Sharmila B | Vijaya Karnataka | Updated: Jan 12, 2022, 8:00 AM
ಜೆಡಿಎಸ್ ಸಕಲೇಶಪುರ ಹಾಗೂ ಆಲೂರು ಭಾಗದಲ್ಲಿ ದಶಕಗಳಿಂದ ಜೀವಂತ ಹಾಗೂ ಪ್ರಾಣಕಂಟಕವಾಗಿರುವ ಕಾಡಾನೆ ಸಮಸ್ಯೆ ಹಾಗೂ ರಾಷ್ಟ್ರೀಯ ಹೆದ್ದಾರಿ ಆಮೆ ವೇಗದ ಕಾಮಗಾರಿ ವಿರುದ್ಧ ಸಕಲೇಶಪುರದಿಂದ ರಾಜಧಾನಿವರೆಗೂ ಜೆಡಿಎಸ್ ರಾಜ್ಯಾಧ್ಯಕ್ಷ, ಸಕಲೇಶಪುರ, ಆಲೂರು ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಒಳಗೊಂಡಂತೆ ಜೆಡಿಎಸ್ ತಂಡವು ಪಾದಯಾತ್ರೆ ನಡೆಸಲು ಚಿಂತನೆ ನಡೆಸಿದೆ.

ಸಾಂದರ್ಭಿಕ ಚಿತ್ರ
ಹೈಲೈಟ್ಸ್:
- ಜೆಡಿಎಸ್ ಕಾಡಾನೆ ಸಮಸ್ಯೆ ಹಾಗೂ ರಾಷ್ಟ್ರೀಯ ಹೆದ್ದಾರಿ ಆಮೆ ವೇಗದ ಕಾಮಗಾರಿ ವಿರುದ್ಧ ಪಾದಯಾತ್ರೆ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ
- ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರಿಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದುರುಳಿಸುವ ತಂತ್ರಗಾರಿಕೆ ಹೊಸತೇನು ಅಲ್ಲ
- 2023ರ ವಿಧಾನಸಭೆ ಚುನಾವಣೆಯಲ್ಲಿ ಕಿಂಗ್ ಇಲ್ಲವೇ ಕಿಂಗ್ ಮೇಕರ್ ಆಗಬೇಕೆಂದು ನಿರ್ಧರಿಸಿಯೇ ರಣತಂತ್ರ ರೂಪಿಸಲಾಗುತ್ತಿದೆ
ಹಾಸನ: ಕಾಂಗ್ರೆಸ್ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಪಾದಯಾತ್ರೆ ಆರಂಭಿಸಿ ಹಳೇ ಮೈಸೂರು ಪ್ರಾಂತ್ಯದಲ್ಲಿ ತನ್ನ ಅಸ್ತಿತ್ವ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ, ಜೆಡಿಎಸ್ ಕೂಡ ಜಿಲ್ಲೆಯ ಕಾಡಾನೆ ಸಮಸ್ಯೆ ಹಾಗೂ ರಾಷ್ಟ್ರೀಯ ಹೆದ್ದಾರಿ ಆಮೆ ವೇಗದ ಕಾಮಗಾರಿ ವಿರುದ್ಧ ಪಾದಯಾತ್ರೆ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಕಾಂಗ್ರೆಸ್ ನೀರಿಗಾಗಿ ನಡಿಗೆ ಎಂಬ ಘೋಷಣೆಯೊಂದಿಗೆ ಮೇಕೆದಾಟು ಹೋರಾಟ ಪ್ರಾರಂಭಗೊಂಡಿದ್ದರೂ, 2023ರ ವಿಧಾನಸಭೆ ಚುನಾವಣೆಯನ್ನು ಕೇಂದ್ರೀಕರಿಸಿಕೊಂಡೇ ಪಾದಯಾತ್ರೆ ಆರಂಭಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನೀರಿಗಾಗಿ ಪಾದಯಾತ್ರೆ ಪ್ರಾರಂಭಿಸಿದ್ದರೆ, ಜೆಡಿಎಸ್ ಸಕಲೇಶಪುರ ಹಾಗೂ ಆಲೂರು ಭಾಗದಲ್ಲಿ ದಶಕಗಳಿಂದ ಜೀವಂತ ಹಾಗೂ ಪ್ರಾಣಕಂಟಕವಾಗಿರುವ ಕಾಡಾನೆ ಸಮಸ್ಯೆ ಹಾಗೂ ರಾಷ್ಟ್ರೀಯ ಹೆದ್ದಾರಿ ಆಮೆ ವೇಗದ ಕಾಮಗಾರಿ ವಿರುದ್ಧ ಸಕಲೇಶಪುರದಿಂದ ರಾಜಧಾನಿವರೆಗೂ ಜೆಡಿಎಸ್ ರಾಜ್ಯಾಧ್ಯಕ್ಷ, ಸಕಲೇಶಪುರ, ಆಲೂರು ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಒಳಗೊಂಡಂತೆ ಜೆಡಿಎಸ್ ತಂಡವು ಪಾದಯಾತ್ರೆ ನಡೆಸಲು ಚಿಂತನೆ ನಡೆಸಿದೆ.
