Karnataka news paper

ಬೆಳಗಾವಿಯಲ್ಲಿ ಸಗಟು ತರಕಾರಿ ಮಾರ್ಕೆಟ್ ಗಲಾಟೆ..! ಖಾಸಗಿ ಎಪಿಎಂಸಿ V/S ಸರ್ಕಾರಿ ಎಪಿಎಂಸಿ..!


ಹೈಲೈಟ್ಸ್‌:

  • ಬೆಳಗಾವಿಯಲ್ಲಿ ಖಾಸಗಿ ವೋಲ್‌ಸೇಲ್ ತರಕಾರಿ ಮಾರುಕಟ್ಟೆ ಕಾರ್ಯಾರಂಭ
  • ಖಾಸಗಿ ಮಾರುಕಟ್ಟೆ ವಿರುದ್ಧ ಎಪಿಎಂಸಿ ವರ್ತಕರಿಂದ ಆಕ್ರೋಶ..!
  • ಬೆಳಗಾವಿ ಜಿಲ್ಲಾಧಿಕಾರಿ ಎದುರು ಉಭಯ ಬಣಗಳ ವರ್ತಕರ ಗುದ್ದಾಟ..!

ಬೆಳಗಾವಿ: ಬೆಳಗಾವಿಯಲ್ಲಿ ಸಗಟು ತರಕಾರಿ ವ್ಯಾಪಾರಸ್ಥರ ಎರಡು ಬಣಗಳ ಮಧ್ಯೆ ಕಿತ್ತಾಟ ಶುರುವಾಗಿದೆ. ಎಪಿಎಂಸಿ ವೋಲ್‌ಸೇಲ್ ತರಕಾರಿ ಮಾರುಕಟ್ಟೆಗೆ ಸಡ್ಡು ಹೊಡೆದು ನೂತನವಾಗಿ ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆ ಪ್ರಾರಂಭವಾಗಿದ್ದು, ಅನಧಿಕೃತವಾಗಿ ಲೈಸೆನ್ಸ್ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರು ಹಾಗೂ ಜೈ ಕಿಸಾನ್ ವೋಲ್‌ಸೇಲ್ ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರ ನಡುವೆ ಗಲಾಟೆ ಶುರುವಾಗಿದೆ.

ಬೆಳಗಾವಿ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ಜೈ ಕಿಸಾನ್ ವೋಲ್‌ಸೇಲ್ ವೆಜಿಟೆಬಲ್ ಮರ್ಚೆಂಟ್ ಅಸೋಸಿಯೇಷನ್ ವತಿಯಿಂದ ಖಾಸಗಿ ಮಾರುಕಟ್ಟೆ ಶುರುವಾಗಿದೆ‌.‌ ಈ ವೋಲ್‌ಸೇಲ್ ತರಕಾರಿ ಮಾರ್ಕೆಟ್‌ಗೆ ಅನಧಿಕೃತವಾಗಿ ಎಪಿಎಂಸಿ ಅಧಿಕಾರಿಗಳು ಲೈಸೆನ್ಸ್ ನೀಡಿದ್ದಾರೆ ಅಂತಾ ಎಪಿಎಂಸಿ ವರ್ತಕರು ಆರೋಪಿಸಿ ಎಸಿಬಿ ಅಧಿಕಾರಿಗಳಿಗೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ರು.

ಹೀಗಾಗಿ ಬುಧವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಬೆಳಗಾವಿ ಡಿಸಿ ಎಂ. ಜಿ. ಹಿರೇಮಠ ಅವರು, ವೋಲ್‌ಸೇಲ್ ತರಕಾರಿ ವ್ಯಾಪಾರಸ್ಥರು ಹಾಗೂ ರೈತರ ಜೊತೆ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಎಪಿಎಂಸಿ ವೋಲ್‌ಸೇಲ್ ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರು ಹಾಗೂ ಜೈ ಕಿಸಾನ್ ವೋಲ್‌ಸೇಲ್ ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರ ಮನವಿಯನ್ನು ಡಿಸಿ ಆಲಿಸಿದರು. ವಿವಿಧ ರೈತ ಸಂಘಟನೆಗಳ ಮುಖಂಡರೂ ಈ ಸಭೆಯಲ್ಲಿ ಭಾಗಿಯಾಗಿದ್ರು.

ಅನಧಿಕೃತ ಮಾರುಕಟ್ಟೆ ಅಂತಾ ಆರೋಪಿಸುವ ಬಣ ಒಂದು ಕಡೆಯಾದ್ರೆ, ಇದು ಅಧಿಕೃತ ಮಾರುಕಟ್ಟೆ ಅಂತಾ ಒಂದು ಬಣ ವಾದ ಮಾಡಿತು. ಈ ವೇಳೆ ಸಭೆಯಲ್ಲಿ ಹೈಡ್ರಾಮಾ ನಡೆದು ಹೋಯ್ತು. ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಅವರು ಎಪಿಎಂಸಿ ತರಕಾರಿ ವ್ಯಾಪಾರಸ್ಥರ ಪರವಾಗಿ ಬ್ಯಾಟ್ ಬೀಸಿದ್ರೆ, ಜೈ ಕಿಸಾನ್ ಮಾರುಕಟ್ಟೆ ವ್ಯಾಪಾರಸ್ಥರ ಪರವಾಗಿ ನೇಗಿಲ ಯೋಗಿ ರೈತ ಸಂಘಟನೆ ಅಧ್ಯಕ್ಷ ರವಿ ಪಾಟೀಲ್ ಮಾತನಾಡಿದರು. ಈ ವೇಳೆ, ಉಭಯ ಮುಖಂಡರ ಮಧ್ಯೆ ವಾಗ್ವಾದ ಶುರುವಾಯಿತು‌.

