ಹೈಲೈಟ್ಸ್:
- ನಕಲಿ ದಾಖಲೆಯಿಂದ ಭೂಗಳ್ಳರ ಪಾಲಾಗಿದ್ದ 342.90 ಕೋಟಿ ರೂ. ಮೌಲ್ಯದ ಭೂಮಿ
- ಒಟ್ಟು 54.25 ಎಕರೆ ಜಮೀನು ಮರಳಿ ಮುಡಾ ವಶಕ್ಕೆ
- 216.05 ಕೋಟಿ ರೂ. ಮೌಲ್ಯದ 139 ನಿವೇಶನ ಮುಡಾ ಸುಪರ್ದಿಗೆ
ಮೈಸೂರು: ‘ಇದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಸ್ತಿ, ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ..’ ಈ ರೀತಿಯ ಫಲಕ ಅಳವಡಿಸುವ ಮೂಲಕ ಮುಡಾ, ತನ್ನ ಆಸ್ತಿಯನ್ನು ಸಂರಕ್ಷಣೆ ಮಾಡಿಕೊಳ್ಳುವಲ್ಲಿ ನಿರತರಾಗಿದೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಆಸ್ತಿಯನ್ನು ಒತ್ತುವರಿ ಮಾಡಿ ನಿರ್ಮಾಣವಾಗಿರುವ ಅಂಗಡಿ, ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಒತ್ತುವರಿದಾರರ ವಿರುದ್ಧ ಸಮರ ಸಾರಿರುವ ಮುಡಾ ಆಡಳಿತ ಮತ್ತು ಅಧಿಕಾರಿಗಳು, ಆಸ್ತಿ ದುರುಪಯೋಗವಾಗದಂತೆ ಕಟ್ಟೆಚ್ಚರ ವಹಿಸುತ್ತಿದ್ದಾರೆ.
ಯಾವುದೇ ರಾಜಕೀಯ ಲಾಬಿ ಮತ್ತು ಒತ್ತಡಕ್ಕೆ ಮಣಿಯದೇ ಒತ್ತುವರಿಯಾಗಿರುವ ತನ್ನ ಆಸ್ತಿ ರಕ್ಷಿಸಲು ಮುಡಾ, ಕಳೆದ ಆರು ತಿಂಗಳಿಂದ ನಡೆಸಿದ ತೆರವು ಕಾರ್ಯಾ ಚರಣೆಯಿಂದ 558 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಮತ್ತೆ ವಶಕ್ಕೆ ಪಡೆದಿದೆ. ಮುಡಾ ಜಾಗದಲ್ಲಿ ಅಕ್ರಮವಾಗಿ ಮಳಿಗೆ, ಶೆಡ್‌ಗಳನ್ನು ನಿರ್ಮಿಸಿ ಬಾಡಿಗೆ ನೀಡುವ ಮೂಲಕ ಆದಾಯ ಗಳಿಸುತ್ತಿದ್ದ ಭೂಗಳ್ಳರಿಗೆ, ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ.
ಮೈಸೂರು ನಗರದ ಹಲವು ಬಡಾವಣೆಗಳಲ್ಲಿ ಮುಡಾಗೆ ಸೇರಿದ ಜಮೀನು, ನಿವೇಶನಗಳಿಗೆ ಬೇನಾಮಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದ ಪ್ರಕರಣಗಳನ್ನು ಒಂದೊಂದಾಗಿ ಪತ್ತೆ ಹಚ್ಚಿದ್ದ ಮುಡಾ ಆಯುಕ್ತರು, ಕೋರ್ಟಿನಲ್ಲಿ ಪ್ರಕರಣದ ವ್ಯಾಜ್ಯ ಇತ್ಯರ್ಥವಾಗುತ್ತಲೇ ತೆರವು ಕಾರ್ಯಾಚರಣೆ ನಡೆಸಿ, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ನಕಲಿ ದಾಖಲೆಯಿಂದ ಭೂಗಳ್ಳರ ಪಾಲಾಗಿದ್ದ 342.90 ಕೋಟಿ ರೂ. ಮೌಲ್ಯದ 54.25 ಎಕರೆ ಜಮೀನು, 216.05 ಕೋಟಿ ರೂ. ಮೌಲ್ಯದ 139 ನಿವೇಶನಗಳನ್ನು ಮುಡಾ ತನ್ನ ಸುಪರ್ದಿಗೆ ಪಡೆದಿದೆ. ಈ ಮೂಲಕ ಕೇವಲ ಆರು ತಿಂಗಳಲ್ಲಿ 558 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂರಕ್ಷಣೆ ಮಾಡಿಕೊಂಡಿದೆ.
