
ಲಂಡನ್: ಓಮೈಕ್ರಾನ್ ರೂಪಾಂತರ ತಳಿಯ ಸೋಂಕಿಗೆ ಒಳಗಾದವರ ಪೈಕಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಸೋಮವಾರ ಹೇಳಿದ್ದಾರೆ.
ದೇಶದಲ್ಲಿ ಈಗಾಗಲೇ ಕೋವಿಡ್ ರೂಪಾಂತರ ತಳಿಯ ವಿರುದ್ಧ ಹೋರಾಡುವ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಈ ಡೋಸ್ ಪಡೆಯಲು ಸೋಮವಾರ ಎಲ್ಲಾ ಲಸಿಕೆ ಕೇಂದ್ರಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಜಾನ್ಸನ್ ಅವರು, ‘ಓಮೈಕ್ರಾನ್ ಸೋಂಕಿನಿಂದ ಹಲವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ. ಇದು ವಿಷಾದನೀಯ. ಜನರು ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದರು.
ಈ ರೂಪಾಂತರ ತಳಿಯು ಹೆಚ್ಚಿನ ಸಂಖ್ಯೆಯಲ್ಲಿ ಪ್ರಸರಣಗೊಂಡು ಅಬ್ಬರದ ಅಲೆಯಾಗುವ ಸಾಧ್ಯತೆ ಇದೆ ಎಂದು ಭಾನುವಾರ ರಾತ್ರಿ ಜಾನ್ಸನ್ ಅವರು ಟೆಲಿವಿಷನ್‌ನಲ್ಲಿ ಮಾಡಿದ ಭಾಷಣದಲ್ಲಿ ಎಚ್ಚರಿಕೆ ನೀಡಿದ್ದರು. ಇಂಗ್ಲೆಂಡ್‌ನಲ್ಲಿ 10 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ರೂಪಾಂತರ ತಳಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿತ್ತು.