Karnataka news paper

ಬಟ್ಲರ್‌ ತವರಿಗೆ ವಾಪಸ್‌, 5ನೇ ಟೆಸ್ಟ್‌ಗೂ ಮುನ್ನ ಇಂಗ್ಲೆಂಡ್‌ಗೆ ಆಘಾತ!


ಹೈಲೈಟ್ಸ್‌:

  • ಇಂಗ್ಲೆಂಡ್‌-ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ ನಡೆಯುತ್ತಿದೆ.
  • ಬೆರಳು ಮುರಿದುಕೊಂಡಿರುವ ಜೋಸ್‌ ಬಟ್ಲರ್ ಅಂತಿಮ ಟೆಸ್ಟ್‌ನಿಂದ ಹೊರ ಬಿದ್ದಿದ್ದಾರೆ.
  • 5ನೇ ಟೆಸ್ಟ್‌ ಪಂದ್ಯದಲ್ಲಿ ಬಟ್ಲರ್‌ ಅನುಪಸ್ಥಿತಿಯಲ್ಲಿ ಬೈರ್‌ಸ್ಟೋವ್‌ಗೆ ವಿಕೆಟ್‌ ಕೀಪಿಂಗ್ ಹೊಣೆ.

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಬೆರಳು ಮುರಿದುಕೊಂಡಿರುವ ಇಂಗ್ಲೆಂಡ್‌ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ಆಷಸ್‌ ಟೆಸ್ಟ್‌ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತವರಿಗೆ ವಾಪಸ್‌ ಆಗಲಿದ್ದಾರೆ ಎಂದು ಇಂಗ್ಲೆಂಡ್‌ ಟೀಮ್‌ ಮ್ಯಾನೇಜ್‌ಮೆಂಟ್‌ ಸ್ಪಷ್ಟಪಡಿಸಿದೆ.

ಭಾನುವಾರ ಇಲ್ಲಿನ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಾಲ್ಕನೇ ಟೆಸ್ಟ್‌ ಪಂದ್ಯ ರೋಚಕ ಡ್ರಾ ಕಂಡಿತ್ತು. ಇದಾದ ಬಳಿಕ ಇಂಗ್ಲೆಂಡ್‌ ಟೀಮ್ ಮ್ಯಾನೇಜ್‌ಮೆಂಟ್‌ ಈ ವಿಷಯವನ್ನು ಬಹಿರಂಗಪಡಿಸಿದೆ. ಜೋಸ್‌ ಬಟ್ಲರ್‌ ಅವರ ‘ಎಡ ತೋರು ಬೆರಳು’ ಮುರಿದಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಆಟಗಾರ ಹೆಚ್ಚಿನ ಚಿಕಿತ್ಸೆಗಾಗಿ ತವರಿಗೆ ಮರಳಲಿದ್ದಾರೆಂದು ತಿಳಿಸಿದೆ.

“ಜೋಸ್‌ ಬಟ್ಲರ್‌ಗೆ ಗಂಭೀರ ಗಾಯವಾಗಿದೆ ಹಾಗೂ ಇದರ ಹೊರತಾಗಿಯೂ ಅವರು ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿದ್ದರು. ಆ ಮೂಲಕ ತಮ್ಮ ಬದ್ದತೆಯನ್ನು ಪ್ರದರ್ಶಿಸಿದ್ದರು. ಟೆಸ್ಟ್‌ ಕ್ರಿಕೆಟ್‌ ಹಾಗೂ ಇಂಗ್ಲೆಂಡ್‌ ಪರ ಆಡಲು ಅವರು ಎಷ್ಟು ಇಷ್ಟಪಡುತ್ತಾರೆ ಎಂಬುದು ಇಲ್ಲಿ ತೋರಿಸುತ್ತದೆ,” ಎಂದು ಜೋ ರೂಟ್‌ ನಾಲ್ಕನೇ ಟೆಸ್ಟ್‌ ಬಳಿಕ ಹೇಳಿದ್ದಾರೆ.

