Karnataka news paper

ಭಾರತಕ್ಕೆ ಶಾಕ್‌, ದ. ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಯಿಂದ ರೋಹಿತ್‌ ಔಟ್!


ಹೈಲೈಟ್ಸ್‌:

  • ದ್ವಿಪಕ್ಷೀಯ ಸರಣಿಗಳ ಸಲುವಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ.
  • ಅಭ್ಯಾಸದ ವೇಳೆ ಗಾಯಗೊಂಡ ರೋಹಿತ್‌ ಟೆಸ್ಟ್‌ ಸರಣಿಗೆ ಅಲಭ್ಯರಾಗಲಿದ್ದಾರೆ.
  • ಹಿಟ್‌ಮ್ಯಾನ್‌ ಸ್ಥಾನದಲ್ಲಿ ಪ್ರಿಯಾಂಕ್‌ ಪಾಂಚಾಲ್‌ ಭಾರತ ತಂಡ ಸೇರಿದ್ದಾರೆ.

ಬೆಂಗಳೂರು: ದಕ್ಷಿಣ ಆಫ್ರಿಕಾ ಪ್ರವಾಸವನ್ನು ಎದುರು ನೋಡುತ್ತಿರುವ ಟೀಮ್ ಇಂಡಿಯಾ ದೊಡ್ಡ ಆಘಾತ ಅನುಭವಿಸಿದ್ದು, ಅಭ್ಯಾಸದ ವೇಳೆ ಗಾಯಗೊಂಡಿರುವ ಭಾರತ ಟೆಸ್ಟ್‌ ತಂಡದ ನೂತನ ಉಪನಾಯಕ ರೋಹಿತ್‌ ಶರ್ಮಾ ಮುಂಬರುವ ಸರಣಿಯಿಂದ ಹೊರಗುಳಿಯಲಿದ್ದಾರೆ.

ಮುಂಬೈನಲ್ಲಿ ಭಾರತ ತಂಡದ ಅಭ್ಯಾಸ ಶಿಬಿರ ನಡೆಯುತ್ತಿದ್ದು, ಡಿಸೆಂಬರ್‌ 16ರಂದು ಹರಿಣಗಳ ನಾಡಿಗೆ ದಂಡೆತ್ತಿ ಹೊರಡಲಿದೆ. ಡಿ.26ರಿಂದ ಸೆಂಚೂರಿಯನ್‌ನಲ್ಲಿ 3 ಟೆಸ್ಟ್‌ಗಳ ಸರಣಿಯ ಪ್ರಥಮ ಪಂದ್ಯ ಶುರುವಾಗಲಿದ್ದು, ಬಿಸಿಸಿಐ ಈ ಸಲುವಾಗಿ ವಿರಾಟ್‌ ಕೊಹ್ಲಿ ಸಾರಥ್ಯದ 19 ಸದಸ್ಯರ ಭಾರತ ಟೆಸ್ಟ್‌ ತಂಡವನ್ನು ಪ್ರಕಟ ಮಾಡಿತ್ತು. ಈ ಸಂದರ್ಭದಲ್ಲಿ ಅಜಿಂಕ್ಯ ರಹಾನೆ ಬದಲು ರೋಹಿತ್‌ಗೆ ಉಪನಾಯಕನ ಪಟ್ಟ ನೀಡಿತ್ತು.

ಇನ್ನು ಸ್ಟಾರ್‌ಗಳ ನಿವೃತ್ತಿ ನಂತರ ಕಳೆಗುಯಂದಿರುವ ದಕ್ಷಿಣ ಆಫ್ರಿಕಾ ಎದುರು ಟೀಮ್ ಇಂಡಿಯಾ ಗೆಲ್ಲುವ ಫೇವರಿಟ್‌ ತಂಡವಾಗಿ ಕಣಕ್ಕಿಳಿಯುತ್ತಿದೆ. ಆದರೆ, ಹರಿಣಗಳ ನಾಡಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆಲುವನ್ನು ಎದುರು ನೋಡುತ್ತಿರುವ ಭಾರತ ತಂಡ ಈಗ ತನ್ನ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಸೇವೆ ಕಳೆದುಕೊಂಡು ಭಾರಿ ಹಿನ್ನಡೆ ಅನುಭವಿಸಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ತಂಡ ಈವರೆಗೆ ಆಡಿದ 20 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳನ್ನು ಮಾತ್ರವೇ ಗೆದ್ದಿದೆ.

ಹೊರಗಡೆ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲವೆಂದ ರೋಹಿತ್‌ ಶರ್ಮಾ!

ರೋಹಿತ್‌ ಸ್ಥಾನಕ್ಕೆ ಪ್ರಿಯಾಂಕ್ ಪಾಂಚಾಲ್‌!
ಈಗಾಗಲೇ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಇರುವ ಭಾರತ ‘ಎ’ ತಂಡದ ನಾಯಕತ್ವ ವಹಿಸಿಕೊಂಡಿದ್ದ ಗುಜರಾತ್‌ ಮೂಲದ ಬ್ಯಾಟ್ಸ್‌ಮನ್‌ ಪ್ರಿಯಾಂಕ್‌ ಪಾಂಚಾಲ್‌ ಅವರನ್ನು ರೋಹಿತ್‌ಗೆ ಬದಲಿ ಆಟಗಾರನನ್ನಾಗಿ ಟೆಸ್ಟ್‌ ತಂಡಕ್ಕೆ ಆಯ್ಕೆ ಮಾಡಿರುವುದಾಗಿ ಬಿಸಿಸಿಐ ಘೋಷಿಸಿದೆ.

