Karnataka news paper

ರಾಷ್ಟ್ರೀಯ ಯುವ ದಿನಾಚರಣೆ: ತಂಬಾಕು ಉತ್ಪನ್ನಗಳ ತೆರಿಗೆ ಹೆಚ್ಚಳಕ್ಕೆ ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಒತ್ತಾಯ!


Online Desk

ಬೆಂಗಳೂರು: ಮುಂಬರುವ 2022-23ನೇ ಸಾಲಿನ ಬಜೆಟ್‌ನಲ್ಲಿ ಎಲ್ಲಾ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವಂತೆ ದೇಶದ ವಿವಿಧ ಯುವಜನ ಸಂಘಗಳು ಸೇರಿದಂತೆ 500ಕ್ಕೂ ಹೆಚ್ಚು ಯುವಕರು ಪ್ರಧಾನಿ ಮತ್ತು ಕೇಂದ್ರ ಹಣಕಾಸು ಸಚಿವರನ್ನು ಒತ್ತಾಯಿಸಿದ್ದಾರೆ.

‘ಸಕ್ಷಮ್ ಯುವ, ಸಶಕ್ತ್ ಯುವ’ (ಸಮರ್ಥ ಯುವಜನ, ಬಲಿಷ್ಠ ಯುವಜನ) ಎಂಬ ಘೋಷವಾಕ್ಯ ಹೊಂದಿರುವ ರಾಷ್ಟ್ರೀಯ ಯುವ ದಿನಾಚರಣೆ ಹಿನ್ನೆಲೆಯಲ್ಲಿ ಸಿಗರೇಟ್, ಬೀಡಿ ಮತ್ತು ಹೊಗೆರಹಿತ ತಂಬಾಕಿನ ಮೇಲೆ ವಿಧಿಸಿರುವ ಅಬಕಾರಿ ಸುಂಕವನ್ನು ಹೆಚ್ಚಿಸಿ, ದೇಶದ ಯುವ ಜನಾಂಗಕ್ಕಾಗಿ ಆರೋಗ್ಯಕರ ಮತ್ತು ವ್ಯಸನಮುಕ್ತ ಬೆಳವಣಿಗೆಗೆ ಪೂರಕವಾದ ಪರಿಸರ ನಿರ್ಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಲಾಗಿದೆ. 

ಕೇಂದ್ರ ಸರ್ಕಾರದ ಮುಂದಿರುವ ಆದಾಯ ಹೆಚ್ಚಳದ ಸವಾಲನ್ನು ಎದುರಿಸಲು ಎಲ್ಲಾ ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಏರಿಸುವುದು ತುರ್ತು ಪರಿಹಾರವಾಗಬಹುದಾಗಿದೆ. ಆದಾಯ ಹೆಚ್ಚಳ ಮಾತ್ರವಲ್ಲದೆ, ತಂಬಾಕು ಬಳಕೆಯನ್ನು ತಗ್ಗಿಸಿ ತಂಬಾಕು ಮತ್ತು ಕೋವಿಡ್ ಸಂಬಂಧಿತ ಕಾಯಿಲೆಗಳನ್ನು ತಗ್ಗಿಸಬಲ್ಲ ಅತ್ಯಂತ ಪರಿಣಾಮಕಾರಿ ನೀತಿ ಇದಾಗಿದೆ ಎಂದು ಯುವ ಸಮುದಾಯ ಅಭಿಪ್ರಾಯಪಟ್ಟಿದೆ.

