Karnataka news paper

79 ರನ್‌ ಗಳಿಸಿದ ಕೊಹ್ಲಿ, ಅಹಂಕಾರ ಬಿಟ್ಟು ಬ್ಯಾಟ್‌ ಮಾಡಿದ್ದಾರೆ: ಗಂಭೀರ್‌!


ಹೈಲೈಟ್ಸ್‌:

  • ಭಾರತ-ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಕ್ರಿಕೆಟ್ ಸರಣಿ.
  • ಕೇಪ್‌ ಟೌನ್‌ನ ನ್ಯೂಲೆಂಡ್ಸ್‌ನಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಟೆಸ್ಟ್‌.
  • ಮೊದಲ ಇನಿಂಗ್ಸ್‌ನಲ್ಲಿ ಜವಾಬ್ದಾರಿಯುತ 79 ರನ್‌ ಗಳಿಸಿದ ವಿರಾಟ್ ಕೊಹ್ಲಿ.

ಕೇಪ್‌ ಟೌನ್‌: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿನ ನ್ಯೂಲೆಂಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರು ಟೆಸ್ಟ್‌ಗಳ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಸಂಪೂರ್ಣ ವಿಭಿನ್ನ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ.

ಹೊಸ ವರ್ಷದಲ್ಲಿ ಶತಕದೊಂದಿಗೆ ಆರಂಭಿಸಬೇಕು ಎಂಬ ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಮಾಡಿದ ವಿರಾಟ್‌, ತಮ್ಮ ಎರಡನೇ ಅತ್ಯಂತ ಮಂದಗತಿಯ ಟೆಸ್ಟ್‌ ಹಾಫ್‌ ಸೆಂಚುರಿ ಬಾರಿಸಿದರು. ಒಂದೆಡೆ ವಿಕೆಟ್‌ ಉದುರುತ್ತಿದ್ದರೂ, ಮತ್ತೊಂದೆಡೆ ಕ್ರೀಸ್‌ನಲ್ಲಿ ಭದ್ರವಾಗಿ ಬೇರೂರಿದ್ದ ವಿರಾಟ್‌ 159 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಕೊನೆಗೆ 205 ಎಸೆತಗಳಲ್ಲಿ 12 ಫೋರ್‌ ಮತ್ತೊಂದು ಸಿಕ್ಸರ್‌ನೊಂದಿಗೆ 79 ರನ್‌ಗಳಿಗೆ ವಿಕೆಟ್‌ ಕೈಚೆಲ್ಲಿದರು.

ಇದು ಕಳೆದ 23 ಟೆಸ್ಟ್‌ ಇನಿಂಗ್ಸ್‌ಗಳಲ್ಲಿ ವಿರಾಟ್‌ ಕೊಹ್ಲಿ ಅವರ ಶ್ರೇಷ್ಠ ಸ್ಕೋರ್‌ ಆಗಿದೆ. ಈ ಬಗ್ಗೆ ಮಾತನಾಡಿದ ಭಾರತ ತಂಡದ ಮಾಜಿ ಓಪನರ್‌ ಗೌತಮ್‌ ಗಂಭೀರ್‌, ಲಯಕ್ಕೆ ಮರಳಲು ಕೊಹ್ಲಿ ಇಂದು ತಮ್ಮ ಅಹಂಕಾರ ಬದಿಗಿಟ್ಟು ಬ್ಯಾಟಿಂಗ್‌ ಮಾಡಿದ್ದಾರೆ ಎಂದು ಹೇಳಿದ್ದಾರೆ.

‘ಕೊಹ್ಲಿ ಆತ್ಮ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ’ ಎಂದ ಮಾಂಜ್ರೇಕರ್!

