ಹೈಲೈಟ್ಸ್:
- ಕಬ್ಬು, ಗೆಣಸು, ಅವರೆಕಾಯಿ, ಕಡಲೆಕಾಯಿ ಆಗಮನ
- ಎಳ್ಳು – ಬೆಲ್ಲಗಳ ಘಮ, ಸಕ್ಕರೆ ಅಚ್ಚುಗಳ ಆಕರ್ಷಣೆ..!
- ಎಳ್ಳು – ಬೆಲ್ಲ ತುಂಬಿದ ಬಗೆ ಬಗೆಯ ಗಿಫ್ಟ್‌ಗಳ ಭರಾಟೆ
ಮಾರುಕಟ್ಟೆಗಳಲ್ಲಿ ಒಂದೆಡೆ ಕಡಲೆ ಕಾಯಿ, ಗೆಣಸು, ಅವರೆ ಕಾಯಿಗಳ ಮಾರಾಟ. ಮತ್ತೊಂದೆಡೆ ಸಿದ್ಧ ಎಳ್ಳು – ಬೆಲ್ಲಗಳ ಘಮ, ಸಕ್ಕರೆ ಅಚ್ಚುಗಳ ಆಕರ್ಷಣೆ, ಎಳ್ಳು – ಬೆಲ್ಲ ತುಂಬಿದ ಬಗೆ ಬಗೆಯ ಗಿಫ್ಟ್‌ಗಳು.. ಹೀಗೆ ಖರೀದಿಯ ಭರಾಟೆ ಆರಂಭವಾಗಿದೆ.
ಈ ಬಾರಿ ಅವರೆ ಕಾಯಿ, ಕಡಲೆ ಕಾಯಿಯ ಆಗಮನ ಸ್ವಲ್ಪ ಕಡಿಮೆಯಾಗಿದ್ದು, ಇವೆರಡೂ ಸ್ವಲ್ಪ ದುಬಾರಿಯಾಗಿವೆ. ಆದರೆ ಎಳ್ಳು – ಬೆಲ್ಲಗಳ ಮಿಶ್ರಣವೂ ಅಂಗಡಿಗಳಿಗೆ ಬಂದಿದೆ. ಶನಿವಾರ ಸಂಕ್ರಾಂತಿ ಹಬ್ಬವಿದ್ದು, ಈ ಬಾರಿ ಹಬ್ಬದ ಆಚರಣೆಗೆ ವೀಕೆಂಡ್ ಕರ್ಫ್ಯೂ ಅಡ್ಡಿಯಾಗಲಿದೆ. ಆದರೂ ಮನೆ – ಮನೆಗಳಲ್ಲಿ ಹಬ್ಬವನ್ನು ಆಚರಿಸಿಕೊಳ್ಳಲು ನಗರದ ಜನ ಸಜ್ಜಾಗಿದ್ದಾರೆ.
ಕೆ. ಆರ್. ಮಾರುಕಟ್ಟೆ, ಗಾಂಧಿ ಬಜಾರ್, ಮಲ್ಲೇಶ್ವರ, ಯಶವಂತ ಪುರ, ಬಸವನ ಗುಡಿ, ಜಯ ನಗರ, ವಿಜಯ ನಗರ, ದಾಸರ ಹಳ್ಳಿ, ಮಡಿವಾಳ, ಕೆ. ಆರ್. ಪುರ ಮತ್ತಿತರ ಮಾರುಕಟ್ಟೆಗಳಲ್ಲಿ ಹಬ್ಬದ ಕಳೆ ರಂಗೇರಿದೆ. ಕೆ. ಆರ್. ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ ಹಾಗೂ ಯಶವಂತಪುರ ಮಾರುಕಟ್ಟೆಗಳಿಗೆ ಲೋಡ್‌ಗಟ್ಟಲೆ ಕಬ್ಬು ಬಂದಿದೆ.
