Karnataka news paper

ಟಿಬಿ ಡ್ಯಾಂ ಬಲವರ್ಧನೆಗೆ ಅಧ್ಯಯನ ಶುರು: ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಸಲಹೆ


ಹೈಲೈಟ್ಸ್‌:

  • ದೇಶದ ಜಲಾಶಯಗಳ ಬಲವರ್ಧನೆಗೆ ಕೇಂದ್ರ ಸರಕಾರದ ಪ್ರಾತಿನಿಧ್ಯ
  • ಡ್ರಿಪ್‌-2 ನೇ ಹಂತದಲ್ಲಿ ಜಲಾಶಯ ಆಯ್ಕೆ
  • ವಿಶ್ವಬ್ಯಾಂಕ್‌ನಿಂದಲೂ ನೆರವಿನ ಭರವಸೆ
  • ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ

ಜಗನ್ನಾಥ ಆರ್‌. ದೇಸಾಯಿ
ರಾಯಚೂರು:
ತುಂಗಭದ್ರಾ ಅಣೆಕಟ್ಟೆಯ ಸುರಕ್ಷತೆ ಸುಧಾರಣೆ ಮತ್ತು ಬಲವರ್ಧನೆಗೆ ಕೇಂದ್ರ ಸರಕಾರ ಗಮನ ಹರಿಸಿದೆ. ವಿಶ್ವ ಬ್ಯಾಂಕಿನ ನೆರವಿನಡಿ ದೇಶದ ಜಲಾಶಯಗಳ ಸುರಕ್ಷತೆ ಮತ್ತು ಬಲವರ್ಧನೆ ಕ್ರಮಗಳಡಿ ತುಂಗಭದ್ರಾ ಅಣೆಕಟ್ಟೆಯನ್ನೂ ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ತಜ್ಞರ ತಂಡ ಅಣೆಕಟ್ಟೆ ಸುರಕ್ಷತೆ ಬಗ್ಗೆ ಅಧ್ಯಯನ ಆರಂಭಿಸಿದೆ.

ಪ್ರಾಜೆಕ್ಟ್ ಡ್ರಿಪ್‌-2: ಕೇಂದ್ರ ಸರಕಾರ ಮುಂದಿನ ಆರು ವರ್ಷಗಳಲ್ಲಿ ದೇಶದ ಜಲಾಶಯಗಳ ಸುರಕ್ಷತೆ, ಬಲವರ್ಧನೆ ಮೂಲಕ ಭವಿಷ್ಯದಲ್ಲಿ ಎದುರಾಗುವ ಸವಾಲು ಎದುರಿಸಲು ಸಿದ್ಧತೆ ಮಾಡಿಕೊಂಡಿದೆ. ಡ್ಯಾಂ ರಿಹ್ಯಾಬಿಲಿಟೇಷನ್‌ ಅಂಡ್‌ ಇಂಪ್ರೂವ್‌ಮೆಂಟ್‌ ಪ್ರೋಗ್ರಾಮ್‌ (ಡ್ರಿಪ್‌ ಪ್ರಾಜೆಕ್ಟ್) ಎಂಬ ಕಾರ್ಯಕ್ರಮ ಕೈಗೆತ್ತಿಕೊಂಡಿದೆ. ಡ್ರಿಪ್‌-2 ನೇ ಹಂತದಲ್ಲಿ ತುಂಗಭದ್ರಾ ಜಲಾಶಯ ಆಯ್ಕೆ ಮಾಡಿಕೊಂಡಿದ್ದು, ಅಧ್ಯಯನಕ್ಕೆ ತಜ್ಞರ ತಂಡ ಚಾಲನೆ ನೀಡಿದೆ.

ಅಕ್ವಡೆಕ್ಟ್ ಕಾಮಗಾರಿ ಟಿಬಿ ಡ್ಯಾಂ ಚೇರ್ಮನ್‌ ವೀಕ್ಷಣೆ
ತಂಡದಲ್ಲಿ ಯಾರಿದ್ದರು..?: ಡ್ರಿಪ್‌-2 ಕಾರ್ಯಕ್ರಮದಡಿ ಡಿಸೆಂಬರ್ 8, 9 ರಂದು ಕೇಂದ್ರ ಸರಕಾರದ ಡ್ರಿಪ್‌ ನಿರ್ದೇಶಕ ಪ್ರಮೋದ್‌ ನಾರಾಯಣ್‌, ಚೀಫ್‌ ಎಂಜಿನಿಯರ್‌ ಮಾಧವ್‌, ವಿಶ್ವ ಬ್ಯಾಂಕಿನ ಅಧಿಕಾರಿ ರಾಜಗೋಪಾಲ್‌, ಹಿರಿಯ ಅಧಿಕಾರಿಗಳಾದ ಯೋಗೇಶ್‌ ಅವರಿದ್ದ ತಂಡವು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ್ದು, ಅಣೆಕಟ್ಟೆಯ ತಡೆಗೋಡೆ, ನೀರು ನಿರ್ವಹಣೆ ವಿಭಾಗ, ಗೇಟ್‌ಗಳ ನಿರ್ವಹಣೆಗೆ ಅನುಸರಿಸುತ್ತಿರುವ ವ್ಯವಸ್ಥೆ ಸೇರಿದಂತೆ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.

