Karnataka news paper

ಮೆಗಾ ಆಕ್ಷನ್‌ನಲ್ಲಿ ಈ 5 ಸ್ಪಿನ್ನರ್‌ಗಳಿಗೆ ಹಣದ ಹೊಳೆ ಹರಿಯೋ ಸಾಧ್ಯತೆ!


ಬೆಂಗಳೂರು: ಹದಿನೈದನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಎರಡು ಹೊಸ ತಂಡಗಳು ಸ್ಪರ್ಧೆಗೆ ಇಳಿಯುತ್ತಿದ್ದು, ಈ ಸಲುವಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ದೊಡ್ಡ ಮಟ್ಟದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲು ಯೋಜನೆ ರೂಪಿಸಿದೆ.

ಅಂದಹಾಗೆ ಈಗಾಗಲೇ ಹಾಲಿ 8 ಫ್ರಾಂಚೈಸಿ ತಂಡಗಳು ಐಪಿಎಲ್ 2022 ಟೂರ್ನಿಗೆ ತಮ್ಮಲ್ಲೇ ಕಾಯ್ದುಕೊಂಡ ಆಟಗಾರರ ಅಂತಿಮ ಪಟ್ಟಿ ಪ್ರಕಟ ಮಾಡಿದ್ದು, ಹಲವು ಸ್ಟಾರ್‌ ಆಟಗಾರರನ್ನು ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆಗೆ ಬಿಟ್ಟುಕೊಟ್ಟಿವೆ. ಐಪಿಎಲ್‌ ಮೆಗಾ ಆಕ್ಷನ್‌ 2022ರ ಜನವರಿಯ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಈ ಬಾರಿ ಟೂರ್ನಿ ಭಾರತದ ಆತಿಥ್ಯದಲ್ಲೇ ನಡೆಯುವ ಸಾಧ್ಯತೆ ಇದೆ. ಕಳೆದ ವರ್ಷ ಟೂರ್ನಿಯ ಅರ್ಧದಷ್ಟು ಪಂದ್ಯಗಳನ್ನು ಭಾರತದಲ್ಲಿ ಆಯೋಜಿಸಿ ಬಳಿಕ ಕೊರೊನಾ ವೈರಸ್‌ ಅಬ್ಬರದ ಕಾರಣ ಅರ್ಧಕ್ಕೆ ನಿಲ್ಲಿಸಲಾಗಿತ್ತು. ನಂತರ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಆತಿಥ್ಯದಲ್ಲಿ ಎರಡನೇ ಚರಣ ಆಯೋಜಿಸಲಾಯಿತು.

IPL ಪ್ಲೇಯರ್ಸ್‌ ರಿಟೆನ್ಷನ್: ಎಲ್ಲ 8 ತಂಡಗಳ ಸಂಪೂರ್ಣ ವಿವರ ಇಲ್ಲಿದೆ!

ಈ ಬಾರಿ ಟೂರ್ನಿ ಭಾರತದಲ್ಲೇ ನಡೆಯಲಿ ಅಥವಾ ಯುಎಇನಲ್ಲೇ ಆಯೋಜನೆ ಆಗಲಿ ಪಿಚ್‌ಗಳು ಹೆಚ್ಚು ಸ್ಪಿನ್ನರ್‌ಗಳಿಗೆ ನೆರವಾಗುವ ಕಾರಣ, ಫ್ರಾಂಚೈಸಿಗಳು ಹರಾಜಿನಲ್ಲಿ ಪರಿಣಾಮಕಾರಿ ಸ್ಪಿನ್ನರ್‌ಗಳ ಖರೀದಿಗೆ ಹಣದ ಹೊಳೆ ಹರಿಸುವ ಸಾಧ್ಯತೆ ಇದೆ. ಅಂತಹ 5 ಮಾಂತ್ರಿಕ ಸ್ಪಿನ್ನರ್‌ಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

