Karnataka news paper

ಬಿಸಿಯೂಟದಲ್ಲಿ ಮೊಟ್ಟೆ ಯೋಜನೆ ಕಲ್ಯಾಣ ಕರ್ನಾಟಕದ ಆಚೆಗೂ ವಿಸ್ತರಿಸಲು ಆಗ್ರಹ..!


ಹೈಲೈಟ್ಸ್‌:

  • ಹಾವೇರಿ ಜಿಲ್ಲೆಗೂ ಮೊಟ್ಟೆ ವಿತರಣೆ ಯೋಜನೆ ವಿಸ್ತರಣೆಗೆ ಒತ್ತಾಯ
  • ನಮಗೂ ಬೇಕು ಮೊಟ್ಟೆ ಎಂದು ಪರ-ವಿರೋಧದ ಮಧ್ಯೆಯೂ ಬೇಡಿಕೆ
  • ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆ ನಿವಾರಣೆ ಮಾಡುವ ಮೊಟ್ಟೆ

ಮಂಜುನಾಥ ದಾಸಣ್ಣನವರ
ಹಾವೇರಿ:
ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ರಾಜ್ಯ ಸರಕಾರ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಹಾಗೂ ಬಿಜಾಪೂರ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜತೆಗೆ ಮೊಟ್ಟೆ ಹಾಗೂ ಬಾಳೆ ಹಣ್ಣು ವಿತರಿಸುತ್ತಿರುವ ಯೋಜನೆಯನ್ನು ಹಾವೇರಿ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳಿಗೂ ವಿಸ್ತರಿಸುವಂತೆ ಹಕ್ಕೊತ್ತಾಯದ ಕೂಗು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಸರಕಾರಿ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 8ನೇ ತರಗತಿ ಶಾಲಾ ಮಕ್ಕಳು ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಈ ಹಿನ್ನೆಲೆ ಸರಕಾರ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಹಾಗೂ ಕಿತ್ತೂರ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಜತೆಗೆ ಪ್ರಾಯೋಗಿಕವಾಗಿ ವಾರದಲ್ಲಿ ಮೂರು ದಿನ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುವ ವಿನೂತನ ಯೋಜನೆ ಜಾರಿಗೆ ತಂದಿದೆ.

ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಕೆಲವರು ಧಾರ್ಮಿಕತೆಗೆ ಧಕ್ಕೆ ಬರುತ್ತಿದೆ ಎಂದು ಮೊಟ್ಟೆ ವಿತರಣಾ ಯೋಜನೆ ಕೈಬಿಡಬೇಕೆಂದು ಸರಕಾರಕ್ಕೆ ಒತ್ತಡವನ್ನು ಹಾಕುತ್ತಿದ್ದಾರೆ. ಆದರೆ ಕೆಲ ತಜ್ಞರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು, ಅಧಿಕಾರಿಗಳು, ಪೋಷಕರು, ಶಾಲಾ ಮಕ್ಕಳು ಮೊಟ್ಟೆ ವಿತರಣೆ ಯೋಜನೆಗೆ ಸಂಪೂರ್ಣ ಸಹಮತ ವ್ಯಕ್ತಪಡಿಸುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿಯೂ ಈ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಬಾರೆ..ಬಾರೆ..ತಗೊಳ್ಳಿ, ರುಚಿನೋಡಿ!
ಕಲಬೆರಕೆ ಇಲ್ಲದ ಆಹಾರ

ಜನ ಸಾಮಾನ್ಯರಿಗೆ ಅತಿ ಕಡಿಮೆ ಬೆಲೆಯಲ್ಲಿ ಹೇರಳವಾಗಿ ಲಭ್ಯತೆ ಇರುವ ಹಾಗೂ ಯಾವುದೇ ಕಲಬೆರಕೆ ಇಲ್ಲದ ಏಕೈಕ ಆಹಾರವೆಂದರೆ ಮೊಟ್ಟೆ. ಮೊಟ್ಟೆಯಲ್ಲಿ ಕಬ್ಬಿಣಾಂಶ, ಪೌಷ್ಟಿಕಾಂಶ, ವಿಟಮಿನ್‌ ಡಿ, ಹೈ ಪ್ರೋಟೀನ್‌, ಕ್ಯಾಲ್ಸಿಯಂ, ಪಾಸ್ಪರಸ್‌ ಸೇರಿದಂತೆ ರೋಗ ನಿರೋಧಕ ಶಕ್ತಿ ಒದಗಿಸುವ ಹಾಗೂ ಅತ್ಯಂತ ಉತ್ಕೃಷ್ಟ ಖನಿಜ ಸಂಪತ್ತನ್ನು ಹೊಂದಿರುವ ಆಹಾರವಾಗಿದೆ.

