ಹೈಲೈಟ್ಸ್:
- ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
- ಕಾಶಿ ವಿಶ್ವನಾಥನ ವೈಭವ ಮತ್ತು ಮಹಿಮೆಯನ್ನು ಬಣ್ಣಿಸಿದ್ದ ಮಧ್ವಾಚಾರ್ಯರು
- ಇದು ಭವ್ಯ ಭವನವಲ್ಲ, ಭಾರತದ ಸನಾತನ ಸಂಸ್ಕೃತಿ ಮತ್ತು ಪರಂಪರೆಗಳ ಸಂಕೇತ
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದ್ವೈತ ಮತದ ಸ್ಥಾಪಕ ಮಧ್ವಾಚಾರ್ಯ ಅವರನ್ನು ಸ್ಮರಿಸಿದರು. ‘ಕನ್ನಡ ಭಾಷೆಯಲ್ಲಿ ಹೇಳಿದ್ದಾರೆ, ಸದ್ಗುರು ಮಧ್ವಾಚಾರ್ಯರು ಶಿಷ್ಯರ ಜತೆ ಹೋಗುವಾಗ ಹೇಳುತ್ತಾರೆ, ಕಾಶಿಯ ವಿಶ್ವನಾಥ ಪಾಪದ ನಿವಾರಣೆ ಮಾಡುತ್ತಾನೆ ಎಂದು. ಅವರು ತಮ್ಮ ಶಿಷ್ಯರಿಗೆ ಕಾಶಿಯ ವೈಭವ ಮತ್ತು ಅದರ ಮಹಿಮೆಯನ್ನೂ ತಿಳಿಸಿದ್ದರು’ ಎಂದು ಮೋದಿ ಹೇಳಿದರು.
ಸ್ಥಳೀಯ ಭೋಜಪುರಿ ಭಾಷೆಯಲ್ಲಿ ಮಾತು ಆರಂಭಿಸಿದ ಅವರು, ಈಗ ಹೊಸ ಇತಿಹಾಸ ಸೃಷ್ಟಿಸಲಾಗುತ್ತಿದೆ. ನಾವು ಅದಕ್ಕೆ ಸಾಕ್ಷಿಭೂತರಾಗುವ ಅದೃಷ್ಟ ಮಾಡಿದ್ದೇವೆ. ಕಾಶಿ ವಿಶ್ವನಾಥ ದೇವಸ್ಥಾನದ ಆವರಣ ಸುಮಾರು 3,000 ಚದರ ಅಡಿ ಮಾತ್ರ ಇತ್ತು. ಅದೀಗ ಐದು ಲಕ್ಷ ಚದರ ಅಡಿಯಾಗಿದೆ. ಈಗ 50 ಸಾವಿರದಿಂದ 75 ಸಾವಿರ ಭಕ್ತರು ದೇವಸ್ಥಾನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಬಹುದು ಎಂದು ತಿಳಿಸಿದರು.
ಕಾಶಿ ವಿಶ್ವನಾಥನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಾಗುತ್ತಿದೆ. ಕಾಶಿ ವಿಶ್ವನಾಥ ಧಾಮ ಆವರಣ ಕೇವಲ ಒಂದು ಭವ್ಯ ಭವನವಲ್ಲ, ಆದರೆ ಅದು ಭಾರತದ ಸನಾತನ ಸಂಸ್ಕೃತಿ ಮತ್ತು ಪರಂಪರೆಗಳ ಸಂಕೇತ. ಪ್ರಾಚೀನ ಪ್ರೇರಣೆಗಳು ಭವಿಷ್ಯಕ್ಕೆ ಹೊಸ ದಿಕ್ಕು ನೀಡುತ್ತಿವೆ ಎಂದರು.
ಈ ಭವ್ಯ ಸಂಕೀರ್ಣವನ್ನು ನಿರ್ಮಿಸಲು ಕೆಲಸ ಮಾಡಿದ ಪ್ರತಿ ಕಾರ್ಮಿಕನಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಕೋವಿಡ್ 19ರ ಸಮಯದಲ್ಲಿಯೂ ನಿರ್ಮಾಣ ಕಾರ್ಯ ನಿಂತಿರಲಿಲ್ಲ ಎಂದು ಪ್ರಧಾನಿ ಮೋದಿ ಕಟ್ಟಡ ನಿರ್ಮಾಣದಲ್ಲಿ ತೊಡಗಿದ ಕಾರ್ಮಿಕರನ್ನು ಶ್ಲಾಘಿಸಿದರು. ಇದರ ಬಳಿಕ ಅವರು ಕಾರ್ಮಿಕರ ಜತೆಗೆ ಚಿತ್ರ ತೆಗೆಸಿಕೊಂಡು ಅವರೊಂದಿಗೆ ಭೋಜನ ಸ್ವೀಕರಿಸಿದರು.