“ಮುಂಬೈನಲ್ಲಿ ನಡೆಯುತ್ತಿದ್ದ ಅಭ್ಯಾಸ ಶಿಬಿರದಲ್ಲಿ ಎಡಗಾಲಿನ ತೊಡೆಯ ಸ್ನಾಯು ಸೆಳೆತದ ಸಮಸ್ಯೆಗೆ ರೋಹಿತ್‌ ತುತ್ತಾಗಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಿಂದ ಅವರು ಹೊರಗುಳಿಯಲಿದ್ದಾರೆ,” ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದೆ.

ರೋಹಿತ್‌ ಅಲಭ್ಯತೆ ಹಿನ್ನೆಲೆಯಲ್ಲಿ ಅಜಿಂಕ್ಯ ರಹಾನೆ ಭಾರತ ಟೆಸ್ಟ್‌ ತಂಡದ ಉಪನಾಯಕನಾಗಿ ಮುಂದುವರಿಯುವ ಸಾಧ್ಯತೆ ಇದ್ದು, ಟೀಮ್ ಇಂಡಿಯಾ ಆಯ್ಕೆ ಮಿತಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಬಾಕಿಯಿದೆ.

2017ರಲ್ಲಿ ಇದೇ ದಿನದಂದು 3ನೇ ಓಡಿಐ ದ್ವಿಶತಕ ಸಿಡಿಸಿ ಮೆರೆದಿದ್ದ ರೋಹಿತ್‌!

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಪರಿಷ್ಕೃತ ಭಾರತ ಟೆಸ್ಟ್‌ ತಂಡ ಹೀಗಿದೆ
ವಿರಾಟ್‌ ಕೊಹ್ಲಿ (ನಾಯಕ), ಕೆಎಲ್‌ ರಾಹುಲ್, ಮಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌, ಹನುಮ ವಿಹಾರಿ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ವೃದ್ಧಿಮಾನ್‌ ಸಹಾ (ವಿಕೆಟ್‌ಕೀಪರ್‌), ಆರ್‌ ಅಶ್ವಿನ್‌, ಜಯಂತ್‌ ಯಾದವ್‌, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಶಾರ್ದುಲ್‌ ಠಾಕೂರ್‌, ಮೊಹಮ್ಮದ್‌ ಸಿರಾಜ್‌, ಪ್ರಿಯಾಂಕ್ ಪಾಂಚಾಲ್.

ಟೆಸ್ಟ್‌ ಸರಣಿ ವೇಳಾಪಟ್ಟಿ
ಪ್ರಥಮ ಟೆಸ್ಟ್‌: ಡಿಸೆಂಬರ್‌ 26-30, ಸೆಂಚೂರಿಯನ್‌
ದ್ವಿತೀಯ ಟೆಸ್ಟ್‌: ಜನವರಿ 03-07, ಜೊಹಾನ್ಸ್‌ಬರ್ಗ್‌
ತೃತೀಯ ಟೆಸ್ಟ್‌: ಜನವರಿ 11-15, ಕೇಪ್‌ ಟೌನ್‌

ವಿಶ್ವಕಪ್‌ ಗೆಲ್ಲಲು ತಾನು ರೂಪಿಸಿರುವ ಮಾಸ್ಟರ್‌ ಪ್ಲಾನ್‌ ತಿಳಿಸಿದ ರೋಹಿತ್‌!

ದಕ್ಷಿಣ ಆಫ್ರಿಕಾ ತಂಡ ಹೀಗಿದೆ
ಡೀನ್‌ ಎಲ್ಗರ್‌ (ನಾಯಕ), ತೆಂಬಾ ಬವೂಮ, ಕ್ವಿಂಟನ್‌ ಡಿ’ಕಾಕ್‌ (ವಿಕೆಟ್‌ಕೀಪರ್‌), ಕಗಿಸೊ ರಬಾಡ, ಸರೆಲ್‌ ಎರ್ವಿ, ಬ್ಯೂರಾನ್‌ ಹೆಂಡ್ರಿಕ್ಸ್‌, ಜಾರ್ಜ್‌ ಲಿಂಡೆ, ಕೇಶವ್‌ ಮಹಾರಾಜ್, ಲುಂಗಿ ಎನ್ಗಿಡಿ, ಏಡೆನ್‌ ಮಾರ್ಕ್ರಮ್, ವಿಯಾನ್‌ ಮುಲ್ಡರ್‌, ಎನ್ರಿಕ್‌ ನೊರ್ಕಿಯ, ಕೀಗನ್‌ ಪೀಟರ್ಸನ್‌, ರಾಸಿ ವ್ಯಾನ್‌ ಡೆರ್‌ ಡುಸೆನ್, ಕೈಲ್‌ ವೆರ್ರೆಯೆನ್, ಮಾರ್ಕೊ ಯೆನ್ಸೆನ್‌, ಗ್ಲೆನ್ಟನ್‌ ಸ್ಟುರ್ಮನ್, ಪ್ರೆನೆಲಾನ್‌ ಸುಬ್ರಾಯೆನ್‌, ಸಿಸಾಂಡ ಮಗಾಲ, ರಯಾನ್‌ ರಿಕೆಲ್ಟನ್‌, ಡುವಾನ್‌ ಓಲಿವರ್‌.



Read more