ಪರಿಹಾರವಾಗದ ಕಾಡಾನೆ ಸಮಸ್ಯೆ
ಹೇಮಾವತಿ ಜಲಾಶಯ ನಿರ್ಮಾಣದ ಬಳಿಕ 1972ರಿಂದಲೂ ಸಕಲೇಶಪುರ, ಆಲೂರು ತಾಲೂಕಿನ ಹಿನ್ನೀರು ಪ್ರದೇಶ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಬಿಟ್ಟುಬಿಡದೆ ಕಾಡುತ್ತಿರುವ ಕಾಡಾನೆ ಸಮಸ್ಯೆಯಿಂದ 60ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ. ನಿರಂತರ ಬೆಳೆಹಾನಿಯಿಂದ ರೈತಾಪಿ ವರ್ಗ ಹೈರಾಣಾಗಿದೆ. 1987ರಿಂದ 2021ರವರೆಗೆ ಒಟ್ಟು 64 ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲಾಗಿದೆ. ಇಷ್ಟಾದರೂ ಸಕಲೇಶಪುರ, ಆಲೂರು ತಾಲೂಕಿನಲ್ಲಿ 50ರಿಂದ 60 ಆನೆಗಳು ಇಂದಿಗೂ ಇದೆ. ಸರಕಾರ ಏನೇ ಮಾಡಿದರೂ, ಒಂದೇ ಬಾರಿಗೆ ಅಷ್ಟು ಆನೆಗಳನ್ನು ಸೆರೆ ಹಿಡಿಯಲು ಅನುಮತಿ ನೀಡುವುದಿಲ್ಲ. ಹೀಗಾಗಿ ಆನೆ ಸಮಸ್ಯೆಗೆ ಅಂತ್ಯವಿಲ್ಲ ಎಂಬಂತಾಗಿದೆ.
ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿದೆ, ಆನೆಕಾರಿಡಾರ್ ನಿರ್ಮಾಣದ ಭರವಸೆ. ಬ್ಯಾರಿಕೇಡ್ ನಿರ್ಮಾಣಕ್ಕಷ್ಟೇ ಸೀಮಿತವಾಗಿದೆ ಹೊರತು ಕಾಡಾನೆ ಉಪಟಳ ನಿಂತಿಲ್ಲ. ಇದರೊಂದಿಗೆ ಐದು ವರ್ಷದ ಹಿಂದೆ ಆರಂಭವಾದ ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಆಮೆ ವೇಗದ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆ ವಿರುದ್ಧದ ಹೋರಾಟವೂ ಪಾದಯಾತ್ರೆಯ ಪ್ರಮುಖ ಅಂಶವೇ ಆಗಿದೆ ಎನ್ನುತ್ತಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ.
ದೊಡ್ಡ ಗೌಡರ ರಣತಂತ್ರ
ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರಿಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದುರುಳಿಸುವ ತಂತ್ರಗಾರಿಕೆ ಹೊಸತೇನು ಅಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಿಂಗ್ ಇಲ್ಲವೇ ಕಿಂಗ್ ಮೇಕರ್ ಆಗಬೇಕೆಂದು ನಿರ್ಧರಿಸಿಯೇ ರಣತಂತ್ರ ರೂಪಿಸಲಾಗುತ್ತಿದ್ದು, ಅದಕ್ಕೆ ಮೊದಲ ಅಸ್ತ್ರ ಎಂಬಂತೆ ಪಾದಯಾತ್ರೆ ಮೂಲಕ ಜನರ ಮನಸ್ಸನ್ನು ಸೆಳೆದು ತನ್ನ ಅಸ್ತಿತ್ವ ಉಳಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಪಾದಯಾತ್ರೆ ಬಿಜೆಪಿಗಿಂತ ಜೆಡಿಎಸ್‌ಗೆ ಹೆಚ್ಚಿನ ಪರಿಣಾಮ ಉಂಟುಮಾಡಲಿದೆ ಎಂಬ ರಾಜಕೀಯ ಲೆಕ್ಕಾಚಾರದಿಂದ ಜಾಗೃತವಾಗಿರುವ ಜೆಡಿಎಸ್ ಅದಕ್ಕೆ ಸೆಡ್ಡು ಹೊಡೆಯಲು ಕಾರ್ಯತಂತ್ರ ರೂಪಿಸುತ್ತಿದೆ.
ಸಮೀಪದ ನಗರಗಳ ಸುದ್ದಿ
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ
ಕೀವರ್ಡ್ಸ್
Kannada News from Vijaya Karnataka, TIL Network
Read more
[wpas_products keywords=”deal of the day sale today offer all”]