ಮೊದಲ ಟೆಸ್ಟ್‌ನಲ್ಲಿ 35 ಮತ್ತು 18 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದ ವಿರಾಟ್‌ ಕೊಹ್ಲಿ, ಉತ್ತಮ ಆರಂಭ ಪಡೆದರೂ ಆಫ್‌ ಸ್ಟಂಪ್‌ನಿಂದ ಆಚೆಯಿದ್ದ ಚೆಂಡನ್ನು ಅನಗತ್ಯವಾಗಿ ಕೆಣಕಿ ವಿಕೆಟ್‌ ಒಪ್ಪಿಸುವುದನ್ನು ರೂಢಿಸಿಕೊಂಡಿದ್ದರು. ಈ ಸಮಸ್ಯೆಯಿಂದ ಹೊರಬಂದಂತೆ ಕಂಡ ಕೊಹ್ಲಿ, ಕೇಪ್‌ ಟೌನ್‌ ಪಂದ್ಯದಲ್ಲಿ ಅತ್ಯಂತ ಶಿಸ್ತಿನ ಬ್ಯಾಟಿಂಗ್‌ ನಡೆಸಿ, ಮೊದಲ ಇನಿಂಗ್ಸ್‌ನಲ್ಲಿ ತಂಡಕ್ಕೆ 223 ರನ್‌ಗಳ ಸಾಧಾರಣ ಮೊತ್ತ ತಂದುಕೊಟ್ಟರು.

“ವಿರಾಟ್‌ ಖುದ್ದಾಗಿ ಈ ಮಾತನ್ನು ಹಲವು ಬಾರಿ ಹೇಳಿದ್ದಾರೆ. ಇಂಗ್ಲೆಂಡ್‌ ಪ್ರವಾಸದಲ್ಲಿ ಇದ್ದಾಗ ಅಂಕಾರವನ್ನು ಮನೆಯಲ್ಲೇ ಬಿಟ್ಟು ಬರಬೇಕು ಎಂದು ಹೇಳುತ್ತಿದ್ದರು. ಇಂದು ದಕ್ಷಿಣ ಆಫ್ರಿಕಾ ಎದುರು ಕೊಹ್ಲಿ ತಮ್ಮ ಅಂಕಾರವನ್ನು ತಮ್ಮ ಕಿಟ್‌ ಬ್ಯಾಗ್‌ನಲ್ಲೇ ಬಿಟ್ಟುಬಂದು ಬ್ಯಾಟ್‌ ಮಾಡಿದ್ದಾರೆ. ಅವರ ಈ ಆಟ ಇಂಗ್ಲೆಂಡ್‌ ನೆಲದಲ್ಲಿ ಅವರು ಕಂಡ ಯಶಸ್ಸನ್ನು ಸ್ಮರಿಸುವಂತೆ ಮಾಡಿದೆ. ಅಲ್ಲಿ ಅವರು ಆಫ್‌ ಸ್ಟಂಪ್‌ನಿಂದ ಆಚೆಯಿದ್ದ ಎಸೆತಗಳನ್ನು ಬಿಟ್ಟು ಆಟವಾಡಿದ್ದರು,” ಎಂದು ಗಂಭೀರ್‌ ಹೇಳಿದ್ದಾರೆ.

ಹೋರಾಟದ 79 ರನ್‌ ಗಳಿಸಿ ದ್ರಾವಿಡ್‌ ದಾಖಲೆ ಮುರಿದ ವಿರಾಟ್ ಕೊಹ್ಲಿ!

“ಇಲ್ಲು ಕೂಡ ಆಫ್‌ ಸ್ಟಂಪ್‌ನಿಂದ ಆಚೆಯಿದ್ದ ಎಸೆತಗಳನ್ನು ಬಿಟ್ಟು ಆಡಿದ್ದಾರೆ. ಈ ಪ್ರಯತ್ನದಲ್ಲಿ ಹಲವು ಬಾರಿ ಬೀಟನ್‌ ಆದರು. ಆದರೂ ತಮ್ಮ ಅಹಂಕಾರ ಮರೆತು ಬ್ಯಾಟ್‌ ಮಾಡಿದರು. ಪ್ರತಿ ಎಸೆತದಲ್ಲೂ ಆಕ್ರಮಣಕಾರಿ ಆಟವಾಡುವ ಪ್ರಯತ್ನ ಮಾಡಲಿಲ್ಲ,” ಎಂದು ಕ್ಯಾಪ್ಟನ್‌ ಕೊಹ್ಲಿ ಆಟವನ್ನು ಗಂಭೀರ್‌ ಶ್ಲಾಘಿಸಿದ್ದಾರೆ.

