ಹೈಲೈಟ್ಸ್:
- ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಪಹರಣ ಮತ್ತು ಕೊಲೆ ಬೆದರಿಕೆ
- ಸೀಕ್ರೆಟ್ ಸರ್ವೀಸ್‌ಗೆ ಹಲವು ಬಾರಿ ಕರೆ ಮಾಡಿ ಬೆದರಿಕೆ ಹಾಕಿದ್ದ ವೃದ್ಧನ ಬಂಧನ
- ಚುನಾವಣೆಯಲ್ಲಿ ಸೋತು ಅಧಿಕಾರ ತ್ಯಜಿಸದಿದ್ದರೆ ಟ್ರಂಪ್ ಅವರ ಕೊಲೆ ಮಾಡುತ್ತೇನೆ
- ಟ್ರಂಪ್ ಒಬ್ಬ ಹಿಟ್ಲರ್ ಹಾಗೂ ಅವರ ಜತೆಗಾರರು 12 ಕೋತಿಗಳು ಎನ್ನುತ್ತಿದ್ದ ವೃದ್ಧ
ವೃದ್ಧ ಥಾಮಸ್ ವೆಲ್ನಿಕ್ಕಿ ಅವರು ತಿಳಿದು, ಉದ್ದೇಶಪೂರ್ವಕವಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಲು, ಅಪಹರಿಸಲು ಮತ್ತು ತೀವ್ರ ಗಾಯಗೊಳಿಸುವ ಬೆದರಿಕೆ ಹಾಕಿದ್ದಾರೆ ಎಂದು ಬ್ರೂಕ್ಲಿನ್ ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ.
2020ರ ಜುಲೈನಲ್ಲಿ ಅಮೆರಿಕ ಕ್ಯಾಪಿಟೊಲ್ ಪೊಲೀಸರಿಗೆ ಹೇಳಿಕೆ ನೀಡಿದ್ದ ವೆಲ್ನಿಕ್ಕಿ, ‘2020ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಅನುಭವಿಸಿ, ಅಧಿಕಾರದಿಂದ ಕೆಳಕ್ಕೆ ಇಳಿಯಲು ನಿರಾಕರಿಸಿದರೆ, ನಾನು ಶಸ್ತ್ರಾಸ್ತ್ರಗಳನ್ನು ಖರೀದಿಸಿ ಅವರನ್ನು ಹತ್ಯೆ ಮಾಡುತ್ತೇನೆ’ ಎಂದು ಹೇಳಿದ್ದರು ಎನ್ನಲಾಗಿದೆ.
ದೋಷಾರೋಪಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ‘ವ್ಯಕ್ತಿ-1’ ಎಂದು ಉಲ್ಲೇಖಿಸಲಾಗಿದೆ. ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನ ಸೀಕ್ರೆಟ್ ಸರ್ವೀಸ್‌ಗೆ ವೆಲ್ನಿಕ್ಕಿ ಅವರು ಟ್ರಂಪ್ ಹಾಗೂ ಸಂಸತ್‌ನ 12 ಇತರೆ ಸದಸ್ಯರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುವ ಎರಡು ಧ್ವನಿ ಸಂದೇಶಗಳನ್ನು ಕಳುಹಿಸಿದ್ದರು ಎಂದೂ ಆರೋಪಿಸಲಾಗಿದೆ.
‘ಹೌದು, ಇದು ಬೆದರಿಕೆಯೇ. ಬಂದು ನನ್ನನ್ನು ಬಂಧಿಸಿ. ಆ ವ್ಯಕ್ತಿ ಹಾಗೂ ಆತನ 12 ಕೋತಿಗಳನ್ನು ನಿರ್ಮೂಲನೆ ಮಾಡಲು ನಾನು ಏನು ಬೇಕಾದರೂ ಮಾಡುತ್ತೇನೆ’ ಎಂದು ವೆಲ್ನಿಕ್ಕಿ ಹೇಳಿದ್ದರು ಎಂದು ಆರೋಪಿಸಲಾಗಿದೆ. ಕಳೆದ ನವೆಂಬರ್‌ನಲ್ಲಿ ತಮ್ಮ ಸೆಲ್ ಫೋನ್ ಮೂಲಕ ಮೂರು ಬಾರಿ ಸೀಕ್ರೆಟ್ ಸರ್ವೀಸ್‌ಗೆ ಕರೆ ಮಾಡಿದ್ದ ವೆಲ್ನಿಕ್ಕಿ, ತಮ್ಮ ಹೆಸರು ಹೇಳಿಕೊಂಡು ಪರಿಚಯಿಸಿಕೊಂಡಿದ್ದರು. ‘ವ್ಯಕ್ತಿ-1 ಅವರನ್ನು (ಟ್ರಂಪ್) ‘ಹಿಟ್ಲರ್’ ಎಂದು ಪದೇ ಪದೇ ಕರೆಯುತ್ತಿದ್ದ ಅವರು, ಆತ ಸಾಯುವುದನ್ನು ಖಾತರಿಪಡಿಸಲು ಎಲ್ಲವನ್ನೂ ಮಾಡುತ್ತೇನೆ ಎಂದಿದ್ದರು’ ಎಂಬುದಾಗಿ ದೋಷಾರೋಪದಲ್ಲಿ ಉಲ್ಲೇಖಿಸಲಾಗಿದೆ.
ವೆಲ್ನೆಕ್ಕಿ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಬ್ರೂಕ್ಲಿನ್ ಫೆಡರಲ್ ನ್ಯಾಯಾಲಯ, 50,000 ಡಾಲರ್ ಬಾಂಡ್ ಪಾವತಿಯೊಂದಿಗೆ ಜಾಮೀನು ಮಂಜೂರು ಮಾಡಿದೆ. ರಾತ್ರಿ ವೇಳೆ ಅವರನ್ನು ಗೃಹ ಬಂಧನದಲ್ಲಿ ಇರಿಸಬೇಕು, ಅವರಿಗೆ ಜಿಪಿಎಸ್ ನಿಗಾವಣೆ ಸಾಧನ ಅಳವಡಿಸಬೇಕು ಎಂದು ಆದೇಶಿಸಿದೆ. ಜತೆಗೆ ಅವರಿಗೆ ಮಾನಸಿಕ ಆರೋಗ್ಯ ನೆರವು ಒದಗಿಸಬೇಕು ಎಂದೂ ಕೋರ್ಟ್ ಸೂಚನೆ ನೀಡಿದೆ.
Read more
[wpas_products keywords=”deal of the day sale today offer all”]