​1. ಜೇಕ್‌ ಲಿನ್ಟೊಟ್‌

1-

ಇಂಗ್ಲೆಂಡ್‌ ಕ್ರಿಕೆಟ್‌ನಲ್ಲಿ ಕ್ರಾಂತಿಕಾರಿ ಸುಧಾರಣೆ ಆಗಿದ್ದು ಪ್ರತಿಭಾನ್ವಿತ ಆಟಗಾರರು ಹೊರಹೊಮ್ಮುತ್ತಲೇ ಇದ್ದಾರೆ. ಅದರಲ್ಲು ಟಿ20 ಕ್ರಿಕೆಟ್‌ನಲ್ಲಿ ಹೊಸ ತಾರೆಗಳ ಉಗಮವಾಗುತ್ತಿದ್ದು, ರಿಸ್ಟ್‌ ಸ್ಪಿನ್ನರ್‌ ಜೇಕೊಬ್‌ ಬೆನೆಡಿಕ್ಟ್‌ ಲಿನ್ಟೊಟ್‌ ಕೂಡ ಇದರಲ್ಲಿ ಒಬ್ಬರು. ಹ್ಯಾಂಪ್‌ಶೈರ್‌ ಮೂಲದ ಚೈನಾಮನ್‌ ಸ್ಪಿನ್ನರ್‌ ಅತ್ಯಂತ ಸ್ಥಿರ ಪ್ರದರ್ಶನ ಕಾಯ್ದುಕೊಂಡಿರುವ ಬೌಲರ್‌ ಆಗಿದ್ದು, ತಮ್ಮ ಬತ್ತಳಿಕೆಯಲ್ಲಿ ದೂಸ್ರಾ-ತೀಸ್ರಾ ಸೇರಿದಂತೆ ವಿವಿಧ ಅಸ್ತ್ರಗಳನ್ನು ಹೊಂದಿದ್ದಾರೆ.

28 ವರ್ಷದ ಆಟಗಾರ 2017ರಲ್ಲಿ ನ್ಯಾಟ್‌ವೆಸ್ಟ್‌ ಟಿ20 ಬ್ಲಾಸ್ಟ್‌ ಟೂರ್ನಿ ಮೂಲಕ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, ಇಲ್ಲಿಯವರೆಗೆ 38 ಪಂದ್ಯಗಳನ್ನಾಡಿ 44 ವಿಕೆಟ್‌ಗಳನ್ನು ಪಡೆದಿದ್ದಾರೆ. 2018ರಲ್ಲಿ ಭಾರತ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ, ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ಗಳು ಟೀಮ್ ಇಂಡಿಯಾದ ಕುಲ್ದೀಪ್‌ ಯಾದವ್‌ ಎದುರು ಬ್ಯಾಟ್‌ ಮಾಡಲು ಸಿದ್ದತೆ ಕೈಗೊಳ್ಳಲು ಲಿನ್ಟೋಟ್‌ ಸೇವೆಯನ್ನು ಬಳಸಿಕೊಂಡಿತ್ತು.

ಇನ್ನು ಜೇಕ್‌ ಈವರೆಗೆ ಯಾವುದೇ ದೊಡ್ಡ ಮಟ್ಟದ ಟಿ20 ಲೀಗ್‌ಗಳಲ್ಲಿ ಆಡಿಲ್ಲ. ಬ್ಯಾಟ್ಸ್‌ಮನ್‌ಗಳಿಗೆ ಅಪರಿಚಿತರಾದ ಅವರು ಐಪಿಎಲ್‌ನಲ್ಲಿ ಕಬ್ಬಿಣದ ಕಡಲೆ ಆಗಬಲ್ಲರು. ಹೀಗಾಗಿ ಈ ಸ್ಪಿನ್ನರ್‌ನ ಖರೀದಿಗೆ ಫ್ರಾಂಚೈಸಿಗಳು ಮುಗಿ ಬೀಳುವ ಸಾಧ್ಯತೆ ಇದೆ.

​2. ಮಹೀಶ್‌ ತೀಕ್ಷಣ

2-

ಶ್ರೀಲಂಕಾ ತಂಡದ ಯುವ ಸ್ಪಿನ್ನರ್‌ ಮಹೀಶ್‌ ತೀಕ್ಷಣ ಕೂಡ ಈ ಬಾರಿಯ ಹರಾಜಿನಲ್ಲಿ ಕೇಂದ್ರಬಿಂದುವಾಗಿದ್ದಾರೆ. ಬಲಗೈ ಆಫ್‌ ಸ್ಪಿನ್ನರ್‌ ಶ್ರೀಲಂಕಾದ ಭವಿಷ್ಯದ ಸ್ಪಿನ್‌ ಮಾಂತ್ರಿಕ ಎಂದೇ ಗುರುತಿಸಿಕೊಂಡಿದ್ದಾರೆ. ವೆಸ್ಟ್‌ ಇಂಡೀಸ್‌ ತಾರೆ ಸುನಿಲ್‌ ನರೈನ್‌ ಮಾದರಿ ಬೌಲಿಂಗ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ದಕ್ಷೀನ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವರು ಶ್ರೀಲಂಕಾ ತಂಡಕ್ಕೆ ಪದಾರ್ಪಣೆ ಮಾಡಿದರು.