ತಂಬಾಕು ಉತ್ಪನ್ನಗಳ ಮೇಲೆ ಪ್ರಸ್ತುತ ಇರುವ ತೆರಿಗೆಯನ್ನು ಗಣನೀಯವಾಗಿ ಹೆಚ್ಚಿಸಿ ಅವು ದುರ್ಬಲ ವರ್ಗದವರ (ವಿಶೇಷವಾಗಿ ಯುವಜನರಿಗೆ) ಕೈಗೆಟುಕದಂತೆ ಮಾಡಿ, ಅದರಿಂದ ಉಂಟಾಗುತ್ತಿರುವ ಆರ್ಥಿಕ ಹೊರೆಯನ್ನು ತಗ್ಗಿಸುವುದು, ವಿವಿಧ ತಂಬಾಕು ಉತ್ಪನ್ನಗಳ ಮೇಲಿರುವ ತೆರಿಗೆ ವ್ಯತ್ಯಾಸಗಳನ್ನು ಕಡಿಮೆ ಮಾಡುವುದು, ತಂಬಾಕು ತೆರಿಗೆಗಳಲ್ಲಿರುವ ಹಲವು ಶ್ರೇಣಿಗಳನ್ನು ತೆಗೆದು ಹಾಕುವ ಮೂಲಕ ತಂಬಾಕು ತೆರಿಗೆಯ ಸರಳೀಕರಣ, ಮತ್ತು ಕಠಿಣ ಪ್ಯಾಕಿಂಗ್ ನಿಯಮಗಳ ಅನುಷ್ಠಾನ ಸೇರಿದಂತೆ ಹಲವು ಪ್ರಮುಖ ಶಿಫಾರಸುಗಳನ್ನು ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಮಾಡಲಾಗಿದೆ. ಇದಲ್ಲದೇ, ತೆರಿಗೆ ಹೆಚ್ಚಳದಿಂದ ಬರುವ ಆದಾಯವನ್ನು ತಂಬಾಕು ಬೆಳೆಗಾರರು ಇತರೆ ಬೆಳೆಗಳನ್ನು ಬೆಳೆಯುವಂತೆ ಉತ್ತೇಜಿಸಲು, ಬೀಡಿ ಹೊಸೆಯುವವರು, ತಂಬಾಕು ಉತ್ಪನ್ನ ಮಾರಾಟಗಾರರು ಮತ್ತು ತಂಬಾಕು ತೆರಿಗೆ ಏರಿಕೆಯಿಂದ ತೊಂದರೆಗೊಳಗಾದವರಿಗೆ ಪರ್ಯಾಯ ಜೀವನೋಪಾಯ ಒದಗಿಸಲು ಬಳಸಬೇಕೆಂದು ಶಿಫಾರಸು ಮಾಡಲಾಗಿದೆ.

“ತಂಬಾಕು ಸೇವನೆ ನಮ್ಮ ಆರೋಗ್ಯವನ್ನು ಹಾಳು ಮಾಡುವುದಲ್ಲದೇ ನಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಆರೋಗ್ಯಕ್ಕೂ ಅಪಾಯ ತಂದೊಡ್ಡುತ್ತದೆ. ಅಲ್ಲದೆ, ತಂಬಾಕು ಬಳಕೆದಾರರು ಕೋವಿಡ್-19ಕ್ಕೆ ತುತ್ತಾಗಿ ಇತರರಿಗಿಂತ ಹೆಚ್ಚು ನೋವು ಅನುಭವಿಸುವ  ಸಾಧ್ಯತೆಯಿದೆ. ತಂಬಾಕು ವ್ಯಸನಕ್ಕೆ ಬಿದ್ದವರು ತಂಬಾಕಿನ ಅವಲಂಬನೆಯಿಂದ ಮುಕ್ತರಾಗಿ ಆರೋಗ್ಯವಂತರಾಗಬೇಕೆಂದು ನಾನು ಬಯಸುತ್ತೇನೆ,” ಎಂದು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಹೇಳಿದ್ದಾರೆ.

ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಳ ಎಂದರೆ ತ್ರಿವಳಿ ಗೆಲುವಿದ್ದಂತೆ. ಅವುಗಳೆಂದರೆ ಆದಾಯ ಹೆಚ್ಚಳ, ಬಳಕೆಯ ಪ್ರಮಾಣದಲ್ಲಿ ಇಳಿಕೆ ಮತ್ತು ತಗ್ಗಿದ ಬಳಕೆಯಿಂದಾಗುವ ಜೀವಗಳ ರಕ್ಷಣೆ, ಹಾಗು ರಾಜ್ಯದ ಮೇಲಿರುವ ಚಿಕಿತ್ಸಾ ವೆಚ್ಚದ ಹೊರೆಯಲ್ಲಿ ಇಳಿಕೆ. ತೆರಿಗೆಯನ್ನು ಮೂರು ಪಟ್ಟು ಹೆಚ್ಚಿಸುವ ಮೂಲಕ ಆದಾಯವನ್ನು ದ್ವಿಗುಣಗೊಳಿಸಬಹುದು ಮತ್ತು ಬಳಕೆ ಪ್ರಮಾಣವನ್ನು ಅರ್ಧದಷ್ಟು ಇಳಿಸಬಹುದು ಎನ್ನವುದು ಜಾಗತಿಕವಾಗಿ ಒಪ್ಪಿತವಾದ ಸೂತ್ರ. ತಂಬಾಕು ಬೆಲೆ ಹೆಚ್ಚಾದರೆ, ಧೂಮಪಾನ ಮತ್ತು ಇತರ ತಂಬಾಕು ಬಳಕೆ ಕಡಿಮೆಯಾಗುತ್ತದೆ. ಇದು ಯುವಕರು, ಗರ್ಭಿಣಿಯರು ಮತ್ತು ಕಡಿಮೆ ಆದಾಯಗಳಂಥ ದುರ್ಬಲ ವರ್ಗಗಳಿಗೆ ವಿಶೇಷವಾಗಿ ಅನ್ವಯವಾಗುತ್ತದೆ.

ವಾಮಮಾರ್ಗದ ಮೂಲಕ ಅಡಿಯಿಟ್ಟಿರುವ ತಂಬಾಕು ಜಾಹೀರಾತುಗಳಿಗೆ ಯುವಕರು ಗುರಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಬೆಂಗಳೂರಿನ ಸೇಂಟ್ ಜೋಸೆಫ್ ಪ್ರೌಢ ಶಾಲೆಯ  10ನೇ ತರಗತಿ ವಿದ್ಯಾರ್ಥಿ ರೋಷನ್, “ನಮ್ಮ ಚಲನಚಿತ್ರ ತಾರೆಯರು ಸಿಗರೇಟ್‌ ಸೇದುವುದನ್ನು ವಿಜೃಂಭಿಸುತ್ತಿದ್ದಾರೆ. ಅವುಗಳ ದುಷ್ಪರಿಣಾಮಗಳನ್ನು ಅರಿಯದ ನಮ್ಮ ಮುಗ್ಧ ಮನಸ್ಸುಗಳು ಅವುಗಳಿಗೆ ಮಾರುಹೋಗಿ, ಕೊನೆಗೆ ತಂಬಾಕಿಗೆ ದಾಸರಾಗುತ್ತಾರೆ. ಯುವಜನರು ತಂಬಾಕು ಖರೀದಿಸಲು ಸಾಧ್ಯವೇ ಆಗದಂತೆ ತಂಬಾಕು ಮೇಲಿನ ತೆರಿಗೆಯಲ್ಲಿ ಭಾರೀ ಹೆಚ್ಚಳ ಮಾಡಬೇಕೆಂದು ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ನಾನು ಒತ್ತಾಯಿಸುತ್ತೇನೆ,” ಎನ್ನುತ್ತಾರೆ.