ಕಾಶಿ ವಿಶ್ವನಾಥ ಧಾಮದ ಉದ್ಘಾಟನೆಯು ಭಾರತಕ್ಕೆ ನಿರ್ಣಾಯಕ ನಿರ್ಧಾರವಾಗಿದೆ. ಉಜ್ವಲ ಭವಿಷ್ಯದ ಹರಿಕಾರವಾಗಿದೆ. ನವ ಭಾರತವು ತನ್ನ ಸಂಸ್ಕೃತಿಯ ಬಗ್ಗೆ ಹೆಮ್ಮೆ ಹೊಂದಿದೆ. ತನ್ನ ಸಾಮರ್ಥ್ಯದ ಕುರಿತು ಆತ್ಮವಿಶ್ವಾಸ ಹೊಂದಿದೆ. ನೀವು ಇಲ್ಲಿಗೆ ಬಂದಾಗ ನಂಬಿಕೆಯೊಂದೇ ಇಲ್ಲಿಗೆ ಕರೆದುಕೊಂಡು ಬಂದಿರುವುದಿಲ್ಲ. ಜತೆಗೆ ನಮ್ಮ ಇತಿಹಾಸದ ಹೆಮ್ಮೆಯನ್ನೂ ತರುತ್ತೀರಿ, ಜತೆಗೆ ಪ್ರಾಚೀನ ಮತ್ತು ವರ್ತಮಾನಗಳು ಹೇಗೆ ಸಂಗಮಗೊಂಡಿವೆ ಎಂಬುದಕ್ಕೆ ಸಾಕ್ಷಿಯಾಗುತ್ತೀರಿ ಎಂದರು.
‘ನಾನು ನಿಮ್ಮಿಂದ ಮೂರು ನಿರ್ಣಯಗಳನ್ನು ಬಯಸಿದ್ದೇನೆ. ಇದು ನಿಮಗಾಗಿ ಅಲ್ಲ, ನಮ್ಮ ದೇಶಕ್ಕಾಗಿ- ಸ್ವಚ್ಛತೆ, ಸೃಷ್ಟಿ ಮತ್ತು ಆವಿಷ್ಕಾರ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ನಿರಂತರ ಪ್ರಯತ್ನಗಳು ಬೇಕಿವೆ’ ಎಂದು ಹೇಳಿದರು.
ನಾನು ವಾರಾಣಸಿ ಜನರ ಮೇಲಿನ ನಂಬಿಕೆಯೊಂದಿಗೆ ವಾರಾಣಸಿಗೆ ಬಂದಿದ್ದೆ. ಕೆಲವು ಜನರು ವಾರಾಣಸಿಯ ಜನರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದರು ಎನ್ನುವುದು ನನಗೆ ನೆನಪಿದೆ. ವಾರಾಣಸಿಯ ಬಗ್ಗೆ ಅಂತಹ ಅಭಿಪ್ರಾಯ ಇರುವುದು ನನಗೆ ಅಚ್ಚರಿ ಮೂಡಿಸಿತ್ತು. ಆದರೆ ‘ಕಾಶಿ ಯಾವಾಗಲೂ ಕಾಶಿ’. ಇದಕ್ಕೆ ಒಂದು ಇತಿಹಾಸವಿದೆ. ಏರಿಳಿತಗಳಿವೆ. ಆಕ್ರಮಣಕಾರರು ವಾರಾಣಸಿಯನ್ನು ನಾಶಪಡಿಸಲು ಪ್ರಯತ್ನಿಸಿದರು. ಆದರೆ ಸುಲ್ತಾರು ಬೆಳೆದರು ಮತ್ತು ನೆಲಕಚ್ಚಿದರು. ವಾರಾಣಸಿ ಮಾತ್ರ ಹಾಗೆಯೇ ಉಳಿದುಕೊಂಡಿತು. ನಮ್ಮ ದೇಶಕ್ಕೆ ಔರಂಗಾಜಾಬ್ ಬಂದರೆ, ಶಿವಾಜಿ ಕೂಡ ಬೆಳೆದಿದ್ದ ಎಂದರು.
ಸಂಸ್ಕೃತಿಯನ್ನು ಉಗ್ರವಾದದೊಂದಿಗೆ ಕೊಂದು ಹಾಕಲು ಪ್ರಯತ್ನಿಸಿದ ಔರಂಗಜಾಬ್‌ನ ಹಿಂಸೆಯನ್ನು ಇತಿಹಾಸ ಕಂಡಿದೆ. ಆದರೆ ಈ ದೇಶದಲ್ಲಿ ಔರಂಗಂಜೇಬನಿಗೆ ಸಮನಾಗಿ ಶಿವಾಜಿ ಬೆಳೆದಿದ್ದರು ಎಂದು ಹೇಳಿದರು.