ಮಾಂತ್ರಿಕ ಸ್ಪಿನ್ನರ್‌ ಈವರೆಗೆ 26 ಟಿ20 ಪಂದ್ಯಗಳನ್ನು ಆಡಿ 22 ವಿಕೆಟ್‌ಗಳನ್ನು ಪಡೆದಿದ್ದಾರೆ. 21 ವರ್ಷದ ಯುವ ಪ್ರತಿಭೆ ಶ್ರೀಲಂಕಾದ ಮಾಜಿ ಸ್ಪಿನ್ನರ್‌ ಅಜಂತಾ ಮೆಂಡಿಸ್‌ ಅವರಂತೆಯೇ ಬೌಲಿಂಗ್‌ ಮಾಡಬಲ್ಲವರಾಗಿದ್ದಾರೆ. ಹೀಗಾಗಿ ಐಪಿಎಲ್‌ ಫ್ರಾಂಚೈಸಿಗಳು ಈ ಸ್ಪಿನ್ನರ್‌ ಕಡೆಗೆ ಕಣ್ಣಿಟ್ಟಿರುವುದು ನಿಜ. ಯಾವ ತಂಡಕ್ಕೆ ಎಷ್ಟು ಕೋಟಿ ರೂ. ಮೊತ್ತ ಪಡೆದು ಸೇರುತ್ತಾರೆಂಬ ಕುತೂಹಲ ಹೆಚ್ಚಾಗಿದೆ.

​3. ನೂರ್‌ ಅಹ್ಮದ್‌

3-

ಅಫಘಾನಿಸ್ತಾನದಿಂದ ಮತ್ತೊಬ್ಬ ಸ್ಟಾರ್‌ ಸ್ಪಿನ್ನರ್‌ನ ಉಗಮವಾಗಿದೆ. 16 ವರ್ಷದ ಯುವ ತಾರೆ ನೂರ್‌ ಅಹ್ಮದ್, 2020ರ ಸಾಲಿನ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸೇಂಟ್‌ ಲೂಸಿಯಾ ಝೂಕ್ಸ್‌ ತಂಡದ ಪರ ಆಡಿದ್ದರು. ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಮೆಲ್ಬೋರ್ನ್‌ ರೆನೆಗೇಡ್ಸ್‌ ತಂಡ ಇವರನ್ನು ಆಯ್ಕೆ ಮಾಡಿತ್ತು. ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಕರಾಚಿ ಕಿಂಗ್ಸ್‌ ಪರ ಆಡಿದ ಅನುಭವ ಇರುವ ನೂರ್‌ ಅಹ್ಮದ್‌, ಈಗ ಐಪಿಎಲ್‌ಗೆ ಪದಾರ್ಪಣೆ ಮಾಡುವುದನ್ನು ಎದುರು ನೋಡುತ್ತಿದ್ದಾರೆ.

ಚೈನಾಮನ್‌ ಶೈಲಿಯ ಸ್ಪಿನ್ನರ್‌ 25 ಟಿ20 ಪಂದ್ಯಗಳಲ್ಲಿ ಅಷ್ಟೇ ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ಜುಲೈನಲ್ಲಿ ಪಾಕಿಸ್ತಾನ ವಿರುದ್ಧದ ಟಿ20 ಸರಣಿಗೆ ಅಫಘಾನಿಸ್ತಾನ ತಂಡಕ್ಕೂ ಆಯ್ಕೆಯಾಗಿದ್ದರು. 2022ರ ಸಾಲಿನ ಕಿರಿಯರ ಟಿ20 ವಿಶ್ವಕಪ್‌ಗೂ ಆಯ್ಕೆಯಾಗಿದ್ದಾರೆ. ಹೀಗಾಗಿ ಐಪಿಎಲ್‌ನಲ್ಲೂ ಫ್ರಾಂಚೈಸಿಗಳು ಆಸಕ್ತಿ ತೋರುವ ಸಾಧ್ಯತೆ ಇದೆ.

