ಹೈಲೈಟ್ಸ್:
- ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ಆಗಿದ್ದ ಲೋಪದ ಸಂಬಂಧ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಮಾನ
- ಸುಪ್ರೀಂ ಕೋರ್ಟ್ ನೇಮಿಸಲಿರುವ ಉನ್ನತ ಮಟ್ಟದ ಸಮಿತಿಯಿಂದ ತನಿಖೆ
- ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನೇತೃತ್ವ ಸಮಿತಿಗೆ ತನಿಖೆ ಹೊಣೆ
ಈ ಸಂಬಂಧ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಪಂಜಾಬ್‌ನ ಕಾಂಗ್ರೆಸ್ ಸರಕಾರಕ್ಕೆ ಈಗ ನಡೆಯುತ್ತಿರುವ ತನಿಖೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ. ನೂತನ ತನಿಖಾ ತಂಡ ನೇಮಕ ಸಂಬಂಧ ವಿಸ್ತೃತ ಆದೇಶವನ್ನು ಹೊರಡಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ ಹೇಳಿದೆ.
ಚಂಡೀಗಢ ಡಿಜಿಪಿ, ಎನ್‌ಐಎ ಐಜಿ, ರಿಜಿಸ್ಟ್ರಾರ್ ಜನರಲ್ ಮತ್ತು ಹೆಚ್ಚುವರಿ ಡಿಜಿ, ಇಂಟಲಿಜೆನ್ಸ್ ಬ್ಯೂರೋದ ಅಧಿಕಾರಿಗಳು ಈ ತಂಡದಲ್ಲಿ ಇರಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಮಾಹಿತಿ ನೀಡಿದೆ.
ಸೋಮವಾರದ ವಿಚಾರಣೆ ವೇಳೆ ಪಂಜಾಬ್ ಸರಕಾರವನ್ನು ದೂರಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಘಟನೆಯಲ್ಲಿ ಸಂಪೂರ್ಣ ಗುಪ್ತಚರ ವೈಫಲ್ಯ ನಡೆದಿದೆ ಮತ್ತು ಎಸ್‌ಪಿಜಿ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದರು. ಮಾರ್ಗದಲ್ಲಿ ಪ್ರತಿಭಟನಾಕಾರರು ಇದ್ದಾರೆ ಎಂಬ ಬಗ್ಗೆ ರಾಜ್ಯ ಸರ್ಕಾರ ಪ್ರಧಾನಿಯವರ ಭದ್ರತಾ ತಂಡಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ಆಕ್ಷೇಪಿಸಿದರು.
ಈ ಲೋಪಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಸಮರ್ಥಿಸಿಕೊಳ್ಳುತ್ತಿರುವುದರಿಂದ ಕೇಂದ್ರ ಸರ್ಕಾರವು ತನಿಖಾ ಸಮಿತಿಯನ್ನು ರಚಿಸಲೇಬೇಕಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪಂಜಾಬ್ ಸರ್ಕಾರದ ವಕೀಲ ಡಿ.ಎಸ್. ಪಟ್ವಾಲಿಯಾ, ಪಂಜಾಬ್ ಮುಖ್ಯ ಕಾರ್ಯದರ್ಶಿಗೆ ನೀಡಲಾಗಿರುವ ಶೋಕಾಸ್ ನೋಟಿಸ್‌ನಲ್ಲಿ ನಮ್ಮ ವಿರುದ್ಧ ಎಲ್ಲವನ್ನೂ ಪೂರ್ವಭಾವಿಯಾಗಿ ನಿರ್ಧರಿಸಲಾಗಿದೆ ಮತ್ತು ಊಹಿಸಲಾಗಿದೆ. ಇಪ್ಪತ್ನಾಲ್ಕು ಗಂಟೆಗಳ ಒಳಗೆ ಉತ್ತರ ನೀಡುವಂತೆ ಹೇಳಲಾಗಿದೆ. ಇದರಿಂದ ನ್ಯಾಯಯುತ ವಿಚಾರಣೆಯನ್ನು ನಾನು ನಿರೀಕ್ಷಿಸುವುದಿಲ್ಲ. ಸ್ವತಂತ್ರ ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯವನ್ನು ಒತ್ತಾಯಿಸಿದರು.
“ಕೇಂದ್ರ ಸರಕಾರ ರಾಜ್ಯದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಬಯಸುವುದಾದರೆ ನಾವು ಇರುವುದಾದರೂ ಯಾಕೆ?” ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, “ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಭಾವನೆ ಬೇಡ. ಇದು ಪ್ರಧಾನಿಯವರ ಭದ್ರತೆಗೆ ಸಂಬಂಧಿಸಿದ್ದು,” ಎಂದು ಒತ್ತಿ ಹೇಳಿದರು.
ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಸೂರ್ಯ ಕಾಂತ್, “ಅಧಿಕಾರಿಗಳನ್ನು ಯಾರು ತಪ್ಪಿತಸ್ಥರೆಂದು ಪರಿಗಣಿಸಿದ್ದು? ಅವರನ್ನು ವಿಚಾರಣೆ ಮಾಡಿದವರು ಯಾರು? ನೀವು ನ್ಯಾಯಯುತ ವಿಚಾರಣೆಯನ್ನು ವಿರೋಧಿಸಲು ಸಾಧ್ಯವಿಲ್ಲ” ಎಂದರು. 24 ಗಂಟೆಯೊಳಗೆ ಉತ್ತರ ನೀಡುವಂತೆ ಕೇಂದ್ರವು ಅಧಿಕಾರಿಗಳನ್ನು ಕೇಳುವುದು ‘ನಿರೀಕ್ಷಿತವಲ್ಲ’ ಎಂದೂ ನ್ಯಾಯಮೂರ್ತಿ ಕೊಹ್ಲಿ ಹೇಳಿದರು.
ಕಳೆದ ವಾರ ಪಂಜಾಬ್‌ನ ಬಟಿಂಡಾದ ಮೇಲ್ಸೇತುವೆಯೊಂದರ ಮೇಲೆ ಪ್ರಧಾನಿ ಇದ್ದ ವಾಹನ ಪ್ರತಿಭಟನೆ ಕಾರಣಕ್ಕೆ 20 ನಿಮಿಷಗಳ ಕಾಲ ನಿಲ್ಲುವಂತಾದ ಘಟನೆ ದೇಶಾದ್ಯಂತ ರಾಜಕೀಯ ವಲಯದಲ್ಲಿ ಭಾರೀ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು. ಈ ಘಟನೆಯೀಗ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದು, ನ್ಯಾಯಾಲಯ ತೀರ್ಮಾನವನ್ನು ಎದುರು ನೋಡಲಾಗುತ್ತಿದೆ.
Read more
[wpas_products keywords=”deal of the day sale today offer all”]