Karnataka news paper

ಟೆಸ್ಟ್‌ ಸರಣಿ ಡ್ರಾ : ಬಾಂಗ್ಲಾದೇಶಕ್ಕೆ ತಿರುಗೇಟು ನೀಡಿದ ನ್ಯೂಜಿಲೆಂಡ್‌!


ಹೈಲೈಟ್ಸ್‌:

  • ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಡ್ರಾ.
  • ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 117 ರನ್‌ಗಳಿಂದ ಗೆದ್ದ ನ್ಯೂಜಿಲೆಂಡ್‌ ತಂಡ.
  • ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ್ದ ಟಾಮ್‌ ಲೇಥನ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ.

ಕ್ರೈಸ್ಟ್‌ಚರ್ಚ್‌: ಟಾಮ್‌ ಲೇಥಮ್‌(252) ದ್ವಿಶತಕ ಹಾಗೂ ವೇಗಿಗಳ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ನ್ಯೂಜಿಲೆಂಡ್‌ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ಇನಿಂಗ್ಸ್‌ ಹಾಗೂ 117 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿ 1-1 ಸಮಬಲದಲ್ಲಿ ಅಂತ್ಯ ಕಂಡಿತು.

ಬಾಂಗ್ಲಾದೇಶದ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಲಿಟಾನ್‌ ದಾಸ್‌ 111 ಎಸೆತಗಳಲ್ಲಿ 102 ನ್‌ ಗಳಿಸಿದರು. ಆದರೆ ಅವರ ಏಕಾಂಗಿ ಹೋರಾಟ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. 385 ರನ್‌ಗಳ ಫಾಲೋ ಆನ್‌ನೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಪ್ರವಾಸಿ ತಂಡ 278 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ 123 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡ ಅಪಾಯಕ್ಕೆ ಸಿಲುಕಿತ್ತು. ಈ ವೇಳೆ ಮುರಿಯದ ಆರನೇ ವಿಕೆಟ್‌ಗೆ ನಿರ್ಣಾಯಕ ಶತಕದ ಜೊತೆಯಾಟವಾಗಿದ್ದ ಲಿಟಾನ್‌ ದಾಸ್‌ ಹಾಗೂ ನೂರುಲ್‌ ಹಸನ್‌ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು.

ಬೌಲ್ಟ್ ಪರಾಕ್ರಮ, ಹೀನಾಯ ಸೋಲಿನ ಸುಳಿಯಲ್ಲಿ ಬಾಂಗ್ಲಾದೇಶ!

ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಸ್‌ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದ್ದ ಬಾಂಗ್ಲಾದೇಶ ತಂಡ, ಎರಡನೇ ಹಣಾಹಣಿಯಲ್ಲಿ ಕಿವಿಸ್‌ ಮಾರಕ ವೇಗಿಗಳನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಇನಿಂಗ್ಸ್‌ ಹಾಗೂ 117 ರನ್‌ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು.

ಮತ್ತೊಂದೆಡೆ ನ್ಯೂಜಿಲೆಂಡ್‌ ತಂಡದ ಹಿರಿಯ ಬ್ಯಾಟ್ಸ್‌ಮನ್ ರಾಸ್‌ ಟೇಲರ್‌(112 ಟೆಸ್ಟ್‌ ಪಂದ್ಯಗಳು) ಎರಡನೇ ಪಂದ್ಯದ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನವನ್ನು ಅಂತ್ಯಗೊಳಿಸಿದರು. ಕಿವೀಸ್‌ ಪರ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳಾಡಿದ ಮೊದಲ ಆಟಗಾರ ಎಂಬ ಕೀರ್ತಿಗೆ ಟೇಲರ್‌ ಭಾಜನರಾಗಿದ್ದು, ಪಂದ್ಯದ ಕೊನೆಯ ಎಸೆತದಲ್ಲಿ ಬೌಲ್‌ ಮಾಡಿ ಎಬಾದತ್‌ ಹುಸೇನ್‌ ಅವರ ವಿಕೆಟ್‌ ಅನ್ನು ಪಡೆದರು.

ಟೀಮ್ ಇಂಡಿಯಾದ ಬೆಸ್ಟ್‌ ಬ್ಯಾಟ್ಸ್‌ಮನ್‌-ಬೌಲರ್‌ ಹೆಸರಿಸಿದ ಲಾಬುಶೇನ್‌!