ಕ್ರಮಕ್ಕೆ ಸಲಹೆ, ಸೂಚನೆ: ಅಂದು ನಡೆದ ಅಧಿಕಾರಿಗಳ ಸಭೆಯಲ್ಲಿ ತಜ್ಞರ ತಂಡವು ಅಣೆಕಟ್ಟೆಯಿಂದ ಸ್ಪಿಲ್‌ ವೇ ಗಳಿಗೆ ಮಾತ್ರ ಸ್ಟಾಪ್‌ ಲಾಕ್‌ ಗೇಟ್‌ ವ್ಯವಸ್ಥೆಯಿದ್ದು, ಮುಖ್ಯ ಗೇಟ್‌ಗಳಿಗೂ ಸ್ಟಾಪ್‌ ಲಾಕ್‌ ಗೇಟ್‌ ಅಳವಡಿಕೆ ಮತ್ತು ನಿರ್ವಹಣೆ, ಕಾಲುವೆಗಳಿಗೆ ನೀರು ಹರಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಿದೆ ಎಂದು ಗೊತ್ತಾಗಿದೆ. ಅಷ್ಟೇ ಅಲ್ಲ ಅಣೆಕಟ್ಟೆಯು ಹಳೆಯದಾಗಿದ್ದು, ತಡೆ ಗೋಡೆಯ ಬಲವರ್ಧನೆಗೆ ಗ್ರೌಟಿಂಗ್‌ ಕೈಗೊಳ್ಳಲು ಸಲಹೆ ನೀಡಿದೆ. ಇದರಿಂದ ಜಲಾಶಯದ ತಡೆಗೋಡೆಯಿಂದ ಕೆಲವೆಡೆ ನೀರು ಸಣ್ಣ ಪ್ರಮಾಣದಲ್ಲಿ ತಡೆಗೋಡೆ ಮೂಲಕ ಬಸಿಯುವಿಕೆಗೆ ಕಡಿವಾಣ ಬೀಳಲಿದೆ ಎಂದು ಕಿವಿಮಾತು ಹೇಳಿದೆ.

ಟಿಬಿ ಡ್ಯಾಂ ಆಡಳಿತ ಮಂಡಳಿಯಲ್ಲಿ ಕನ್ನಡಿಗರೇತರಿಗೆ ಅವಕಾಶ ವಿರೋಧಿಸಿ ವಾಟಾಳ್ ಪ್ರತಿಭಟನೆ
ಪ್ರವಾಸೋದ್ಯಮ ಅಭಿವೃದ್ದಿಗೆ ಅವಕಾಶ: ಇಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೂ ವಿಪುಲ ಅವಕಾಶಗಳಿದ್ದು, ಹಂಪಿ ಬಳಿಯೇ ಅಣೆಕಟ್ಟೆಯಿರುವುದರಿಂದ ಜಲಾಶಯ ಬಳಿ ಮತ್ತಷ್ಟು ಪ್ರವಾಸೋದ್ಯಮಕ್ಕೆ ಪೂರಕ ಅಭಿವೃದ್ಧಿ ಕೈಗೊಳ್ಳಬೇಕು. ಅದರಿಂದ ದೊರೆಯುವ ಆದಾಯವನ್ನು ಸುಧಾರಣೆಗೆ ಬಳಸಬಹುದಾಗಿದೆ ಎಂದು ಸಲಹೆ ಕೊಡಲಾಗಿದೆ. ಅಣೆಕಟ್ಟೆ ಸುಸ್ಥಿತಿಯಲ್ಲಿದ್ದು, ಕೆಲ ಕ್ರಮಗಳ ಮೂಲಕ ಅದನ್ನು ಪುನಶ್ಚೇತನ, ಬಲವರ್ಧನೆ, ಸುರಕ್ಷಿತವಾಗಿರಿಸಲು ಆಧುನಿಕ ಕಾಲದ ತಂತ್ರಜ್ಞಾನ ಅಳವಡಿಸಿಕೊಳ್ಳಲು ತಂತ್ರಜ್ಞರು ಸಭೆಯಲ್ಲಿ ಸಲಹೆ ನೀಡಿದ್ದು, ವಿಶ್ವಬ್ಯಾಂಕಿನಿಂದ ಆರ್ಥಿಕ ನೆರವು ಒದಗಿಸುವ ಬಗ್ಗೆಯೂ ಭವಿಷ್ಯದಲ್ಲಿ ಅಗತ್ಯ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದೆ ಎಂದು ಮೂಲಗಳು ಹೇಳಿವೆ.

‘ತುಂಗಭದ್ರಾ ಜಲಾಶಯದ ಪುನಶ್ಚೇತನ, ಬಲವರ್ಧನೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲು ಈಚೆಗೆ ಕೇಂದ್ರ ಸರಕಾರದ ತಂತ್ರಜ್ಞರ ತಂಡ ಭೇಟಿ ನೀಡಿದ್ದು ಅಗತ್ಯ ಮಾಹಿತಿ ಒದಗಿಸಲಾಗಿದೆ’ ಎಂದು ಮುನಿರಾಬಾದ್‌ ತುಂಗಭದ್ರಾ ನೀರಾವರಿ ಇಲಾಖೆ ಸಿಇ ಕೃಷ್ಣಾಜಿ ಚೌಹಾಣ್‌ ಮಾಹಿತಿ ನೀಡಿದ್ದಾರೆ.

‘ಭದ್ರಾ ಡ್ಯಾಂನಿಂದ ನೀರು ಕೊಟ್ಟರೆ ಹೋರಾಟ’: ಟಿಬಿ ಡ್ಯಾಂ, ಭದ್ರಾ ಮೇಲ್ದಂಡೆಗೆ ನೀರು ಹರಿಸಲು ವಿರೋಧ



Read more