Karnataka news paper

ನಿವೃತ್ತ ಸಿಜೆಐ ರಂಜನ್ ಗೊಗೊಯ್ ವಿರುದ್ಧ ಟಿಎಂಸಿ ಸಂಸದರಿಂದ ಹಕ್ಕುಚ್ಯುತಿ ನಿಲುವಳಿ ಮಂಡನೆ


ಹೈಲೈಟ್ಸ್‌:

  • ಮತ್ತೊಂದು ವಿವಾದದಲ್ಲಿ ಸಿಲುಕಿದ ನಿವೃತ್ತ ಸಿಜೆಐ ರಂಜನ್ ಗೊಗೊಯ್
  • ಗೊಗೊಯ್ ವಿರುದ್ಧ ಇಬ್ಬರು ಟಿಎಂಸಿ ಸಂಸದರಿಂದ ಹಕ್ಕುಚ್ಯುತಿ ನಿಲುವಳಿ
  • ತಮಗೆ ಬೇಕು ಅನಿಸಿದಾಗ ರಾಜ್ಯಸಭೆಗೆ ಹೋಗುತ್ತೇನೆ ಎಂದಿದ್ದ ಗೊಗೊಯ್
  • ಇನ್ನೂ ಅನೇಕ ವಿರೋಧಪಕ್ಷಗಳಿಂದ ಹಕ್ಕುಚ್ಯುತಿ ನಿಲುವಳಿ ಮಂಡನೆ ಸಾಧ್ಯತೆ

ಹೊಸದಿಲ್ಲಿ: ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯಸಭೆ ಸಂಸದ ರಂಜನ್ ಗೊಗೊಯ್ ಅವರು ನೀಡಿರುವ ಹೇಳಿಕೆ ವಿರುದ್ಧ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯೆ ಮೌಸಮ್ ನೂರ್ ಹಾಗೂ ಸಂಸದ ಜವಹರ್ ಸಿರ್ಕಾರ್ ಅವರು ಹಕ್ಕುಚ್ಯುತಿ ನಿಲುವಳಿ ಮಂಡನೆ ಮಾಡಿದ್ದಾರೆ. ವಿಭಿನ್ನ ಪಕ್ಷಗಳ ಇನ್ನೂ ಅನೇಕ ಸಂಸದರು ಇದೇ ನಿಲುವಳಿ ಮಂಡಿಸುವ ನಿರೀಕ್ಷೆಯಿದೆ.

ಡಿಸೆಂಬರ್ 9ರಂದು ಸಂದರ್ಶನದಲ್ಲಿ ಗೊಗೊಯ್ ಅವರಿಗೆ ಸಂಸತ್‌ನಲ್ಲಿನ ಹಾಜರಾತಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಅವರು ರಾಜ್ಯಸಭೆಯಲ್ಲಿ ಸಾಮಾಜಿಕ ಅಂತರದ ಕೊರತೆ, ಸೀಟುಗಳ ವ್ಯವಸ್ಥೆ ತಮಗೆ ಹಿತಕರವಾಗಿಲ್ಲ ಎಂದು ಹಾಗೂ ಕೋವಿಡ್ ನಿರ್ಬಂಧಗಳ ಬಗ್ಗೆ ಪ್ರಸ್ತಾಪಿಸಿದ್ದರು. ‘ನಾನು ಹೋಗಬೇಕು ಅನಿಸಿದಾಗ, ನಾನು ಮಾತನಾಡಬೇಕಾದ ಮಹತ್ವದ ವಿಷಯಗಳು ಇದೆ ಎಂದು ನನಗೆ ಅನಿಸಿದಾಗ ರಾಜ್ಯಸಭೆಗೆ ಹೋಗುತ್ತೇನೆ. ನಾನು ನಾಮನಿರ್ದೇಶಿತ ಸದಸ್ಯ. ನಾನು ಯಾವುದೇ ಪಕ್ಷದ ವಿಪ್‌ಗೆ ಅಧೀನಕ್ಕೆ ಒಳಪಟ್ಟಿಲ್ಲ’ ಎಂದು ತಾವು ರಾಜ್ಯಸಭೆಯ ಕಲಾಪಕ್ಕೆ ಸರಿಯಾಗಿ ಹಾಜರಾಗದ ಬಗ್ಗೆ ಉತ್ತರಿಸಿದ್ದರು.
ಅಯೋಧ್ಯಾ ತೀರ್ಪಿನ ಬಳಿಕ 5 ಸ್ಟಾರ್ ಹೋಟೆಲ್‌ನಲ್ಲಿ ಊಟ: ನ್ಯಾ. ಗೊಗೊಯ್ ಜೀವನಚರಿತ್ರೆಯಲ್ಲಿ ಕುತೂಹಲಕಾರಿ ಸಂಗತಿಗಳು
ಸಿಜೆಐ ಆಗಿ ನಿವೃತ್ತರಾದ ನಾಲ್ಕು ತಿಂಗಳಲ್ಲಿಯೇ ರಾಜ್ಯಸಭೆಗೆ ನಾಮನಿರ್ದೇಶನದ ಆಹ್ವಾನ ಒಪ್ಪಿಕೊಂಡ ಕುರಿತಾದ ಪ್ರಶ್ನೆಗೆ, ‘ರಾಜ್ಯಸಭೆಯ ಮ್ಯಾಜಿಕ್ ಏನಿದೆ? ನಾನು ನ್ಯಾಯಮಂಡಳಿಯೊಂದರ ಅಧ್ಯಕ್ಷನಾಗಿದ್ದರೆ ವೇತನ, ಸಂಭಾವನೆಗಳ ವಿಚಾರದಲ್ಲಿ ಇನ್ನೂ ಚೆನ್ನಾಗಿರುತ್ತಿತ್ತು’ ಎಂದಿದ್ದರು.