ಭಾರತದಲ್ಲಿ ಕೋವಿಡ್-19ರ ಮೂರನೇ ಅಲೆಯಿದ್ದು, ತಂಬಾಕು ಸೇವನೆಯಿಂದ ಕೋವಿಡ್-19ರ ತೀವ್ರ ಸೋಂಕು, ಬಾಧೆ, ಮತ್ತು ಸಾವಿನ ಸಾಧ್ಯತೆ ಹೆಚ್ಚುತ್ತದೆ ಎಂದು ಲಭ್ಯವಿರುವ ಸಂಶೋಧನೆಗಳು  ಸೂಚಿಸಿರುವುದನ್ನು ಗಮನಿಸಬೇಕಾಗಿದೆ. ಧೂಮಪಾನಿಗಳು ತೀವ್ರವಾದ ಕಾಯಿಲೆಗೆ ತುತ್ತಾಗುವ ಮತ್ತು ಕೋವಿಡ್-19ನಿಂದ ಸಾಯುವ ಅಪಾಯವನ್ನು ಹೊಂದಿರುತ್ತಾರೆ ಎಂದು ಲಭ್ಯವಿರುವ ಸಂಶೋಧನೆಗಳು ಸೂಚಿಸಿವೆ. ತಂಬಾಕು ಸೇವನೆಯು ನಿಧಾನವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಪ್ರತಿ ವರ್ಷ 13 ಲಕ್ಷ ಭಾರತೀಯರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಆದ್ದರಿಂದ, ತಂಬಾಕು ಉತ್ಪನ್ನಗಳನ್ನು ಯುವಕರು ಮತ್ತು ಸಮಾಜದ ಹಿಂದುಳಿದ ವರ್ಗಗಳಂತಹ ದುರ್ಬಲ ಜನಸಂಖ್ಯೆಯಿಂದ ದೂರವಿಡುವುದು ಹಿಂದೆಂದಿಗಿಂತಲೂ ಅತ್ಯಗತ್ಯವಾಗಿದೆ.

ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವುದು ತಂಬಾಕು ಬಳಕೆಯನ್ನು ಕಡಿಮೆ ಮಾಡಲು ಮತ್ತು ಜೀವಗಳನ್ನು ಉಳಿಸಲು ಇರುವ ಏಕೈಕ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಪರಿಣಾಮಕಾರಿ ತಂಬಾಕು ನಿಯಂತ್ರಣ ನೀತಿಗಳನ್ನು ಹೊಂದಿರುವ ದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ತಂಬಾಕು ತೆರಿಗೆಗಳು ಅತೀ ಕಡಿಮೆಯಿದ್ದು, ಇದರಿಂದ ತಂಬಾಕು ಉತ್ಪನ್ನಗಳು ಅತ್ಯಂತ ಅಗ್ಗ ಮತ್ತು ಕೈಗೆಟುಕುವ ದರಗಳಲ್ಲಿ ಲಭ್ಯವಿವೆ. ಭಾರತದಲ್ಲಿನ ಎಲ್ಲಾ ತಂಬಾಕು ಉತ್ಪನ್ನಗಳ ಮೇಲೆ ಅಗತ್ಯಕ್ಕಿಂತ ಕಡಿಮೆ ತೆರಿಗೆ ಹೇರಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ತಂಬಾಕು ಬಳಕೆಯನ್ನು ಕಡಿಮೆ ಮಾಡಲು ತೆರಿಗೆ ಹೆಚ್ಚಳದ ಮೂಲಕ ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಿಸುವುದು ಅತ್ಯಂತ ಪರಿಣಾಮಕಾರಿ ನೀತಿಯಾಗಿದೆ. ತಂಬಾಕಿನ ಬೆಲೆ ಕೈಗೆಟುಕದಂತಿದ್ದರೆ ತಂಬಾಕು ಬಳಕೆದಾರರಿಗೆ ತಂಬಾಕು ತೊರೆಯಲು ಉತ್ತೇಜಿಸುತ್ತದೆ, ಹೊಸ ಬಳಕೆದಾರರನ್ನು ನಿಯಂತ್ರಿಸುತ್ತದೆ ಮತ್ತು ನಿರಂತರ ಬಳಕೆದಾರರಲ್ಲಿ ಸೇವನೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದ ಪಾಲನ್ನು ಅವುಗಳ ಚಿಲ್ಲರೆ ಬೆಲೆಯ 75% ರಷ್ಟು ಹೆಚ್ಚಿಸಬೇಕೆಂದು ಡಬ್ಲ್ಯುಎಚ್‌ಒ  ಶಿಫಾರಸು ಮಾಡುತ್ತದೆ.

