ಹೈಲೈಟ್ಸ್:
- ಸಿಬಿಎಸ್‌ಇ ಹತ್ತನೇ ತರಗತಿ ಇಂಗ್ಲಿಷ್ ಪತ್ರಿಕೆಯ ಸಾಲುಗಳ ಬಗ್ಗೆ ವಿವಾದ
- ಮಹಿಳೆಯರ ಕುರಿತು ಕೀಳುಮಟ್ಟದ, ಅವಹೇಳನಾಕಾರಿ ಪದಗಳ ಬಳಕೆ
- ಲೋಕಸಭೆಯಲ್ಲಿ ಸೋಮವಾರ ವಿಷಯ ಪ್ರಸ್ತಾಪಿಸಿದ ಸೋನಿಯಾ ಗಾಂಧಿ
- ಸಿಬಿಎಸ್‌ಇಯಿಂದ ಕ್ಷಮಾಪಣೆಗೆ ಆಗ್ರಹ, ವಿಪಕ್ಷಗಳ ಪ್ರತಿಭಟನೆ
ಲೋಕಸಭೆಯಲ್ಲಿ ಸೋಮವಾರ ಶೂನ್ಯ ವೇಳೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಸಿಬಿಎಸ್‌ಇ ಪರೀಕ್ಷೆಯಲ್ಲಿನ ‘ಪತ್ನಿಯರ ಅವಿಧೇಯತೆ’ ಕುರಿತಾದ ಪ್ರಶ್ನೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
‘ನಾನು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಿಕ್ಷಣತಜ್ಞರ ಕಳವಳಗಳಿಗೆ ಧ್ವನಿಗೂಡಿಸುತ್ತೇನೆ. ಸಿಬಿಎಸ್‌ಇ ನಡೆಸಿದ ಮಹತ್ವದ ಪರೀಕ್ಷೆಯಲ್ಲಿ ಅಂತಹ ನಿರ್ಲಜ್ಜ ಸ್ತ್ರೀದ್ವೇಷಿ ಅಂಶ ಜಾಗ ಪಡೆದಿರುವುದನ್ನು ನಾನು ಬಲವಾಗಿ ಆಕ್ಷೇಪಿಸುತ್ತೇನೆ. ಇದು ಶಿಕ್ಷಣ ಮತ್ತು ಪರೀಕ್ಷೆಯ ಕಳಪೆ ಗುಣಮಟ್ಟವನ್ನು ಪ್ರತಿಫಲಿಸುತ್ತದೆ ಮತ್ತು ಇದು ಎಲ್ಲ ನಿಯಮಾವಳಿಗಳಿಗೆ ವಿರುದ್ಧವಾಗಿದೆ’ ಎಂದು ಆರೋಪಿಸಿದರು.
ಡಿ. 12ರಂದು ನಡೆದ ಹತ್ತನೇ ತರಗತಿ ಸಿಬಿಎಸ್‌ಇ ಪರೀಕ್ಷೆಯ ರೀಡಿಂಗ್ ಕಾಂಪ್ರೆಹೆನ್ಸಿವ್ ಅವಧಿಯಲ್ಲಿ ಆಘಾತಕಾರಿಯಾದ ಕೀಳುಮಟ್ಟದ ಸಾಲುಗಳಿಗೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯು ಸ್ವಾತಂತ್ರ್ಯ ಪಡೆದುಕೊಳ್ಳುತ್ತಿರುವುದು ವ್ಯಾಪಕ ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಪತ್ನಿಯರು ತಮ್ಮ ಪತಿಯರಿಗೆ ವಿಧೇಯರಾಗುವುದನ್ನು ನಿಲ್ಲಿಸಿದ್ದಾರೆ. ಮಕ್ಕಳು ಹಾಗೂ ಸೇವಕರು ಅಶಿಸ್ತಿನಿಂದ ಇರಲು ಇದು ಮುಖ್ಯ ಕಾರಣ ಎಂಬಂತಹ ಕೆಟ್ಟ ಹೇಳಿಕೆಗಳನ್ನು ಒಳಗೊಂಡಿದೆ ಎಂದು ಪ್ರಸ್ತಾಪಿಸಿದರು.
ಇಡೀ ವಾಕ್ಯವು ಅಂತಹ ಆಕ್ಷೇಪಾರ್ಹ ಆಲೋಚನೆಗಳಿಂದ ತುಂಬಿದ್ದು, ಅದರ ನಂತರ ಕೇಳಲಾದ ಪ್ರಶ್ನೆಗಳು ಅಷ್ಟೇ ಅಸಂಬದ್ಧವಾಗಿವೆ ಎಂದು ಆರೋಪಿಸಿದರು. ಸಿಬಿಎಸ್‌ಇ ಕೂಡಲೇ ಆ ಸಾಲುಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು. ಕ್ಷಮಾಪಣೆ ಕೋರಬೇಕು ಮತ್ತು ಇಂತಹ ದೊಡ್ಡ ಪ್ರಮಾದಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಶಿಕ್ಷಣ ಸಚಿವಾಲಯವನ್ನು ಆಗ್ರಹಿಸಿದರು.