ಉತ್ತಮ ಆರೋಗ್ಯಕ್ಕಾಗಿ ಮೊಟ್ಟೆ

ಅಂಗನವಾಡಿ, ಪ್ರಾಥಮಿಕ, ಮಾಧ್ಯಮಿಕ ಶಾಲಾ ಮಕ್ಕಳು, ಮಹಿಳೆಯರು, ಯುವಕರು, ಗರ್ಭಿಣಿಯರು, ವಯೋವೃದ್ಧರು ಸೇರಿದಂತೆ ಬಹುತೇಕ ಎಲ್ಲಾ ವರ್ಗದ ಜನರು ಸೇವಿಸಬಹುದಾದ ಪರಿಪೂರ್ಣ ಆಹಾರ ಪದಾರ್ಥವಾಗಿದೆ. ಉತ್ತಮ ಆರೋಗ್ಯದ ಹಿತದೃಷ್ಟಿಯಿಂದ ಮೊಟ್ಟೆ ಸೇವನೆ ಬಹಳಷ್ಟು ಒಳಿತು ಎಂಬ ಮಾತುಗಳು ಸಾರ್ವಜನಿಕರಿಂದಲೂ ಕೇಳಿ ಬರುತ್ತಿವೆ. ಕೋವಿಡ್‌ ಸಂದರ್ಭದಲ್ಲಿ ಬಹಳಷ್ಟು ಗರ್ಭಿಣಿಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಸರಕಾರಿ ಆಸ್ಪತ್ರೆ ಹಾಗೂ ಅಂಗನವಾಡಿಗಳ ಮೂಲಕ ಹೆಚ್ಚಿನ ಮೊಟ್ಟೆಗಳನ್ನು ವಿತರಿಸಿರುವುದನ್ನು ಕಾಣಬಹುದು.

ಶಾಲಾ ಮಕ್ಕಳ ಪೌಷ್ಟಿಕಾಂಶದ ಆಹಾರಕ್ಕೂ ವಿರೋಧ; ಮೊಟ್ಟೆ ನೀಡಿದ್ರೆ ಸರ್ಕಾರ ಪತನದ ಎಚ್ಚರಿಕೆ!
2 ಲಕ್ಷ ಮಕ್ಕಳಿಗೆ ಸೌಲಭ್ಯ

ಸರಕಾರದ ಮೊಟ್ಟೆ ವಿತರಣೆ ಯೋಜನೆಯನ್ನು ಹಾವೇರಿ ಜಿಲ್ಲೆಯಾದ್ಯಂತ ವಿಸ್ತರಿಸಿದರೆ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸುಮಾರು 2 ಲಕ್ಷಕ್ಕೂ ಅಧಿಕ ಶಾಲಾ ಮಕ್ಕಳಿಗೆ ಸೌಲಭ್ಯ ಸಿಗಲಿದೆ. ಶಾಲೆಗಳಲ್ಲಿ ಕೋವಿಡ್‌ನಿಂದ ಇಳಿಕೆಯಾಗಿದ್ದ ಹಾಜರಾತಿ ಪ್ರಮಾಣ ಕೂಡ ಹೆಚ್ಚಳ ಕಾಣಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

‘ಮೊಟ್ಟೆಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉತ್ತಮ ಗುಣಗಳಿವೆ. ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಪೌಷ್ಟಿಕಾಂಶಗಳನ್ನು ದೇಹಕ್ಕೆ ಪೂರೈಸುವ ಅಗಾಧ ಪ್ರಮಾಣ ಶಕ್ತಿಯನ್ನು ಇವು ಹೊಂದಿವೆ. ಶಾಲಾ ಮಕ್ಕಳಲ್ಲಿ, ಗರ್ಭಿಣಿಯರಲ್ಲಿ ಕಂಡುಬರುವ ಅಪೌಷ್ಟಿಕತೆ ನಿವಾರಿಸುವ ಶಕ್ತಿ ಮೊಟ್ಟಿಗಳಲ್ಲಿದೆ’ ಎಂದು ಹಾವೇರಿಯ ಕೋಳಿ ಸಾಕಣೆದಾರ ಈಶ್ವರ ಪತ್ರಿ ಹೇಳಿದ್ದಾರೆ.

‘ಅಪೌಷ್ಟಿಕತೆ ಸಮಸ್ಯೆ ಎದುರಿಸುವ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸರಕಾರ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸುತ್ತಿರುವುದು ಸ್ವಾಗತಾರ್ಹ. ಎಲ್ಲಾ ಮಕ್ಕಳು ಮೊಟ್ಟೆಗಳನ್ನು ಇಷ್ಟಪಡುತ್ತಿದ್ದು, ಮುಂಬರುವ ದಿನಗಳಲ್ಲಿ ಎಲ್ಲಾ ಶಾಲೆಗಳ ಮಕ್ಕಳಿಗೂ ಮೊಟ್ಟೆ ವಿಸ್ತರಿಸಿದರೆ ಅಪೌಷ್ಟಿಕತೆ ತೊಂದರೆ ನಿವಾರಿಸಬಹುದು’ ಎಂದು ಹಾವೇರಿಯ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಎಸ್‌. ಬಿ. ಹಾದಿಮನಿ ತಿಳಿಸಿದ್ದಾರೆ.

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೇಯಿಸಿದ ಮೊಟ್ಟೆ ಹಾಗೂ ಬಾಳೆ ಹಣ್ಣು



Read more