ಈಗಾಗಲೇ ಎಪಿಎಂಸಿಯಲ್ಲಿ ಸಗಟು ತರಕಾರಿ ಮಾರುಕಟ್ಟೆ ಇದೆ. ಇಷ್ಟಾದ್ರೂ ಖಾಸಗಿ ಮಾರುಕಟ್ಟೆಗೆ ಅನುಮತಿ ನೀಡಿದ್ರೆ ಎಪಿಎಂಸಿ ವ್ಯಾಪಾರಸ್ಥರಿಗೆ ಪೆಟ್ಟು ಬೀಳುತ್ತೆ ಎಂದು ಒಂದು ಬಣ ವಾದಿಸಿತು. ಖಾಸಗಿ ಮಾರುಕಟ್ಟೆಗೆ ಅನುಮತಿ ನೀಡಿದ್ರಿಂದ ರೈತರಿಗೂ ತೊಂದರೆ ಆಗುತ್ತೆ ಅಂತಾ ಸಿದ್ದಗೌಡ ಮೋದಗಿ ಹೇಳಿದ್ರು. ಅಲ್ಲದೆ ಸತ್ತವರ ಹೆಸರಲ್ಲಿ ಎನ್‌ಎ ಲೇಔಟ್ ಪೇಪರ್ ಸಿದ್ದಪಡಿಸಿ ಅನಧಿಕೃತವಾಗಿ ಮಾರುಕಟ್ಟೆ ನಿರ್ಮಿಸಿದ್ದಾಗಿ ಆರೋಪಿಸಿದ್ರು‌.

ಇತ್ತ ಮತ್ತೋರ್ವ ರೈತ ಮುಖಂಡ ರವಿ ಪಾಟೀಲ್ ತಾವು ಯಾರ ಪರವಾಗಿಯೂ ಇಲ್ಲ, ರೈತರ ಪರವಾಗಿ ಇದ್ದೇವೆ ಎಂದರು. ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ಜೈ ಕಿಸಾನ್ ಮಾರುಕಟ್ಟೆ ಇರೋದ್ರಿಂದ ರೈತರಿಗೆ ಅನುಕೂಲ ಆಗುತ್ತೆ ಅಂತಾ ಹೇಳಿದ್ರು. ಈ ವೇಳೆ ಎಪಿಎಂಸಿ ವರ್ತಕರು ರೈತ ಮುಖಂಡ ರವಿ ಪಾಟೀಲ್‌ ಅವರನ್ನು ತರಾಟೆಗೆ ತೆಗೆದುಕೊಂಡರು‌.‌ ಈ ವೇಳೆ ರೈತ ಮುಖಂಡರ ಮಧ್ಯೆ ತೀವ್ರ ವಾಗ್ವಾದವೇ ನಡೆಯಿತು.

ಜನರಿಗೆ ತರಕಾರಿ ರೇಟಿನ ಏಟು; ಶಿವಮೊಗ್ಗದಲ್ಲಿ ತರಕಾರಿ ಬೆಲೆ ಶೇ.40ರಷ್ಟು ಏರಿಕೆ!
ಇದೇ ವೇಳೆ ಮಾತನಾಡಿದ ಜೈ ಕಿಸಾನ್ ವೋಲ್‌ಸೇಲ್ ತರಕಾರಿ ಮಾರುಕಟ್ಟೆ ಪ್ರತಿನಿಧಿಗಳು, ನಾವು ಯಾವುದೇ ತರಕಾರಿ ಮಾರುಕಟ್ಟೆಯನ್ನು ಅನಧಿಕೃತವಾಗಿ ಪ್ರಾರಂಭ ಮಾಡಿಲ್ಲ. ಸರ್ಕಾರದ ಎಪಿಎಂಸಿ ಮಾರುಕಟ್ಟೆ ನಿಯಮದ ಅಡಿ ಮಾರುಕಟ್ಟೆ ಪ್ರಾರಂಭ ಮಾಡಲಾಗಿದೆ. ಸರ್ಕಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ ಆಗುತ್ತಿದೆ. ಅಧಿಕಾರಿಗಳು ಹಣ ಕೀಳುತ್ತಿದ್ದಾರೆ. ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಹೀಗಾಗಿ ರೈತರೇ ಖಾಸಗಿ ಎಪಿಎಂಸಿ ಮಾರುಕಟ್ಟೆ ಬೇಕು ಅಂತಾ ಮನವಿ ಮಾಡಿಕೊಂಡರು ಎಂದು ವಾದಿಸಿದರು. ತಾವು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಖಾಸಗಿ ಮಾರುಕಟ್ಟೆ ಸ್ಥಾಪನೆಯಿಂದ ರೈತರಿಗೆ ಲಾಭವಾಗುತ್ತೆ ಎಂದು ಸಮರ್ಥಿಸಿಕೊಂಡರು. ಅಷ್ಟೇ ಅಲ್ಲ, ಸ್ಪರ್ಧಾತ್ಮಕ ದರ ನಿಗದಿ ಆಗುತ್ತದೆ ಎಂದೂ ಹೇಳಿದರು.

