Karnataka news paper

ಕೋವಿಡ್‌ ಚಿಕಿತ್ಸೆ; ಆಸ್ಪತ್ರೆಗೆ ದಾಖಲು ಪ್ರಮಾಣ ತುಸು ಏರಿಕೆ


ಬೆಂಗಳೂರು: ನಗರದಲ್ಲಿ ಕೋವಿಡ್‌ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣದಲ್ಲಿ ಒಂದು ವಾರದಿಂದ ಈಚೆಗೆ ತುಸು ಏರಿಕೆ ಕಂಡುಬಂದಿದೆ. 

ನಗರದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆ ನೀಡಲು 1,538 ಹಾಸಿಗೆಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಕಾಯ್ದರಿಸಲಾಗಿದೆ. ಅಲ್ಲದೇ, ಖಾಸಗಿ ಆಸ್ಪತ್ರೆಗಳಲ್ಲಿ 3,800 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ (ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು) ದಾಖಲಾಗುವವರ ದೈನಂದಿನ ಪ್ರಮಾಣವು ವಾರದಿಂದ ಈಚೆಗೆ 33ರಿಂದ 80ಕ್ಕೆ ಹೆಚ್ಚಿದೆ. 2021ರ ಡಿಸೆಂಬರ್‌ ಕೊನೆಯ ವಾರದಲ್ಲಿ ಈ ಪ್ರಮಾಣವು 21ರಿಂದ 26ಕ್ಕೆ ಹೆಚ್ಚಿತ್ತು.

ಸರ್ಕಾರಿ ಆಸ್ಪತ್ರೆಗಳಲ್ಲಿ 472 ಎಚ್‌ಡಿಯು ಹಾಸಿಗೆಗಳನ್ನು, ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) 80 ಸಾಮಾನ್ಯ ಹಾಸಿಗೆಗಳನ್ನು ಹಾಗೂ ವೆಂಟಿಲೇಟರ್‌ ಸೌಕರ್ಯ ಇರುವ 145 ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ. ಬಿಬಿಎಂಪಿ ಭಾನುವಾರ ಬಿಡುಗಡೆ ಮಾಡಿದ ಅಂಕಿ–ಅಂಶಗಳ ಪ್ರಕಾರ ವಿವಿಧ ಬಗೆಯವು ಸೇರಿ ಒಟ್ಟು 230 ಹಾಸಿಗೆಗಳು ಭರ್ತಿ ಆಗಿವೆ.

ಐಸಿಯು ಹಾಗೂ ವೆಂಟಿಲೇಟರ್‌ ಸೌಕರ್ಯ ಬಳಸುವ ಕೋವಿಡ್‌ ರೋಗಿಗಳ ಸಂಖ್ಯೆಯೂ ತುಸು ಹೆಚ್ಚಳವಾಗಿದೆ. ಏಳು ದಿನಗಳಲ್ಲಿ 200 ಕೋವಿಡ್‌ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 27 ಮಂದಿ ಸಾಮಾನ್ಯ ಐಸಿಯು ಹಾಗೂ 7 ಮಂದಿ ವೆಂಟಿಲೇಟರ್‌ ಸೌಕರ್ಯ ಇರುವ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

‘ಕೋವಿಡ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದೃಢಪಡುತ್ತಿರುವುದರಿಂದ ಸಹಜವಾಗಿಯೇ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಹೆಚ್ಚಾದಂತೆ ಕಾಣಿಸುತ್ತದೆ. ಆದರೆ, ಗಾಬರಿಯಾಗುವ ಸನ್ನಿವೇಶ ಸೃಷ್ಟಿಯಾಗಿಲ್ಲ. ಒಟ್ಟು ಸೋಂಕಿತರ ಪ್ರಮಾಣಕ್ಕೆ ಹೋಲಿಸಿದರೆ, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆಯೇ ಇದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ.ತ್ರಿಲೋಕಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯುಗಳಲ್ಲಿ 53 ಸಾಮಾನ್ಯ ಹಾಸಿಗೆಗಳು, ವೆಂಟಿಲೇಟರ್‌ ಸೌಕರ್ಯ ಇರುವ 138 ಹಾಸಿಗೆಗಳು, ಹಾಗೂ ಎಚ್‌ಡಿಯು ಸೌಕರ್ಯದ 405 ಹಾಸಿಗೆಗಳು ಸೇರಿ ಒಟ್ಟು 1,308 ಹಾಸಿಗೆಗಳು ಕೋವಿಡ್‌ ಚಿಕಿತ್ಸೆಗೆ ಈಗಲೂ ಲಭ್ಯ ಇವೆ.



Read more from source

[wpas_products keywords=”deal of the day sale today kitchen”]