ಮೈಸೂರು ತಾಲೂಕಿನ ಲಲಿತಾದ್ರಿ ಪುರದ ಸರ್ವೆ 16/1ರಿಂದ 18/1ರ ತನಕ 15 ಎಕರೆ 19 ಗುಂಟೆ, ಹಂಚ್ಯಾ ಸರ್ವೆ ನಂ.275ರಲ್ಲಿ 8.27 ಎಕರೆ, ಹಿನಕಲ್ ಸರ್ವೆ ನಂ. 331/4ರಲ್ಲಿ 8.31 ಎಕರೆ, ಬಸವನಹಳ್ಳಿ ಸರ್ವೆ ನಂ. 123/1ರಲ್ಲಿ 6.14 ಎಕರೆ, ಸಾತಗಳ್ಳಿ ಸರ್ವೆ ನಂ.68/1ರಲ್ಲಿ 3.27 ಎಕರೆ ಜಮೀನು ಸೇರಿ ದೇವನೂರು, ಹಂಚ್ಯಾ, ಲಲಿತಾದ್ರಿ ಪುರ, ದೇವನೂರು, ಬೆಲವತ್ತದಲ್ಲಿ 54.25 ಜಮೀನು ತೆರವುಗೊಳಿಸಿದ್ದರಿಂದ ಅಂದಾಜು 342.90 ಕೋಟಿ ರೂ. ಆದಾಯವಾಗಿದೆ.
139 ನಿವೇಶನದಿಂದ 216 ಕೋಟಿ: ಮುಡಾ ರಚಿಸಿದ್ದ ಬಡಾವಣೆಗಳಲ್ಲಿ ನಕಲಿ ದಾಖಲೆ ಸೃಷ್ಟಿ ಸೇರಿ ಇನ್ನಿತರ ಹೆಸರಿನಲ್ಲಿ ಅತಿಕ್ರಮಿಸಿಕೊಂಡಿದ್ದ 139 ನಿವೇಶನಗಳನ್ನು ತೆರವುಗೊಳಿಸಿ 216.05 ಕೋಟಿ ಆದಾಯ ಬಂದಿದೆ. ದೇವನೂರು ಎರಡನೇ ಹಂತದಲ್ಲಿ 14 ನಿವೇಶನ, ವಾಣಿಜ್ಯ ಮಳಿಗೆಗಳಿಂದ 10 ಕೋಟಿ ರೂ., ಹಿನಕಲ್ ಸರ್ವೆ ನಂ.120/121/2ರಲ್ಲಿ 13 ನಿವೇಶನದಿಂದ 20 ಕೋಟಿ ರೂ., ಹಿನಕಲ್ ಸರ್ವೆ ನಂ.120,121/2ರಲ್ಲಿ 13 ನಿವೇಶನದಿಂದ 20 ಕೋಟಿ ರೂ., ವಿದ್ಯಾರಣ್ಯಪುರಂನಲ್ಲಿ 12 ನಿವೇಶನದಿಂದ 8 ಕೋಟಿ ರೂ. ಬನ್ನಿ ಮಂಟಪ, ದೇವನೂರು ಎರಡನೇ ಹಂತ, ಕುವೆಂಪು ನಗರ ಪಡುವಣ ರಸ್ತೆ, ಟಿ. ಕೆ. ಬಡಾವಣೆ, ಬೆಲವತ್ತ, ದಟ್ಟಗಳ್ಳಿ, ಎನ್. ಆರ್. ಮೊಹಲ್ಲಾ ನಾರ್ತ್ ಈಸ್ಟ್ , ಗೋಕುಲಂನಲ್ಲಿ ಅತಿಕ್ರಮಿಸಿಕೊಂಡಿದ್ದ ನಿವೇಶನಗಳನ್ನು ತೆರವುಗೊಳಿಸಲಾಗಿದೆ. ವಿಶೇಷವಾಗಿ ಬಸವನಹಳ್ಳಿ ಸರ್ವೆ ನಂ.118 ರಲ್ಲಿ 50×80 ಅಳತೆಯ 11, 40×60 ಅಳತೆಯ 36 ನಿವೇಶನ ಸೇರಿ 100 ಕೋಟಿ ರೂ. ಆದಾಯ ಸಂಗ್ರಹವಾಗಿರುವುದು ಗಮನಾರ್ಹವಾಗಿದೆ.
Read more
[wpas_products keywords=”deal of the day sale today offer all”]