ಎಲ್ಲಿ ವ್ಯವಸ್ಥೆ ಚೆನ್ನಾಗಿದೆಯೋ, ದರ ಒಳ್ಳೆಯ ಎಲ್ಲಿ ಸಿಗುತ್ತದೋ ಅಲ್ಲಿ ರೈತರು ತಮ್ಮ ತರಕಾರಿ ತೆಗೆದುಕೊಂಡು ಬರ್ತಾರೆ ಅನ್ನೋದು ಜೈ ಕಿಸಾನ್ ವೋಲ್‌ಸೇಲ್ ತರಕಾರಿ ಮಾರುಕಟ್ಟೆ ಪ್ರತಿನಿಧಿಗಳ ವಾದ. ನಾವು ಯಾವುದೇ ಅನಧಿಕೃತ ಮಾರುಕಟ್ಟೆ ಮಾಡಿಲ್ಲ ಅನ್ನೋದು ಅವರ ನಿಲುವು.

ಬೆಳಗಾವಿಯಲ್ಲಿ ಹಬ್ಬದ ಖರೀದಿ, ಸಿದ್ಧತೆ ಭರ್ಜರಿ; ಮನೆ- ಮಾರುಕಟ್ಟೆಯಲ್ಲಿ ದೀಪಾವಳಿ ಸಂಭ್ರಮ!
ವ್ಯಾಪಾರಸ್ಥರ ಎರಡು ಬಣಗಳ ವಾದ ಆಲಿಸಿದ ಡಿಸಿ ಎಂ. ಜಿ. ಹಿರೇಮಠ, ಜೈ ಕಿಸಾನ್ ವೋಲ್‌ಸೇಲ್ ವೆಜಿಟೆಬಲ್ ಮರ್ಚೆಂಟ್ ಅಸೋಸಿಯೇಷನ್ ವಿರುದ್ಧದ ಆರೋಪಗಳ ತನಿಖೆಗೆ ಅಧಿಕಾರಿ ನೇಮಿಸುವುದಾಗಿ ತಿಳಿಸಿ ಸಭೆ ಮುಕ್ತಾಯಗೊಳಿಸಿದರು.

ಇನ್ನು ಬೆಳಗಾವಿ ನಗರ ಬಿಜೆಪಿ ಶಾಸಕರ ಕುಮ್ಮಕ್ಕಿನಿಂದ ಖಾಸಗಿ ಮಾರುಕಟ್ಟೆಗೆ ಅನಧಿಕೃತವಾಗಿ ಲೈಸೆನ್ಸ್ ನೀಡಿದ್ದಾರೆ ಎಂಬ ಎಪಿಎಂಸಿ ವರ್ತಕರ ಆರೋಪವನ್ನು ಶಾಸಕ ಅನಿಲ್ ಬೆನಕೆ ಅಲ್ಲಗಳೆದಿದ್ದು, ರೈತರಿಗೆ ಎಲ್ಲಿ ಅನುಕೂಲ ಆಗುತ್ತದೆಯೋ ಅಲ್ಲಿ ಹೋಗ್ತಾರೆ ಅಂತಾ ಹೇಳಿದ್ದಾರೆ.

ಈ ಎಲ್ಲಾ ಹೈಡ್ರಾಮಾ ನಡುವಲ್ಲೇ ಸಭೆ ಮುಗಿಸಿರುವ ಡಿಸಿ ಎಂ. ಜಿ. ಹಿರೇಮಠ, ಖಾಸಗಿ ಮಾರುಕಟ್ಟೆ ಸ್ಥಾಪನೆ ಸಂಬಂಧ ಇರುವ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಸಭೆಯಿಂದ ಅಧಿಕಾರಿಗಳು ಪಲಾಯನ ಮಾಡಿದ್ದಾರೆ ಅಂತಾ ಎಪಿಎಂಸಿ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದು, ಒಂದು ತಿಂಗಳ ಬಳಿಕ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಸದ್ಯ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದ್ದು ಮುಂದೆ ಏನ್ ಆಗುತ್ತೋ ಕಾದು ನೋಡಬೇಕು.

ಮತ್ತೆ ಗಗನಕ್ಕೇರಿದ ತರಕಾರಿ ಬೆಲೆ; ಸಂತೆಯಲ್ಲಿ ಖರೀದಿಗೆ ಗ್ರಾಹಕರ ಹಿಂದೇಟು



Read more

[wpas_products keywords=”deal of the day sale today offer all”]