ಹೈಲೈಟ್ಸ್:
- ಆಕ್ಸಿಜನ್ ಉತ್ಪಾದನಾ ಘಟಕ ಇದ್ದರೂ ಪ್ರಯೋಜನವಿಲ್ಲ..!
- ಜನರೇಟರ್, ಟ್ರಾನ್ಸ್‌ಫಾರ್ಮರ್ ಅಳವಡಿಕೆ ಇನ್ನೂ ಆಗಿಲ್ಲ..!
- ಆಕ್ಸಿಜನ್ ಘಟಕ ಯಾವಾಗ ಕಾರ್ಯಾರಂಭ ಮಾಡುತ್ತೋ ದೇವರೇ ಬಲ್ಲ..!
ಚಿತ್ರದುರ್ಗ ನಗರದ ಜಿ. ಪಂ. ಸಭಾಂಗಣದಲ್ಲಿ ಜಿಲ್ಲಾಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ಆತಂಕಕಾರಿ ವಿಷಯ ಬಹಿರಂಗವಾಯಿತು. ಜಿಲ್ಲೆಯ ಕೊರೊನಾ ಸ್ಥಿತಿಗತಿ ಪರಿಶೀಲನೆ ವೇಳೆ ಡಿಎಚ್‌ಒ ಡಾ. ರಂಗನಾಥ್ ಈ ಕುರಿತು ತೃಪ್ತಿಕರ ಮಾಹಿತಿ ನೀಡದ ಕಾರಣ ಸಮಸ್ಯೆಯ ಮತ್ತೊಂದು ಮುಖ ಅನಾವರಣಗೊಂಡಿತು.
ಶಾಸಕ ಜಿ. ಎಚ್. ತಿಪ್ಪಾರೆಡ್ಡಿ ‘ಈ ಬಗ್ಗೆ ಸ್ಪಷ್ಟ ಉತ್ತರಬೇಕು. ಈಗ ಘಟಕಗಳನ್ನು ಸ್ಥಾಪಿಸಿದ್ದೀರಿ. ಆದರೆ, ರೋಗಿಗಳಿಗೆ ಸಾಕಾಗುವಷ್ಟು ಆಕ್ಸಿಜನ್ ಉತ್ಪಾದನೆ ತಕ್ಷಣದಿಂದಲೇ ಮಾಡಬಹುದಾ? ನಿಖರವಾಗಿ ಹೇಳಿ’ ಎಂದು ಪಟ್ಟು ಹಿಡಿದರು.
ಡಿಎಚ್‌ಒ ಡಾ. ರಂಗನಾಥ್, ‘ಮೊಳಕಾಲ್ಮೂರು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಘಟಕಗಳಲ್ಲಿ ಈಗ ಅಗತ್ಯವಿರುವಷ್ಟು ಆಕ್ಸಿಜನ್ ಉತ್ಪಾದನೆ ಮಾಡಬಹುದು. ಅಲ್ಲಿ ಜನರೇಟರ್ ಹಾಗೂ ಟ್ರಾನ್ಸ್‌ಫಾರ್ಮರ್ ಇವೆ. ಉಳಿದ ತಾಲೂಕುಗಳಲ್ಲಿ ಜನರೇಟರ್ ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಇನ್ನಷ್ಟೇ ಅಳವಡಿಸಬೇಕಿದೆ’ ಎಂದರು.
‘ಇತ್ತೀಚೆಗೆ ಆಯುಕ್ತರು ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ರಾಜ್ಯ ಮಟ್ಟದಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇನ್ನೊಂದು ವಾರದೊಳಗೆ ಟ್ರಾನ್ಸ್‌ಫಾರ್ಮರ್ ಅಳವಡಿಸುವ ಕೆಲಸ ಪ್ರಾರಂಭವಾಗಲಿದೆ. ಟೆಂಡರ್‌ದಾರರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.
