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇದೇ ವೇಳೆ ಕೋವಿಡ್ ಮತ್ತು ಓಮಿಕ್ರಾನ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮೇರೆಗೆ ತಕ್ಷಣವೇ ಒದಗಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ 14,473 ಹೊಸ ಕೋವಿಡ್ ಕೇಸ್; 5 ಸಾವು, ಪಾಸಿಟಿವಿಟಿ ದರ ಶೇ.10.30ಕ್ಕೆ ಏರಿಕೆ
ಸದ್ಯಕ್ಕೆ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕೊರೋನಾ ಮತ್ತು ಓಮಿಕ್ರಾನ್ ಸೋಂಕು ಪತ್ತೆ ಪರೀಕ್ಷೆಗೆ ಸಂಖ್ಯೆಯನ್ನು ಹೆಚ್ಚು ಮಾಡಿ, ತ್ವರಿತಗತಿಯಲ್ಲಿ ಫಲಿತಾಂಶ ದೊರಕಿಸಿಕೊಂಡು, ಕೂಡಲೇ ಸೂಕ್ತ ಚಿಕಿತ್ಸೆ ಆರಂಭಿಸಬೇಕು. ಸಕಲ ವ್ಯವಸ್ಥೆಯನ್ನೂ ಮಾಡಿಕೊಂಡು, ಸನ್ನದ್ಧ ಸ್ಥಿತಿಯಲ್ಲಿರಬೇರು, ಕೊರೋನಾ ಮತ್ತು ಓಮಿಕ್ರಾನ್ ಸೋಂಕುಗಳನ್ನು ತಡೆಯಲು ಸರಿಯಾದ ಮುನ್ನೆಚ್ಚರಿಕೆ ಮತ್ತು ಪರೀಕ್ಷೆಗಳೇ ಅಗತ್ಯವಾಗಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸಮರ್ಪಕ ಅರಿವು ಮೂಡಿಸಬೇಕು. ಮಿಕ್ಕಂತೆ ಇದೂವರೆಗೂ ಯಾರು ಲಸಿಕೆ ತೆಗೆದುಕೊಂಡಿಲ್ಲವೋ ಅಂಥವರನ್ನು ಸಂಪರ್ಕಿಸಿ, ಅವರಿಗೆಲ್ಲಾ ಲಸಿಕೆ ಹಾಕಬೇಕು. 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಮತ್ತು 18-18 ವರ್ಷಗಳ ಒಳಗೆ ಇರುವವರಿಗೆ ಲಸಿಕೆ ಕೊಡಲು ತಕ್ಕ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸದ್ಯಕ್ಕೆ 66 ಸೋಂಕಿತರು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅರ್ಹರಿಗೆ ಲಸಿಕೆ ಹಾಕಿರುವುದರಿಂದ ಆತಂಕ ಪಡಬೇಕಾದ ಅಗತ್ಯವಿಲ್ಲ. ಆದರೆ, ಸೋಂಕಿತರು ಹೆಚ್ಚಾಗುವ ಸಂಭವ ಇರುವುದರಿಂದ ಹಾಸಿಗೆಗಳ ಸಾಮರ್ಥ್ಯವನ್ನು ಅದಕ್ಕೆ ತಕ್ಕಂತೆ ಕೂಡಲೇ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ದೇಶದಲ್ಲಿ ಈಗಾಗಲೇ 150 ಕೋಟಿ ಡೋಸ್ ಲಸಿಕೆಗಳನ್ನು ಹಾಕಲಾಗಿದ್ದು, ರಾಜ್ಯದಲ್ಲಿ ಈ ಸಂಖ್ಯೆ 9 ಕೋಟಿಯನ್ನು ದಾಟಿದೆ. ಆದ್ದರಿಂದ ಸೋಂಕಿತರ ವಿರುದ್ಧ ಪ್ರತಿರೋಧ ಶಕ್ತಿ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಆದರೂ ಜನರು ಮುಂಜಾಗ್ರತಾ ಕ್ರಮಗಳನ್ನು ಮರೆಯುವಂತಿಲ್ಲ. ಪರಿಸ್ಥಿತಿ ನೋಡಿಕೊಂಡು ಸರ್ಕಾರವು ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.
ಬಳಿಕ ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ರಾಮನಗರ ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಏನು ಮಾಡಿದ್ದಾರೆ? ಎಷ್ಟು ಬಾರಿ ಭೇಟಿ ನೀಡಿದ್ದರು. ಮೇಕೆದಾಟು ಯೋಜನೆಗೆ ಏನೇನು ಮಾಡಿದ್ದರು ಎಂಬುದನ್ನು ಕಾಂಗ್ರೆಸಿಗರು ಬಹಿರಂಗಪಡಿಸಲಿ. ಕಾಂಗ್ರೆಸ್ ಪಾದಯಾತ್ರೆ ಸೆಲ್ ಪ್ರಮೋಷನ್ ಪ್ರೋಗ್ರಾಮ್ ಆಗಿದ್ದು, ಡಿ.ಕೆ.ಶಿವಕುಮಾರ್ ತಮ್ಮ ಪ್ರಮೋಷನ್‍ಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ವೈದ್ಯರ ಸೂಚನೆ ಇಲ್ಲದೆ ಮಾಲ್ನುಪಿರವಿರ್ ಆಂಟಿ ವೈರಲ್ ಔಷಧ ಸೇವನೆ ಅಪಾಯಕಾರಿ: ತಜ್ಞರ ಎಚ್ಚರಿಕೆ
ಸ್ವಾಬ್ ಪರೀಕ್ಷೆಗೆ ಬಂದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಶಿವಕುಮಾರ್ ಸಹಕರಿಸಬೇಕಿತ್ತು. ಸಾಂಕ್ರಾಮಿಕ ರೋಗದ ಕಾಯ್ದೆ ಪ್ರಕಾರ ಅವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜನರ ಗುಂಪಿನಲ್ಲಿ ಇರುವುದರಿಂದ ಸೋಂಕಿತರಿದ್ದರೆ ರೋಗ ಹರಡುವಿಕೆ ಸಾಧ್ಯತೆ ಇದೆ. ಹೀಗಾಗಿ ಇಷ್ಟವಿರಲಿ, ಇಲ್ಲದಿರಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಪಾದಯಾತ್ರೆ ಬೇಡ ಎಂದು ಮನವಿ ಮಾಡಿದರೂ ಕೋವಿಡ್ ನಿಯಮ ಉಲ್ಲಂಘಿಸಿ ಮಾಡಲಾಗುತ್ತಿದೆ. ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಮೇಕೆದಾಟು ಯೋಜನೆಗೆ ಸರ್ಕಾರ ಬದ್ದವಾಗಿದ್ದರೂ ಕಾಂಗ್ರೆಸ್ ರಾಜಕೀಯದ ನಾಟಕವಾಡಲು ಹೊರಟಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್‍ನವರ ನಡವಳಿಕೆಯಿಂದ ಜನರು ಬೇಸತ್ತಿದ್ದಾರೆ. ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.
Read more
[wpas_products keywords=”deal of the day”]