ತಂಬಾಕು ವ್ಯಸನಕ್ಕೀಡಾದ ತಂದೆಯನ್ನು ಕಳೆದುಕೊಂಡ ಹರ್ಯಾಣದ ಎಂಡಿಡಿ ಬಾಲ ಭವನದ ವಿದ್ಯಾರ್ಥಿನಿ ಪ್ರೀತಿ, “ನಾನು ಕೇವಲ 12 ವರ್ಷದವಳಿದ್ದಾಗ ತಂಬಾಕು ಚಟ ನನ್ನಪ್ಪನನ್ನು ನನ್ನಿಂದ  ದೂರ ಮಾಡಿತು. ತುಂಬಾ ಆತ್ಮೀಯರಾದವರು ತಂಬಾಕಿಗೆ ಬಲಿಯಾದಾಗ ಆಗುವ ವೇದನೆಯನ್ನು ನಾನು ಚೆನ್ನಾಗಿ ಬಲ್ಲೆ. ತಂಬಾಕು ಉತ್ಪನ್ನಗಳು ಎಷ್ಟು ದುಬಾರಿಯಾಗಬೇಕೆಂದರೆ, ಯಾರೂ ತಮ್ಮ ಪ್ರೀತಿಪಾತ್ರರನ್ನು ತಂಬಾಕಿನ ದುಶ್ಚಟದಿಂದಾಗಿ ಕಳೆದುಕೊಳ್ಳಬಾರದು. ಜನರು ವ್ಯಸನಿಗಳಾಗಲು ಸಿಗರೇಟ್, ಬೀಡಿ, ಮತ್ತಿತರೇ ತಂಬಾಕು ಉತ್ಪನ್ನಗಳು ಸುಲಭವಾಗಿ ಲಭ್ಯವಾಗುತ್ತಿರುವುದು ಕೂಡ  ಕಾರಣವಾಗಿದೆ. ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವುದರಿಂದ ಈ ಕೊಲೆಗಡುಕ ಉತ್ಪನ್ನಗಳು ಹೆಚ್ಚು ಕೈಗೆಟುಕದಂತಾಗುತ್ತದೆ. ಸರ್ಕಾರಕ್ಕೆ ಗಣನೀಯ ಆದಾಯವನ್ನೂ ಇದು ತಂದುಕೊಡುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದಲ್ಲಿ ಭಾರತವು ಎರಡನೇ ಅತಿ ದೊಡ್ಡ ಸಂಖ್ಯೆಯ (268 ಮಿಲಿಯನ್) ತಂಬಾಕು ಬಳಕೆದಾರರನ್ನು ಹೊಂದಿದೆ. ಭಾರತದಲ್ಲಿನ ಎಲ್ಲ ವಿಧಗಳ  ಕ್ಯಾನ್ಸರ್‌ಗಳ ಪೈಕಿ ಸುಮಾರು 27% ಕ್ಯಾನ್ಸರ್‌ಗಳಿಗೆ ತಂಬಾಕು ಕಾರಣವಾಗಿದೆ. 2017-18 ರಲ್ಲಿ ತಂಬಾಕು ಸೇವನೆಯಿಂದ ಉಂಟಾಗಿರುವ ಎಲ್ಲಾ ರೋಗಗಳು ಮತ್ತು ಸಾವುಗಳಿಂದ ವಾರ್ಷಿಕ ಆರ್ಥಿಕ ವೆಚ್ಚ 177,341 ಕೋಟಿ ರೂ.ಗಳೆಂದು ಅಂದಾಜಿಸಲಾಗಿದ್ದು, ಇದು ಭಾರತದ ಜಿಡಿಪಿಯ 1% ಆಗಿದೆ. ಇದು ಕೋವಿಡ್‌ ನಂತರ ಇನ್ನಷ್ಟು ಹೆಚ್ಚಾಗಲಿದೆ.



Read more

[wpas_products keywords=”deal of the day”]