Online Desk
ರಾಮನಗರ: ಹೈಕೋರ್ಟ್ ಆದೇಶ ಏನು ಬರುತ್ತದೋ ಗೊತ್ತಿಲ್ಲ, ನಾವು ಪಾದಯಾತ್ರೆ ಮುಂದುವರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಉತ್ತರಿಸಿದ್ದಾರೆ, ಈ ಮೂಲಕ ತಮಗೂ, ಹೈಕೋರ್ಟ್ ನಲ್ಲಿ ಹಾಕಿರುವ ಕೇಸಿಗೂ ಏನೂ ಸಂಬಂಧವಿಲ್ಲ, ಪಾದಯಾತ್ರೆ ಮುಂದುವರಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಂತಿದೆ.
ಇಂದು ಹೈಕೋರ್ಟ್ ನಲ್ಲಿ ಪಾದಯಾತ್ರೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತು ವಿಚಾರಣೆ ನಡೆಸಿದ ವಿಭಾಗೀಯ ಪೀಠ ಕೆಪಿಸಿಸಿಗೆ ಪಾದಯಾತ್ರೆಯ ಔಚಿತ್ಯ ಪ್ರಶ್ನಿಸಿ ನೊಟೀಸ್ ಜಾರಿ ಮಾಡಿದೆ. ಈ ಬಗ್ಗೆ ಸಿದ್ದರಾಮಯ್ಯನವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ಸರ್ಕಾರದ ಬೇಜವಾಬ್ದಾರಿಯಿಂದ ಕೊರೋನಾ ಕೇಸು ಜಾಸ್ತಿಯಾಗ್ತಿದೆ, ನಮ್ಮಿಂದಾಗಿ ಅಲ್ಲ ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಕಾಂಗ್ರೆಸ್ ವತಿಯಿಂದ ಮೇಕೆದಾಟು ಪಾದಯಾತ್ರೆಗೆ ಹೈಕೋರ್ಟ್ ಗರಂ: ಕೆಪಿಸಿಸಿ, ರಾಜ್ಯ ಸರ್ಕಾರಕ್ಕೆ ನೊಟೀಸ್
ನಾವು ಜನರ ನೀರಿನ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟವಿದು, ಪ್ರತಿದಿನ ಹೆಚ್ಚೆಚ್ಚು ಜನ ಭಾಗವಹಿಸುತ್ತಿದ್ದಾರೆ. ಜನರ ಉತ್ಸಾಹ ಹೆಚ್ಚಾಗುತ್ತಿದೆ. ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದೆ ಎಂದು ಭಾವನೆಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಅನಗತ್ಯವಾಗಿ ಕುಡಿಯುವ ನೀರಿನ ಯೋಜನೆಯಲ್ಲಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.
ಕೊರೋನಾ ಬರಲು ಬಿಜೆಪಿ ಸರ್ಕಾರದ ಬೇಜವಾಬ್ದಾರಿಯೇ ಕಾರಣ, ಇಂದು ಕೊರೋನಾ ಮೂರನೇ ಅಲೆ ಬರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರಿಯಾದ ಹೊತ್ತಿನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದದ್ದೇ ಕಾರಣ ಎಂದರು.
ನಮ್ಮ ವಕೀಲರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ, ಸರ್ಕಾರದ ಬೇಜವಬ್ದಾರಿಯಿಂದ, ಉದಾಸೀನತೆಯಿಂದ ಕೋವಿಡ್ ಕೇಸು ಹೆಚ್ಚಾಗುತ್ತಿದೆಯಲ್ಲವೇ ಹೊರತು ಕಾಂಗ್ರೆಸ್ ನ ಪಾದಯಾತ್ರೆಯಿಂದಲ್ಲ ಎಂದರು. ಇನ್ನು ಡಿ ಕೆ ಶಿವಕುಮಾರ್ ಅವರನ್ನು ಕೇಳಿದಾಗ ಕೈಮುಗಿದು ಮಾತನಾಡುವುದಿಲ್ಲ ಎಂದು ಸನ್ನೆ ಮಾಡಿ ಮುಂದೆ ಪಾದಯಾತ್ರೆಯಲ್ಲಿ ಮುಂದೆ ಸಾಗಿದರು.
Read more
[wpas_products keywords=”deal of the day”]