Karnataka news paper

ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ ಕಾವೇರಿ ನದಿ ನೀರಿನ ಹೋರಾಟ ನಿರಾಳ..?


ಹೈಲೈಟ್ಸ್‌:

  • ಮೇಕೆದಾಟು ಯೋಜನೆಯಿಂದ ವಿದ್ಯುತ್‌ ಸಮಸ್ಯೆಗೂ ಪರಿಹಾರ ಸಿಗುತ್ತದೆ
  • ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯೂ ನೀಗಲಿದೆ
  • ಕೆಆರ್‌ಎಸ್‌ ಮೇಲೆ ಇರುವ ಬೆಂಗಳೂರಿನ ನೀರಿನ ಒತ್ತಡ ನಿವಾರಣೆಯಾಗಲಿದೆ

ನವೀನ್‌
ಮಂಡ್ಯ:
ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ ಮಂಡ್ಯದ ರೈತರು, ಕಾವೇರಿ ಹೋರಾಟಗಾರರು ನದಿ ನೀರಿಗಾಗಿ ನಡೆಸುವ ಹೋರಾಟ ತಪ್ಪುವುದೇ? ರೈತರು ನಿರಾತಂಕವಾಗಿ ವರ್ಷದಲ್ಲಿ ಎರಡು ಬೆಳೆಗಳನ್ನು ಬೆಳೆಯಬಹುದೇ? ಬೆಂಗಳೂರಿಗರು ಕುಡಿಯುವ ನೀರಿಗಾಗಿ ಕನ್ನಂಬಾಡಿ ಕಟ್ಟೆಯನ್ನೇ ಅವಲಂಬಿಸುವುದು ಕಡಿಮೆಯಾಗಲಿದೆಯೇ?

ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಕಾಂಗ್ರೆಸ್‌ ಪಾದಯಾತ್ರೆ ಕೈಗೊಂಡಿರುವ ಸಂದರ್ಭದಲ್ಲಿ ಇಂತಹ ಚರ್ಚೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಚರ್ಚಿತ ಈ ಅಂಶಗಳು ವಾಸ್ತವಕ್ಕೂ ಹತ್ತಿರವಾಗಿವೆ. ಯೋಜನೆ ಅನುಷ್ಠಾನಗೊಂಡಲ್ಲಿ ನೀರಿಗಾಗಿ ಕೆಆರ್‌ಎಸ್‌ ಮೇಲಿರುವ ಒತ್ತಡ ಕಡಿಮೆಯಾಗಿ ಮಂಡ್ಯದ ರೈತರ ಆತಂಕವೂ ದೂರಾಗಲಿದೆ.

ಕೋರ್ಟ್‌ ತೀರ್ಪಿನಂತೆ ಕರ್ನಾಟಕವು ತಮಿಳುನಾಡಿಗೆ ಜೂನ್‌ನಿಂದ ಮೇ ತಿಂಗಳವರೆಗೆ 177.25 ಟಿಎಂಸಿ ನೀರು ಕೊಡಬೇಕು. ಮುಖ್ಯವಾಗಿ ಜುಲೈನಲ್ಲಿ 31.24 ಟಿಎಂಸಿ ಅಡಿ, ಆಗಸ್ಟ್‌ನಲ್ಲಿ45.95 ಟಿಎಂಸಿ ಅಡಿ, ಸೆಪ್ಟೆಂಬರ್‌ನಲ್ಲಿ35.76 ಟಿಎಂಸಿ ಅಡಿ, ಅಕ್ಟೋಬರ್‌ನಲ್ಲಿ 20.22 ಟಿಎಂಸಿ ಅಡಿ ನೀರನ್ನು ಕರ್ನಾಟಕದಿಂದ ತಮಿಳುನಾಡಿಗೆ ಹರಿಸಲೇಬೇಕಿದೆ.

ಮೇಕೆದಾಟು ನೀರಿಗಾಗಿ ನಡೆದ ಪಾದಯಾತ್ರೆ ವೇಳೆ ನಿಯಮಗಳೆಲ್ಲ ನೀರುಪಾಲು; ಕರ್ಫ್ಯೂ ಬೆಲೆಯೇ ಇಲ್ಲ
ಆದರೆ, ಕೊಡಗು – ವೈನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಕನ್ನಂಬಾಡಿ ಕಟ್ಟೆಗೆ ಹೆಚ್ಚು ನೀರು ಬಂದರಷ್ಟೇ ತಮಿಳುನಾಡಿಗೆ ವಾಯಿದೆಯಂತೆ ನೀರು ಕೊಡಲು ಸಾಧ್ಯ. ಇಲ್ಲದಿದ್ದರೆ ತಮಿಳುನಾಡಿನ ತಗಾದೆ ಶುರುವಾಗುತ್ತದೆ. ಈವರೆಗೆ ಕಾವೇರಿ ಹೋರಾಟ ನಡೆದಿರುವುದೆಲ್ಲಾ ಬಹುತೇಕ ಈ ತಿಂಗಳುಗಳಲ್ಲೇ.