ಶಾಸಕ ಜಿ. ಎಚ್. ತಿಪ್ಪಾರೆಡ್ಡಿ, ಟಿ. ರಘುಮೂರ್ತಿ ಮಾತನಾಡಿ, ‘ಆಮ್ಲಜನಕ ಉತ್ಪಾದನಾ ಘಟಕಗಳಿಂದ ಆಮ್ಲಜನಕ ಉತ್ಪಾದನೆಯಾಗಲಿದೆ ಎಂದು ಭಾವಿಸಿದ್ದೆವು. ಇದು ಗಂಭೀರ ವಿಷಯ, ವಿಳಂಬ ಮಾಡದೇ ವಿದ್ಯುತ್ ಸಂಬಂಧಿ ಕೆಲಸಗಳನ್ನು ಪೂರ್ಣಗೊಳಿಸಿ. ಸೋಂಕಿತರಿಗೆ ಬೆಡ್ ಸಮಸ್ಯೆ, ಆಮ್ಲಜನಕ, ಔಷಧಿಯ ಕೊರತೆ ಬಗ್ಗೆ ಯಾವುದೇ ನೆಪ ಹೇಳುವಂತಿಲ್ಲ’ ಎಂದು ಜಿಲ್ಲಾಆರೋಗ್ಯಾಧಿಕಾರಿಗೆ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ತಾಕೀತು ಮಾಡಿದರು.
ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಮೂರನೇ ಅಲೆಯು ದಿನೇ ದಿನೇ ಏರುಗತಿಯಲ್ಲಿ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಆಮ್ಲಜನಕ, ಸಿಟಿ ಸ್ಕ್ಯಾನ್, ಎಕ್ಸ ರೇ ಘಟಕಗಳು ಸೇರಿದಂತೆ ಔಷಧ ದಾಸ್ತಾನು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್, ಎಕ್ಸ ರೇ ಘಟಕಗಳು ಇದ್ದು, ಇವು ನಿರಂತರವಾಗಿ ಕೆಲಸ ನಿರ್ವಹಿಸಲು ಸುಸ್ಧಿತಿಯಲ್ಲಿಡಬೇಕು. ವೈದ್ಯರ ಕೊರತೆಯಾದಲ್ಲಿ ಅದಕ್ಕೆ ಬೇಕಾದ ಎಲ್ಲ ಅನುಮೋದನೆಯನ್ನು ಸರಕಾರ ನೀಡಲಿದೆ. ಆದ್ದರಿಂದ ಸಾರ್ವಜನಿಕರು ಕೊರೊನಾ ಮೂರನೇ ಅಲೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 1 ಲಕ್ಷ ಸಾಲ ಮತ್ತು 50 ಸಾವಿರ ಸಹಾಯಧನ ಸೇರಿದಂತೆ ಒಟ್ಟು 1.50 ಲಕ್ಷ ನೀಡಲಾಗುತ್ತಿದೆ. ಆದರೆ ಇದನ್ನು ಚಿತ್ರದುರ್ಗ ನಗರದ ಸಹಕಾರ ಬ್ಯಾಂಕೊಂದರ ಮೂಲಕ ಬೇರೆ ತಾಲೂಕಿನ ಫಲಾನುಭವಿಗಳಿಗೂ ಸೌಲಭ್ಯ ನೀಡಲಾಗಿದೆ. ಮೂರು ಕೋಟಿ ರೂ.ಗಳಿಗೆ ಹೆಚ್ಚು ದುರುಪಯೋಗ ಆಗಿದ್ದು, ಸಮಗ್ರ ತನಿಖೆಯಾಗಬೇಕು ಎಂದರು.
ಸಭೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ. ನಾರಾಯಣಸ್ವಾಮಿ, ಶಾಸಕರಾದ ಜಿ. ಎಚ್. ತಿಪ್ಪಾರೆಡ್ಡಿ, ಪೂರ್ಣಿಮಾ ಕೆ. ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಡಾ. ಕೆ. ನಂದಿನಿ ದೇವಿ, ಎಸ್ಪಿ ಜಿ. ರಾಧಿಕಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಎಸ್‌ಟಿ ನಿಗಮ ಹಣ ದುರುಪಯೋಗ ತನಿಖೆಗೆ ಸೂಚನೆ
ಕೇಂದ್ರ ಸರಕಾರ ಗಿರಿ ಜನ ಉಪ ಯೋಜನೆಯಡಿ ಪರಿಶಿಷ್ಟ ವರ್ಗದವರಿಗೆ ಇಲಾಖೆ ಮೂಲಕ ಹೈನುಗಾರಿಕೆ ಮಾಡಲು ಹಸು ಖರೀದಿಗೆ ಪ್ರತಿ ಫಲಾನುಭವಿಗೆ 1.20 ಲಕ್ಷ ಮಂಜೂರು ಮಾಡಲಾಗಿದೆ. ಒಂದು ಹಸು ಖರೀದಿಗೆ 95,000 ರೂ., ಖರೀದಿ ವೇಳೆ ಮೇವಿಗಾಗಿ 10,000 ರೂ., ಸಾಗಾಣಿಕೆ ವೆಚ್ಚ 5000 ರೂ. ಹಾಗೂ ವಿಮಾ ವೆಚ್ಚಕ್ಕಾಗಿ 5,000 ರೂಗಳನ್ನು ವೆಚ್ಚ ಮಾಡಲಾಗಿದೆ. ಫಲಾನುಭವಿಗಳ ಆಯ್ಕೆ ಹಾಗೂ ಸೌಲಭ್ಯ ನೀಡುವ ವಿಷಯದಲ್ಲಿ ಜನಪ್ರತಿನಿಧಿಗಳ ಗಮನಕ್ಕೆ ತಾರದೇ ಯೋಜನೆಯ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಶಾಸಕ ಜಿ. ಎಚ್. ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ವಿಮಾ ಮೊತ್ತವನ್ನು ವಿಮಾ ಕಂಪನಿಗೆ ನೀಡದೇ ವ್ಯಕ್ತಿಗೆ ನೀಡಲಾಗಿದೆ. ಹಸು ಖರೀದಿಯ ಮೊತ್ತ, ಸಾಗಾಣಿಕೆ ವೆಚ್ಚದ ಮೊತ್ತವನ್ನು ಒಬ್ಬನೇ ವ್ಯಕ್ತಿಗೆ ನೀಡಲಾಗಿದೆ. ಈ ಯೋಜನೆಗೆ ಬಗ್ಗೆ ಯಾವುದೇ ಜನಪ್ರತಿನಿಧಿಯ ಗಮನಕ್ಕೆ ತರದಂತೆ ಅನುಷ್ಠಾನ ಮಾಡಲಾಗಿದೆ. ಯಾವ ಮಾನದಂಡದ ಆಧಾರದ ಮೇಲೆ ಈ ಎಲ್ಲ ಪ್ರಕ್ರಿಯೆ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸರಕಾರದ ಹಣ ದುರುಪಯೋಗಪಡಿಸಿಕೊಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಇದಕ್ಕೆ ದನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಕೆ. ಎಸ್. ನವೀನ್, ಈ ಮೊತ್ತಕ್ಕೆ ಗುಜರಾತಿನಿಂದ ಮುರಾ ತಳಿಯ ಹಸುವನ್ನು ಖರೀದಿಸಬಹುದು. ಪ್ರತಿ ನಿತ್ಯವೂ 30ಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದಿಸುತ್ತವೆ. ಸ್ಥಳೀಯವಾಗಿ ದುಬಾರಿ ವೆಚ್ಚಕ್ಕೆ ಹಸು ಖರೀದಿಸಲಾಗಿದೆ. ಈ ಮಾನದಂಡಗಳ ಕುರಿತು ಪರಿಶೀಲಿಸುವ ಅಗತ್ಯವಿದೆ ಎಂದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಈ ಬಗ್ಗೆ ಕೇಂದ್ರ ಕಚೇರಿ ನಿರ್ದೇಶಕರ ಹಂತದಲ್ಲಿ ತನಿಖೆ ನಡೆಯುತ್ತಿದೆ. ಯಾವ ಹಂತದಲ್ಲಿದೆ ಎಂಬುದು ತಿಳಿದು ಬಂದಿಲ್ಲ. ತನಿಖೆಯ ಬಗ್ಗೆ ಮುಂದಿನ ಸಭೆಯಲ್ಲಿ ವರದಿ ನೀಡಲಾಗುತ್ತಿದೆ ಎಂದು ಹೇಳಿದರು.
Read more
[wpas_products keywords=”deal of the day sale today offer all”]