ರಂಜನ್ ಗೊಗೊಯ್ ಅವರು ನೀಡಿರುವ ಹೇಳಿಕೆಗಳು ಜವಾಬ್ದಾರಿಗಳ ಉಲ್ಲಂಘನೆಯಾಗಿದೆ ಮತ್ತು ಸದನದ ಘನತೆಯನ್ನು ಕಡೆಗಣಿಸಿದಂತೆ ಆಗಿದೆ ಎಂದು ಮೌಸಮ್ ನೂರ್ ಮತ್ತು ಜವಹರ್ ಸಿರ್ಕಾರ್ ಅವರು ಮಂಡಿಸಿರುವ ಹಕ್ಕುಚ್ಯುತಿ ನಿಲುವಳಿ ಆರೋಪಿಸಿದೆ. ಗೊಗೊಯ್ ಅವರ ವಿರುದ್ಧ ಇನ್ನೂ ಕೆಲವು ವಿರೋಧಪಕ್ಷಗಳ ಸದಸ್ಯರು ಹಕ್ಕುಚ್ಯುತಿ ನೋಟಿಸ್ ನೀಡುವ ಸಾಧ್ಯತೆ ಇದೆ.

2020ರ ಮಾರ್ಚ್‌ನಿಂದ ನಡೆದ ಸದನದ ಎಲ್ಲ ಕಲಾಪಗಳಲ್ಲಿ ಗೊಗೊಯ್ ಅವರ ಹಾಜರಾತಿ ಶೇ 10ಕ್ಕಿಂತಲೂ ಕಡಿಮೆ ಇರುವುದನ್ನು ಸಂಸತ್ತಿನ ದಾಖಲೆಗಳು ತೋರಿಸುತ್ತವೆ. ರಾಜ್ಯಸಭೆ ಅಧ್ಯಕ್ಷರು ಈ ನೋಟಿಸ್‌ನಲ್ಲಿ ಅರ್ಹತೆಯನ್ನು ಕಂಡುಕೊಂಡರೆ ಅದನ್ನು ಸದನದ ಹಕ್ಕುಚ್ಯುತಿ ಸಮಿತಿಗೆ ರವಾನಿಸುತ್ತಾರೆ. ಸಮಿತಿಯ ವರದಿ ಆಧಾರದಲ್ಲಿ ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ನಿಲುವಳಿ ಅಂಗೀಕಾರವಾಗುತ್ತದೆ. ಸದಸ್ಯರು ತಮ್ಮ ರಾಜ್ಯಸಭೆ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ.



Read more