ನ್ಯೂಜಿಲೆಂಡ್‌ ತಂಡ ದ್ವಿತೀಯ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ರಾಸ್‌ ಟೇಲರ್‌ಗೆ ಅದ್ದೂರಿ ಬೀಳ್ಕೊಡುಗೆ ನೀಡಿತು. 7,683 ಟೆಸ್ಟ್‌ ರನ್‌ ಗಳಿಸಿರುವ ಟೇಲರ್‌, ಅತಿ ಹೆಚ್ಚು ರನ್‌ ಗಳಿಸಿದ ಕಿವೀಸ್‌ ಸಾರ್ವಕಾಲಿಕ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 37ನೇ ಸ್ಥಾನದೊಂದಿಗೆ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು.

ನ್ಯೂಜಿಲೆಂಡ್‌ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಮಾರಕ ಬೌಲಿಂಗ್‌ ದಾಳಿ ನಡೆಸಿದ ಕೈಲ್‌ ಜೇಮಿಸನ್‌ 4 ವಿಕೆಟ್‌ ಕಿತ್ತು 82 ರನ್‌ ಬಿಟ್ಟುಕೊಟ್ಟರೆ, ನೀಲ್‌ ವ್ಯಾಗ್ನರ್ 77 ರನ್‌ ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆದರೆ, ನ್ಯೂಜಿಲೆಂಡ್‌ ತಂಡದ ಗೆಲುವಿನ ಶ್ರೇಯ ಟಾಮ್‌ ಲೇಥಮ್‌ಗೆ ಸಲ್ಲಬೇಕು. ಏಕೆಂದರೆ ಪ್ರಥಮ ಇನಿಂಗ್ಸ್‌ ಅವರು 252 ರನ್‌ ಗಳಿಸುವ ಮೂಲಕ ಕಿವೀಸ್‌ನ 521 ರನ್‌ಗಳ ಮೊತ್ತಕ್ಕೆ ಕಾರಣರಾಗಿದ್ದರು. ಇವರಿಗೆ ಡೆವೋನ್‌ ಕಾನ್ವೇ ಶತಕ ಸಿಡಿಸಿ ಸಾಥ್‌ ನೀಡಿದ್ದರು.


ಸಂಕ್ಷಿಪ್ತ ಸ್ಕೋರ್‌

ನ್ಯೂಜಿಲೆಂಡ್‌: ಪ್ರಥಮ ಇನಿಂಗ್ಸ್‌ 128.5 ಓವರ್‌ಗಳಿಗೆ 521/6 (ಟಾಮ್‌ ಲೇಥಮ್‌ 252, ಡೆವೋನ್‌ ಕಾನ್ವೇ 109, ವಿಲ್‌ ಯಂಗ್‌ 54, ಟಾಮ್‌ ಬ್ಲಂಡೆಲ್‌ 57; ಶೋರಿಫುಲ್ ಇಸ್ಲಾಮ್‌ 79 ಕ್ಕೆ 2, ಎಬಾದತ್‌ ಹುಸೇನ್‌ 143ಕ್ಕೆ 20

ಬಾಂಗ್ಲಾದೇಶ:
41.2 ಓವರ್‌ಗಳಿಗೆ 126/10 (ಯಾಸಿರ್‌ ಅಲಿ 55, ನೂರುಲ್‌ ಹಸನ್‌ 41; ಟ್ರೆಂಟ್‌ ಬೌಲ್ಟ್‌ 43/5, ಟಿಮ್‌ ಸೌಥೀ 28ಕ್ಕೆ 3, ಕೈಲ್‌ ಜೇಮಿಸನ್‌ 32 ಕ್ಕೆ 2)

ದ್ವಿತೀಯ ಇನಿಂಗ್ಸ್‌: 79.3 ಓವರ್‌ಗಳಿಗೆ 278/10 (ಲಿಟಾನ್‌ ದಾಸ್‌ 102, ಮೊಮಿನುಲ್‌ ಹಕ್‌ 37, ನೂರುಲ್ ಹಸನ್‌ 36; ಕೈಲ್‌ ಜೇಮಿಸನ್‌ 82ಕ್ಕೆ 4, ನೀಲ್‌ ವ್ಯಾಗ್ನರ್‌ 77 ಕ್ಕೆ 3)



Read more

[wpas_products keywords=”deal of the day gym”]