ಬೆಂಗಳೂರು: ಮೇಕೆದಾಟು ವಿಚಾರವಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ನಡುವಿನ ವಾಕ್ಸಮರ ಮುಂದುವರೆದಿದೆ.
ಕಾರಜೋಳ ಅವರಿಗೆ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್, ‘ನಾವು ಮಾಡಿದ್ದನ್ನು ಜನರ ಮುಂದಿಟ್ಟಿದ್ದೀವಿ. ನಮ್ಮ ಕಾರ್ಯವನ್ನು ಜಿ.ಮಾದೇಗೌಡ ಅಂತಹವರು ಶ್ಲಾಘಿಸಿದ್ದಾರೆ. ಅದನ್ನು ಬಿಡಿ. ಕಳೆದ ಮೂರು ವರ್ಷಗಳಿಂದ ನಿಮ್ಮ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ದಯಮಾಡಿ ರಾಜ್ಯದ ಜನತೆಯ ಮುಂದಿಡಿ. 3 ವರ್ಷದ ತಮ್ಮ ಸರ್ಕಾರ ರಾಜ್ಯದ ಅಭಿವೃದ್ಧಿಯಲ್ಲಿ ಮಾಡಿರುವ ಸಾಧನೆ ದೊಡ್ಡ ಶೂನ್ಯ ಬಿಟ್ಟು ಬೇರೇನಿಲ್ಲ’ ಎಂದು ಟೀಕಿಸಿದ್ದಾರೆ.
‘ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 3 ತಿಂಗಳಲ್ಲೇ ಚಾಲನೆ ದೊರೆಯಿತು. ನೀರಾವರಿ ಸಚಿವನಾಗಿ ಹೆಗಲೇರಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ ತೃಪ್ತಿ ನನಗಿದೆ’ ಎಂದು ಪಾಟೀಲ ತಿಳಿಸಿದ್ದಾರೆ.
‘ಕೆಲವರ ಅನಗತ್ಯ ಟೀಕೆಗೆ ನೊಂದು ರಾಜ್ಯದ ಪರ ವಾದ ಮಂಡಿಸುತ್ತಿದ್ದ ನ್ಯಾಯವಾದಿ ಫಾಲಿ ನಾರಿಮನ್ ಮುನಿಸಿಕೊಂಡಾಗ ಮನವೊಲಿಸಿ ನ್ಯಾಯಾಲಯಕ್ಕೆ ಕರೆತಂದು ಸೂಕ್ತ ನ್ಯಾಯ ಮಂಡಿಸಿ ರಾಜ್ಯಕ್ಕೆ ಹೆಚ್ಚುವರಿ ನೀರು ಪಡೆದಿದ್ದು ಇತಿಹಾಸ. ತಿಂಗಳುಗಳ ಕಾಲ ದೆಹಲಿಯಲ್ಲಿ ವಾಸ್ತವ್ಯವಿದ್ದು ಕೋರ್ಟ್ ಕಲಾಪಗಳಲ್ಲಿ ಸ್ವತಃ ನಾನೇ ಭಾಗವಹಿಸಿದೆ’ ಎಂದೂ ಅವರು ಹೇಳಿದ್ದಾರೆ.
‘ತಮಿಳುನಾಡಿನ ವರದಿಗಾರರೊಬ್ಬರು ನನ್ನಂತಹ ದಿಟ್ಟ, ಬದ್ಧತೆ ಉಳ್ಳ ಸಚಿವರು ತಮಿಳುನಾಡಿಗೂ ಅಗತ್ಯವೆಂದು ಬರೆದಿದ್ದರು. ನೆಲ ಜಲ ಭಾಷೆ ವಿಷಯಗಳು ಬಂದಾಗ ರಾಜಕೀಯ ಪಕ್ಷಗಳು ಪರಸ್ಪರ ಕಚ್ಚಾಡದೆ ಸಕಾರಾತ್ಮಕವಾಗಿ ಹೆಜ್ಜೆಗಳನ್ನು ಹಾಕಿ ರಚನಾತ್ಮಕ ಕಾರ್ಯ ಮಾಡಬೇಕು’ ಎಂದು ಪಾಟೀಲ ಟ್ವೀಟ್ ಮಾಡಿದ್ದಾರೆ.
‘ಅಧಿಕಾರ ಸಿಕ್ಕಾಗ, ದೊರೆತ ಅವಕಾಶ ಸದ್ಬಳಕೆ ಮಾಡಿಕೊಂಡು ಕೆಲಸ ಮಾಡುವುದನ್ನು ಬಿಟ್ಟು, ಪುಟಗಟ್ಟಲೆ ಬೇನಾಮಿ ಜಾಹೀರಾತು ನೀಡಿದರೆ ಮೇಕೆದಾಟುವಿನಲ್ಲಿ ನೀರು ಸಂಗ್ರಹಗೊಂಡು, ಬೆಂಗಳೂರಿಗೆ ಕುಡಿಯುವ ನೀರು ದೊರಕುತ್ತದೆಯೇ?’ ಎಂದೂ ಪಾಟೀಲ ಪ್ರಶ್ನಿಸಿದ್ದಾರೆ.
ಅಧಿಕಾರ ಸಿಕ್ಕಾಗ, ದೊರೆತ ಅವಕಾಶ ಸದ್ಬಳಕೆ ಮಾಡಿಕೊಂಡು ಕೆಲಸ ಮಾಡುವುದನ್ನು ಬಿಟ್ಟು, ಪುಟಗಟ್ಟಲೆ ಬೇನಾಮಿ ಜಾಹೀರಾತು ನೀಡಿದರೆ ಮೇಕೆದಾಟುವಿನಲ್ಲಿ ನೀರು ಸಂಗ್ರಹಗೊಂಡು, ಬೆಂಗಳೂರಿಗೆ ಕುಡಿಯುವ ನೀರು ದೊರಕುತ್ತದೆಯೇ? 5/n
— M B Patil (@MBPatil) January 12, 2022
Read more from source
[wpas_products keywords=”deal of the day sale today kitchen”]