ಸೋನಿಯಾ ಗಾಂಧಿ ಅವರ ಹೇಳಿಕೆ ಬಳಿಕ ವಿಪಕ್ಷಗಳು ಸರ್ಕಾರದಿಂದ ಪ್ರತಿಕ್ರಿಯೆಗೆ ಆಗ್ರಹಿಸಿದವು. ಡಿಎಂಕೆ ಮತ್ತು ಎಡಪಕ್ಷಗಳ ಜತೆಗೆ ಕಾಂಗ್ರೆಸ್ ಸಂಸದರು, ಸೋನಿಯಾ ಅವರ ಹೇಳಿಕೆ ಮುಗಿಯುತ್ತಿದ್ದಂತೆಯೇ ಎದ್ದು ನಿಂತು ಸರ್ಕಾರಕ್ಕೆ ಒತ್ತಾಯ ಮಾಡಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಸಚಿವರು ಇದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ಶೂನ್ಯ ಅವಧಿಯಲ್ಲಿ ಪ್ರಸ್ತಾಪಿಸಿದ ಸಂಗತಿಗಳಿಗೆ ಪ್ರತಿಕ್ರಿಯೆ ನೀಡುವ ಪರಿಪಾಠ ಲೋಕಸಭೆಯಲ್ಲಿ ಇಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಪ್ರತಿಕ್ರಿಯೆ ನೀಡಿದರು. ಇದರಿಂದ ಕಾಂಗ್ರೆಸ್, ಡಿಎಂಕೆ ಮತ್ತು ಎಡಪಕ್ಷಗಳು ಪ್ರತಿಭಟನೆಯಾಗಿ ಕಲಾಪದಿಂದ ಹೊರ ನಡೆದವು.
ರಾಹುಲ್ ಗಾಂಧಿ ಟ್ವೀಟ್
ಸಿಬಿಎಸ್‌ಇ ಪರೀಕ್ಷೆಯಲ್ಲಿನ ಪ್ರಮಾದದ ವಿರುದ್ಧ ರಾಹುಲ್ ಗಾಂಧಿ ಕೂಡ ಧ್ವನಿ ಎತ್ತಿದ್ದಾರೆ. ಬಹುತೇಕ ಸಿಬಿಎಸ್‌ಇ ಪರೀಕ್ಷೆಗಳು ಬಹಳ ಕಷ್ಟಕರವಾಗಿರುತ್ತವೆ. ಇಂಗ್ಲಿಷ್ ಪತ್ರಿಕೆಯ ಗ್ರಹಿಕೆ ವಿಭಾಗವು ಬಹಳ ಅಸಹ್ಯಕರವಾಗಿತ್ತು. ಇದು ಯುವಜನರ ನೈತಿಕತೆ ಮತ್ತು ಭವಿಷ್ಯವನ್ನು ಕೆಡಿಸುವ ಟಿಪಿಕಲ್ ಆರ್‌ಎಸ್‌ಎಸ್- ಬಿಜೆಪಿ ಕೆಲಸವಾಗಿದೆ. ಮಕ್ಕಳೇ ನಿಮ್ಮಿಂದ ಅತ್ಯುತ್ತಮವಾದುದ್ದನ್ನು ಮಾಡಿ. ಕಠಿಣ ಪರಿಶ್ರಮಕ್ಕೆ ಬೆಲೆ ಇದೆ, ಧರ್ಮಾಂಧತೆಗಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಸಿಬಿಎಸ್‌ಇ ಘೋಷಣೆ
ಈ ವಿವಾದಾತ್ಮಕ ಸಾಲುಗಳನ್ನು ಕೈಬಿಡುವುದಾಗಿ ಸಿಬಿಎಸ್‌ಇ ಪ್ರಕಟಣೆ ಮಾಡಿದೆ. ‘ಈ ಸಾಲುಗಳು ಮಾರ್ಗಸೂಚಿಗಳಿಗೆ ಅನುಗುಣವಾಗಿ ಇರಲಿಲ್ಲ. ಹೀಗಾಗಿ ಅವುಗಳನ್ನು ಕೈಬಿಡಲಾಗುವುದು. ಆ ಪ್ರಶ್ನೆಗೆ ವಿದ್ಯಾರ್ಥಿಗಳಿಗೆ ಪೂರ್ಣ ಅಂಕ ನೀಡಲಾಗುವುದು’ ಎಂದು ಸೋನಿಯಾ ಅವರ ಆಕ್ಷೇಪದ ಬಳಿಕ ಸಿಬಿಎಸ್‌ಇ ಮಂಡಳಿ ತಿಳಿಸಿದೆ.