“ಬೌಲರ್‌ಗಳಿಗೆ ನೆರವಾಗುವ ಪರಿಸ್ಥಿತಿಯಲ್ಲಿ ಮೊದಲ ದಿನ ಬ್ಯಾಟ್‌ ಮಾಡುವಾಗ ಎಚ್ಚರಿಕೆಯಿಂದ ಬ್ಯಾಟ್‌ ಮಾಡಬೇಕಾಗುತ್ತದೆ. ದಕ್ಷಿಣ ಆಫ್ರಿಕಾದ ಬೌಲರ್‌ಗಳು ಭರ್ಜರಿ ದಾಳಿ ನಡೆಸುತ್ತಿರುವಾಗ ರಕ್ಷಣಾತ್ಮಕ ಆಟವೇ ಸೂಕ್ತ ಮಾರ್ಗ. ಸಾಮಾನ್ಯವಾಗಿ ಕೊಹ್ಲಿ ಕವರ್ಸ್‌ ವಿಭಾಗದಲ್ಲಿ ಹೆಚ್ಚು ರನ್‌ ಗಳಿಸುತ್ತಾರೆ. ಆದರೆ, ಅದರ ಮೇಲೆ ನಿಯಂತ್ರಣವಿಟ್ಟು ಈ ಬಾರಿ ಲೆಗ್‌ ಸೈಡ್‌ನಲ್ಲಿ ಹೆಚ್ಚು ರನ್‌ ತೆಗೆದರು. ಇಂಗ್ಲೆಂಡ್‌ನಲ್ಲಿ ಅವರು ಇದೇ ರೀತಿಯ ಆಟವಾಡಿದ್ದರು,” ಎಂದು ಗಂಭೀರ್‌ ಹೇಳಿದ್ದಾರೆ.

‘ಭಾರತ ತಂಡವನ್ನು ಮಣಿಸುವುದು ನನ್ನ ವೃತ್ತಿ ಜೀವನದ ದೊಡ್ಡ ಗೆಲುವು’ ಎಲ್ಗರ್‌!

ಕೇಪ್‌ ಟೌನ್‌ ಟೆಸ್ಟ್‌ ಪಂದ್ಯದ ಸಂಕ್ಷಿಪ್ತ ಸ್ಕೋರ್‌ (ಮೊದಲ ದಿನದ ಅಂತ್ಯಕ್ಕೆ)
ಭಾರತ: ಮೊದಲ ಇನಿಂಗ್ಸ್‌ 77.3 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲ್‌ಔಟ್‌ (ಕೆಎಲ್ ರಾಹುಲ್ 12, ಮಯಾಂಕ್‌ ಅಗರ್ವಾಲ್‌ 15, ಚೇತೇಶ್ವರ್‌ ಪೂಜಾರ 43, ವಿರಾಟ್‌ ಕೊಹ್ಲಿ 79, ರಿಷಭ್ ಪಂತ್‌ 27; ಕಗಿಸೊ ರಬಾಡ 73ಕ್ಕೆ 4, ಮಾರ್ಕೊ ಯೆನ್ಸನ್‌ 55ಕ್ಕೆ 3, ಡುವಾನ್‌ ಓಲಿವಿಯರ್‌ 42ಕ್ಕೆ 1, ಕೇಶವ್‌ ಮಹಾರಾಜ್‌ 14ಕ್ಕೆ 1, ಲುಂಗಿ ಎನ್ಗಿಡಿ 33ಕ್ಕೆ 1).
ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್‌ 8 ಓವರ್‌ಗಳಲ್ಲಿ 1 ವಿಕೆಟ್‌ಗೆ 17 ರನ್‌ (ಡೀನ್‌ ಎಲ್ಗರ್‌ 3, ಏಡೆನ್‌ ಮಾರ್ಕ್ರಮ್‌ 8*, ಕೇಶವ್‌ ಮಹಾರಾಜ್‌ 6*; ಜಸ್‌ಪ್ರೀತ್‌ ಬುಮ್ರಾ 0ಕ್ಕೆ 1).



Read more

[wpas_products keywords=”deal of the day sale today offer all”]