ಹೈಲೈಟ್ಸ್:
- ಐಪಿಎಲ್‌ನ ಟೈಟಲ್ ಸ್ಪಾನ್ಸರ್ ಆಗಿದ್ದ ವಿವೋದ ಜಾಗವನ್ನು ತನ್ನದಾಗಿಸಿಕೊಂಡ ಟಾಟಾ ಗ್ರೂಪ್
- ಈ ವರ್ಷದಿಂದಲೇ ಟೈಟಲ್ ಪ್ರಾಯೋಜಕನಾಗಲಿದೆ ದೇಶದ ದೈತ್ಯ ಕಂಪನಿ
- ಈ ಸುದ್ದಿಯನ್ನು ಖಚಿತಪಡಿಸಿದ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್
ಐಪಿಎಲ್‌ನ ಟೈಟಲ್ ಸ್ಪಾನ್ಸರ್ ಆಗಿರುವ ಚೀನಾದ ಮೊಬೈಲ್ ಉತ್ಪಾದಕ ಸಂಸ್ಥೆ ವಿವೋದ ಜಾಗವನ್ನೀಗ ಟಾಟಾ ಗ್ರೂಪ್ ತನ್ನದಾಗಿಸಿಕೊಂಡಿದ್ದು, ಈ ವರ್ಷದಿಂದಲೇ ಟೈಟಲ್ ಪ್ರಾಯೋಜಕನಾಗಲಿದೆ. ಸ್ವತಃ ಐಪಿಎಲ್‌ನ ಆಡಳಿತ ಮಂಡಳಿ ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಅಂತಿಮಗೊಳಿಸಿದೆ.
“ಹೌದು ಟಾಟಾ ಗ್ರೂಪ್ ಐಪಿಎಲ್ ಟೈಟಲ್ ಸ್ಪಾನ್ಸರ್ ಆಗಿ ಬರುತ್ತಿದೆ,” ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸುದ್ದಿ ಸಂಸ್ಥೆಯೊಂದಕ್ಕೆ ಅಧಿಕೃತ ಮಾಹಿತಿ ನೀಡಿದ್ದಾರೆ.
2018ರಿಂದ 2022ರ ನಡುವಿನ ಐಪಿಎಲ್ ಟೂಟಲ್ ಸ್ಪಾನ್ಸರ್‌ಶಿಪ್‌ನ್ನು ವಿವೋ ಗೆದ್ದುಕೊಂಡಿತ್ತು. ಆದರೆ 2020ರ ಗಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟ ಬಳಿಕ ಒಂದು ವರ್ಷ ಕಾಲ ಕಂಪನಿ ವಿರಾಮ ಪಡೆದುಕೊಂಡಿತ್ತು. ಆ ಸಂದರ್ಭದಲ್ಲಿ ಡ್ರೀಮ್11 ಟೈಟಲ್ ಸ್ಪಾನ್ಸರ್ ಆಗಿತ್ತು.
ಆದರೆ 2021ರಲ್ಲಿ ಪುನಃ ವಿವೋ ಟೈಟಲ್ ಸ್ಪಾನ್ಸರ್ ಆಗಿ ಮರಳಿತ್ತು. ಈ ಸಂದರ್ಭದಲ್ಲೇ ತನ್ನ ಹಕ್ಕುಗಳನ್ನು ಸೂಕ್ತವಾದ ಬಿಡ್ಡರ್‌ಗೆ ವರ್ಗಾಯಿಸಲು ಸಂಸ್ಥೆ ನೋಡುತ್ತಿದೆ ಎಂದು ಸುದ್ದಿಯಾಗಿತ್ತು. ಇದೀಗ ಬಿಸಿಸಿಐ ಇದಕ್ಕೆ ಅನುಮೋದನೆ ನೀಡುವುದರೊಂದಿಗೆ ದೇಶದ ಅತೀ ದೊಡ್ಡ ಕ್ರಿಕೆಟ್ ಹಬ್ಬ ಐಪಿಎಲ್‌ನ ಟೈಟಲ್ ಪ್ರಾಯೋಜಕತ್ವ ಟಾಟಾ ಗ್ರೂಪ್ ಪಾಲಾಗಿದೆ.
2020ರಲ್ಲೂ ಸ್ಪರ್ಧೆಯಲ್ಲಿತ್ತು ಟಾಟಾ ಗ್ರೂಪ್
ಹಾಗೆ ನೋಡಿದರೆ 2020ರಲ್ಲಿ ಗಲ್ವಾನ್ ಗಲಾಟೆ ಬಳಿಕ ಐಪಿಎಲ್ ಟೈಟಲ್ ಪ್ರಾಯೋಕತ್ವದಿಂದ ವಿವೋ ಹಿಂದೆ ಸರಿದಾಗ ಬಿಸಿಸಿಐ ಕಂಪನಿಗಳಿಂದ ಪ್ರಸ್ತಾವನೆಗಳನ್ನು ಸ್ವೀಕರಿಸಿತ್ತು. ಇದರಲ್ಲಿ ಬೈಜೂಸ್, ರಿಲಯನ್ಸ್ ಜಿಯೋ ಜತೆ ಟಾಟಾ ಗ್ರೂಪ್ ಕೂಡ ಮುಂಚೂಣಿಯಲ್ಲಿತ್ತು. ಟೈಟಲ್ ಸ್ಪಾನ್ಸರ್‌ಶಿಪ್ ಟಾಟಾ ಪಾಲಾಗಲಿದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅದು ಡ್ರೀಮ್11 ಪಾಲಾಗಿತ್ತು.
Read more…
[wpas_products keywords=”deal of the day”]