​4. ಜೊನಾಥನ್‌ ಕುಕ್‌

4-

ನ್ಯೂ ಸೌತ್‌ ವೇಲ್ಸ್‌ ಮೂಲದ 31 ವರ್ಷದ ಲೆಗ್‌ ಸ್ಪಿನ್ನರ್‌ ಇತ್ತೀಚೆಗೆ ಭಾರಿ ಸದ್ದು ಮಾಡಿದ್ದಾರೆ. 2018-19ರ ಸಾಲಿನ ಬಿಗ್‌ ಬ್ಯಾಷ್‌ ಲೀಗ್‌ ಟೂರ್ನಿಯಲ್ಲಿ ತಮ್ಮ 29ನೇ ವಯಸ್ಸಿಗೆ ಟಿ20 ಕ್ರಿಕೆಟ್‌ ವೃತ್ತಿ ಬದುಕು ಆರಂಭಿಸಿದ ಜಕೊನಾಥನ್‌ ಡೇವಿಡ್‌ ಕುಕ್‌, ಸಿಡ್ನಿ ಥಂಡರ್ಸ್‌ ಪರ ಮಿಂಚಿದ್ದರು.

ಈವರೆಗೆ 24 ಪಂದ್ಯಗಳಲ್ಲಿ ಅಷ್ಟೇ ಟಿ20 ವಿಕೆಟ್‌ಗಳನ್ನು ಪಡೆದಿರುವ ಕುಕ್‌, 25ರ ಗಮನಾರ್ಹ ಸರಾಸರಿ ಹೊಂದಿದ್ದಾರೆ. ನಿರ್ಣಾಯಕ ಘಟ್ಟದಲ್ಲಿ ವಿಕೆಟ್‌ ಪಡೆಯುವ ಕಲೆ ಅವರಲ್ಲಿದೆ. ಐಪಿಎಲ್‌ನ ಹೊಸ ತಂಡಗಳಿಗೆ ಕುಕ್ ಉತ್ತಮ ಆಯ್ಕೆಯಾಗಬಲ್ಲರು. ಹೀಗಾಗಿ ಅನುಭವಿ ಲೆಗ್‌ ಸ್ಪಿನ್ನರ್‌ಗೆ ಯಾವ ರೀತಿಯ ಬೇಡಿಕೆ ಇದೆ ಎಂಬುದನ್ನು ಕಾದು ನೋಡಬೇಕು.

​5. ಹೇಡೆನ್‌ ವಾಲ್ಷ್‌ ಜೂನಿಯರ್‌

5-

ಆಂಟಿಗ-ಅಮೆರಿಕ ಮೂಲದ ವೆಸ್ಟ್‌ ಇಂಡೀಸ್‌ವ ಆಟಗಾರ ಹೇಡೆನ್‌ ವಾಲ್ಷ್‌ ಜೂನಿಯರ್‌ ಈಗಾಗಗಲೇ ವಿಂಡೀಸ್‌ ಪರ ಆಡಿ ಗಮನ ಸೆಳೆದಿರುವ ಆಟಗಾರ. ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ಅನುಭವ ಹೊಂದಿರುವ ಹೇಡೆನ್‌, ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸೇಂಟ್‌ ಕಿಟ್ಸ್‌ ಮತ್ತು ನೆವೀಸ್‌ ಪೇಟ್ರಿಯಟ್ಸ್‌ ತಂಡದ ಪರ 2018ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

29 ವರ್ಷದ ಆಟಗಾರ ಈವರೆಗೆ 55 ಪಂದ್ಯಗಳನ್ನು ಆಡಿದ್ದು, 53 ಟಿ20 ವಿಕೆಟ್‌ಗಳನ್ನು ಪಡೆದಿದ್ದಾರೆ. 19ಕ್ಕೆ 5 ವಿಕೆಟ್‌ ಪಡೆದಿರುವುದು ಟಿ20 ಕ್ರಿಕೆಟ್‌ನಲ್ಲಿ ಅವರ ಶ್ರೇಷ್ಠ ಬೌಲಿಂಗ್‌ ಪ್ರದರ್ಶನವಾಗಿದೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮೂಲಕವೂ ನೆರವಾಗುವ ಸಾಮರ್ಥ್ಯ ಅವರದ್ದು. ಭಾರತ ವಿರುದ್ಧವೂ ಹೇಡೆನ್‌ ಆಡಿದ್ದಾರೆ ಆದರೂ, ಹೆಚ್ಚಿನವರಿಗೆ ಇವರ ಪರಿಚಯವಿಲ್ಲ. ಹೀಗಾಗಿ ಹೊಸ ಸ್ಪಿನ್ನರ್‌ ಐಪಿಎಲ್‌ನಲ್ಲಿ ಪರಿಣಾಮಕಾರಿ ಸಾಬೀತಾಗಬಲ್ಲರು.



Read more