Karnataka news paper

ಬಿಟ್ ಕಾಯಿನ್ ಹಗರಣದ ಸೂತ್ರಧಾರ ಶ್ರೀಕೃಷ್ಣ ತನಿಖಾಧಿಕಾರಿ ಎದುರು ದಿಢೀರ್ ಹಾಜರು


ಬೆಂಗಳೂರು: ‘ಡ್ರಗ್ಸ್’ ಪ್ರಕರಣದಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26), ಪ್ರಕರಣದ ತನಿಖಾಧಿಕಾರಿ ಎದುರು ಭಾನುವಾರ ಸಂಜೆ ದಿಢೀರ್ ಹಾಜರಾಗಿ ಸಹಿ ಹಾಕಿದ್ದಾನೆ.

ಬಿಟ್ ಕಾಯಿನ್ ಹಗರಣದ ಪ್ರಮುಖ ಸೂತ್ರಧಾರ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಆತನ ಸ್ನೇಹಿತ ವಿಷ್ಣುಭಟ್‌ನನ್ನು ಜೀವನಬಿಮಾನಗರ ಠಾಣೆ ಪೊಲೀಸರು ಇತ್ತೀಚೆಗಷ್ಟೇ ಬಂಧಿಸಿದ್ದರು. ಪ್ರಕರಣದಲ್ಲಿ ಶ್ರೀಕೃಷ್ಣನಿಗೆ ಜಾಮೀನು ನೀಡಿದ್ದ ನ್ಯಾಯಾಲಯ, ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ತನಿಖಾಧಿಕಾರಿ ಎದುರು  ಹಾಜರಾಗಿ ಸಹಿ ಹಾಕುವಂತೆ ಷರತ್ತು ವಿಧಿಸಿತ್ತು.

ಜಾಮೀನು ಮೇಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದ ಶ್ರೀಕೃಷ್ಣ, ಮರುದಿನದಿಂದಲೇ ತಲೆಮರೆಸಿಕೊಂಡಿದ್ದ. ಆತ ಎಲ್ಲಿದ್ದಾನೆಂಬ ಮಾಹಿತಿಯೂ ಪೊಲೀಸರಿಗೆ ಇರಲಿಲ್ಲ. ನ್ಯಾಯಾಲಯದ ಷರತ್ತಿನ ಪ್ರಕಾರ ಆತ ಠಾಣೆಗೂ ಹಾಜರಾಗಿರಲಿಲ್ಲ. ಆತನ ಜಾಮೀನು ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದರು.

ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದ ಪ್ರಮುಖ ಸೂತ್ರಧಾರ ಶ್ರೀಕೃಷ್ಣ ಪರಾರಿ

ಇದರ ಬೆನ್ನಲ್ಲೇ ಭಾನುವಾರ ಸಂಜೆ ತಮ್ಮ ವಕೀಲರ ಜೊತೆಯಲ್ಲಿ ಶ್ರೀಕೃಷ್ಣ ಜೀವನ್‌ಬಿಮಾನಗರ ಠಾಣೆಗೆ ಬಂದಿದ್ದ. ತನಿಖಾಧಿಕಾರಿ ಎದುರು ಹಾಜರಾಗಿ, ಠಾಣೆ ಪುಸ್ತಕದಲ್ಲಿ ಸಹಿ ಮಾಡಿ ಹೋಗಿದ್ದಾನೆ.

‘ಮಾದಕ ವಸ್ತು ಸೇವಿಸಿ ಹೋಟೆಲೊಂದರ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಶ್ರೀಕೃಷ್ಣ ಹಾಗೂ ಉದ್ಯಮಿಯೊಬ್ಬರ ಮಗ ವಿಷ್ಣು ಭಟ್‌ನನ್ನು ನವೆಂಬರ್‌ 5ರಂದು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ಮುಂದುವರಿದಿದೆ. ಡಿ. 11ರಂದು ಶ್ರೀಕೃಷ್ಣ ಠಾಣೆಗೆ ಬರಬೇಕಿತ್ತು. ಆದರೆ, ಆತ ಹಾಜರಾಗಿರಲಿಲ್ಲ. ಆತ ರಾಜ್ಯವನ್ನೇ ತೊರೆದು ಪರಾರಿಯಾಗಿರುವ ಮಾಹಿತಿ ಲಭ್ಯವಾಗಿತ್ತು. ಆತನಿಗಾಗಿ ಹುಡುಕಾಟ ಆರಂಭಿಸಲಾಗಿತ್ತು. ಆತನೇ ಭಾನುವಾರ ಠಾಣೆಗೆ ಬಂದು ಸಹಿ ಮಾಡಿ ಹೋಗಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಡಿ. 25ರಂದು ಪುನಃ ಠಾಣೆಗೆ ಬಂದು ಸಹಿ ಮಾಡುವಂತೆ ಆತನಿಗೆ ಹೇಳಲಾಗಿದೆ. ಆಕಸ್ಮಾತ್ ನಿಗದಿತ ದಿನದಂದು ಆತ ಹಾಜರಾಗದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ಮೂಲಗಳು ತಿಳಿಸಿವೆ.



Read more from source