ಅಧಿಕ ಪ್ರಮಾಣದ ನೀರು ಕೊಡಬೇಕಾದ ಮಾಸಗಳಲ್ಲಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕಡಿಮೆಯಿರುತ್ತದೆ. ಆಗ ಕೋರ್ಟ್‌ ಆದೇಶ ಪಾಲನೆಗಾಗಿ ಕನ್ನಂಬಾಡಿ ಕಟ್ಟೆಯಿಂದಲೇ ತಮಿಳುನಾಡಿಗೆ ನೀರು ಹರಿಸಲಾಗುತ್ತದೆ. ಇದನ್ನು ವಿರೋಧಿಸಿ ಮಂಡ್ಯದಲ್ಲಿ ಕಾವೇರಿ ಹೋರಾಟ ಶುರುವಾಗುತ್ತದೆ. ಕಾವೇರಿ ನೀರಿನ ಹಕ್ಕಿಗಾಗಿ ಮಂಡ್ಯ ರೈತರು ರಸ್ತೆಗಿಳಿದು ಹೋರಾಟ ಆರಂಭಿಸಿದಾಗ ನಮ್ಮದೇ ಆಸ್ತಿಪಾಸ್ತಿಗೆ ತೊಂದರೆಯೂ ಆಗುತ್ತಿದೆ. ಹೋರಾಟದ ಮೂಲಕ ಮಂಡ್ಯ ರೈತರು ತಮ್ಮನ್ನು ತಾವೇ ಪರೋಕ್ಷವಾಗಿ ದಂಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲವೂ ತಪ್ಪಬೇಕಾದರೆ ಮೇಕೆದಾಟು ಯೋಜನೆ ಅನುಷ್ಠಾನವಾಗಲೇಬೇಕೆಂಬುದು ಆಶಯ ಮಂಡ್ಯ ಜನರದ್ದು.

ಮೇಕೆದಾಟು ಪಾದಯಾತ್ರೆ; ಕೋವಿಡ್ ನಿಯಮಾವಳಿ ಮರೆತ ಕಾಂಗ್ರೆಸ್ !
ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ದಶಕಗಳಿಂದ ರೈತ ನಾಯಕ ದಿವಂಗತ ಕೆ. ಎಸ್‌. ಪುಟ್ಟಣ್ಣಯ್ಯ ಹೋರಾಟ ನಡೆಸುತ್ತಿದ್ದರು. ಆಗೆಲ್ಲಾ ಈ ಯೋಜನೆ ಅಷ್ಟೊಂದು ಮಹತ್ವ ಪಡೆದುಕೊಳ್ಳಲೇ ಇಲ್ಲ. ಆದರೀಗ ಈ ವಿಚಾರವನ್ನು ಕಾಂಗ್ರೆಸ್‌ ಕೈಗೆತ್ತಿಕೊಂಡ ಬಳಿಕ ಯೋಜನೆ ಅನುಷ್ಠಾನ ಸಂಗತಿಯು ಹೆಚ್ಚು ಮಹತ್ವ ಪಡೆದುಕೊಂಡಿದೆ. ಕಾವೇರಿ ನೀರನ್ನು ಹೆಚ್ಚು ಬಳಸುವ ರೈತರು ಮತ್ತು ಜನರಿರುವುದು ಮಂಡ್ಯ ಜಿಲ್ಲೆಯಲ್ಲಿ. ಕಾವೇರಿ ಅವಲಂಬಿತ ಜಿಲ್ಲೆಗಳಲ್ಲಿ ಮಂಡ್ಯವೇ ಪ್ರಮುಖ ಫಲಾನುಭವಿ. ನಂತರದ ಸ್ಥಾನದಲ್ಲಿ ಬೆಂಗಳೂರಿದೆ.

ಮೇಕೆದಾಟು ಯೋಜನೆಯಿಂದ ಸುಮಾರು 66 ಟಿಎಂಸಿ ಅಡಿ ನೀರು ಸಂಗ್ರಹವಾಗಲಿದೆ. ಮಳೆಗಾಲದಲ್ಲಿ ಹೆಚ್ಚುವರಿಯಾಗಿ, ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅದನ್ನು 440 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೂ ಬಳಸಿಕೊಳ್ಳಬಹುದಾಗಿದೆ. ಇದರಿಂದ ವಿದ್ಯುತ್‌ ಸಮಸ್ಯೆಗೂ ಪರಿಹಾರ ಸಿಗುವುದಲ್ಲದೆ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯೂ ನೀಗಲಿದೆ. ಆ ಮೂಲಕ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಮೇಲೆ ಇರುವ ಬೆಂಗಳೂರಿನ ನೀರಿನ ಒತ್ತಡ ನಿವಾರಣೆಯಾಗಲಿದೆ. ತಮಿಳುನಾಡಿಗೆ ನೀರು ಬಿಡುವ ನ್ಯಾಯಾಲಯದ ಆದೇಶವನ್ನೂ ಸಕಾಲದಲ್ಲಿ ಪಾಲನೆ ಮಾಡಬಹುದು.

ಮೇಕೆದಾಟು ಪಾದಯಾತ್ರೆ: ಜ್ವರದ ಕಾರಣದಿಂದ ಬೆಂಗಳೂರಿಗೆ ಸಿದ್ದರಾಮಯ್ಯ ವಾಪಸ್‌!



Read more

[wpas_products keywords=”deal of the day sale today offer all”]