ಕೆ. ಆರ್. ಮಾರುಕಟ್ಟೆಗೆ ಸಾಮಾನ್ಯ ದಿನಗಳಲ್ಲಿ 4 – 5 ಲಾರಿ ಲೋಡ್ ಕಬ್ಬು ಬಂದರೆ, ಸಂಕ್ರಾಂತಿಗೆ 10 ಲಾರಿ ಲೋಡ್‌ಗೂ ಅಧಿಕ ಕಬ್ಬು ಆಗಮಿಸುತ್ತದೆ. ಈ ಬಾರಿ ರಾಜ್ಯಾದ್ಯಂತ ಒಳ್ಳೆಯ ಮಳೆಯಾಗಿದ್ದು, ಎಲ್ಲೆಡೆ ಕಬ್ಬಿನ ಬೆಳೆಯೂ ಉತ್ತಮವಾಗಿದೆ. ಹೀಗಾಗಿ, ಈ ಬಾರಿ ರಾಜ್ಯದಲ್ಲಿ ಕಬ್ಬಿನ ಇಳುವರಿ ಶೇ. 20 ರಷ್ಟು ಹೆಚ್ಚಾಗಿದೆ. ಹೀಗಾಗಿ, ಹಬ್ಬಕ್ಕೆ ಕಬ್ಬಿನ ಕೊರತೆ ಇರುವುದಿಲ್ಲ. ಆದರೆ, ಅಧಿಕ ಮಳೆಯಿಂದಾಗಿ ಈ ಬಾರಿ ಕಡಲೆ ಕಾಯಿ, ಅವರೆ ಕಾಯಿ ಬೆಳೆಗೆ ಹಾನಿ ಉಂಟಾಗಿದ್ದು, ಉತ್ತಮ ಇಳುವರಿಯಿಲ್ಲ. ಹೀಗಾಗಿ, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಾರದ ಕಾರಣ ಬೆಲೆಗಳು ಕೂಡ ಕೆ. ಜಿ. ಗೆ 70 – 80 ರೂ. ನಂತೆ ಮಾರಾಟವಾಗುತ್ತಿವೆ. ಸಿಹಿ ಗೆಣಸು 20 – 30ರೂ. ಗೆ ಮಾರಾಟವಾಗುತ್ತಿದೆ.
ಎಳ್ಳು – ಬೆಲ್ಲ ಮಿಶ್ರಣ
ಮಾರುಕಟ್ಟೆಯಲ್ಲಿ ಸಿದ್ಧ ಎಳ್ಳು – ಬೆಲ್ಲ ಕೆ. ಜಿ. ಗೆ 250 – 300 ರೂ. ಗೆ ಮಾರಾಟವಾಗುತ್ತಿದೆ. ಸಂಕ್ರಾಂತಿಗೆ ಎಳ್ಳು, ಬೆಲ್ಲ, ಒಣ ಕೊಬ್ಬರಿ, ಕಡ್ಲೆ ಬೀಜ, ಹುರಿಗಡಲೆಗಳ ಮಿಶ್ರಣ, ಕಬ್ಬು, ಸಕ್ಕರೆ ಅಚ್ಚುಗಳೂ ಆಗಮಿಸಿವೆ.
ವ್ಯಾಪಾರಿಗಳ ಆತಂಕ
ಸರಕಾರ ವಾರಾಂತ್ಯ ಕರ್ಫ್ಯೂ ವಿಧಿಸಿರುವುದರಿಂದ ಹಬ್ಬದ ಆಚರಣೆಗೆ ತೊಡಕಾಗುವ ಸಾಧ್ಯತೆಯಿದೆ. ಮಾರಾಟಗಾರರು ಹಬ್ಬದ ಸಾಮಗ್ರಿಗಳನ್ನು ಖರೀದಿಸಿ ತಂದಿದ್ದು, ಅಂದು ವ್ಯಾಪಾರಕ್ಕೆ ಅವಕಾಶ ಸಿಕ್ಕಿದರೂ ಕೂಡ ಗ್ರಾಹಕರು ಬರಬೇಕಲ್ಲವೇ ಎಂಬುದು ವ್ಯಾಪಾರಿಗಳ ಆತಂಕವಾಗಿದೆ.
Read more
[wpas_products keywords=”deal of the day sale today offer all”]