ಆ್ಯಷಸ್‌: ಕೊನೇ ವಿಕೆಟ್‌ ಕಾಯ್ದುಕೊಂಡು ರೋಚಕ ಡ್ರಾ ಸಾಧಿಸಿದ ಇಂಗ್ಲೆಂಡ್‌!

ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಜೋಸ್‌ ಬಟ್ಲರ್‌ ಅವರು ಚೆಂಡನ್ನು ತಮ್ಮ ತೋರು ಬೆರಳಿಗೆ ತಗುಲಿಸಿಕೊಂಡಿದ್ದರು. ತಕ್ಷಣ ಮೈದಾನಕ್ಕೆ ಆಗಮಿಸಿದ್ದ ಫಿಜಿಯೊ ತುರ್ತು ಚಿಕಿತ್ಸೆ ನೀಡಿದ್ದರು. ಇದರ ಹೊರತಾಗಿಯೂ ಜೋಸ್‌ ಬಟ್ಲರ್‌ ದ್ವಿತೀಯ ಇನಿಂಗ್ಸ್‌ನಲ್ಲಿ 38 ಎಸೆತಗಳನ್ನು ಎದುರಿಸಿದ್ದರು. ಆದರೆ ಅಂತಿಮವಾಗಿ ಪ್ಯಾಟ್‌ ಕಮಿನ್ಸ್ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಚೆಂಡನ್ನು ಪ್ಯಾಡ್‌ ಮೇಲೆ ಹಾಕಿಕೊಂಡಿದ್ದರು.

ಜೋಸ್‌ ಬಟ್ಲರ್‌ ಹೊರ ಬಿದ್ದಿರುವ ಹಿನ್ನೆಲೆಯಲ್ಲಿ ಇನ್‌ ಫಾರ್ಮ್‌ ಜಾನಿ ಬೈರ್‌ಸ್ಟೋವ್‌ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಬೈರ್‌ಸ್ಟೋವ್‌ ಶತಕ ಸಿಡಿಸಿದ್ದರು. ಬೈರ್‌ಸ್ಟೋವ್‌ ತಮ್ಮ ಹೆಬ್ಬೆರಳಿಗೆ ಚೆಂಡು ತಗುಲಿಸಿಕೊಂಡಿದ್ದರಿಂದ ಓಲ್ಲೀ ಪೋಪ್‌ ಫೀಲ್ಡಿಂಗ್‌ನಲ್ಲಿ ಕಾಣಿಸಿಕೊಂಡಿದ್ದರು.

ಯಾರಿಂದಲೂ ಸಾಧ್ಯವಾಗದ ‘ವಿಶ್ವ ದಾಖಲೆ’ ಬರೆದ ಡೆವೋನ್‌ ಕಾನ್ವೇ!

ಅಂದಹಾಗೆ ಕಳಪೆ ಬ್ಯಾಟಿಂಗ್‌ ಲಯದಿಂದಾಗಿ ಓಲ್ಲೀ ಪೋಪ್‌ ನಾಲ್ಕನೇ ಟೆಸ್ಟ್ ಇಂಗ್ಲೆಂಡ್‌ ತಂಡದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ಕಳೆದುಕೊಂಡಿದ್ದರು. ಇವರ ಸ್ಥಾನಕ್ಕೆ ಜಾನಿ ಬೈರ್‌ಸ್ಟೋವ್‌ ಬಂದಿದ್ದರು. ಅದರಂತೆ ಜಾನಿ ಬೈರ್‌ಸ್ಟೋವ್‌ ಪ್ರಥಮ ಇನಿಂಗ್ಸ್‌ನಲ್ಲಿ ನಿರ್ಣಾಯಕ ಶತಕ ಸಿಡಿಸಿದ್ದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ನಿರ್ಣಾಯಕ 41 ರನ್ ಗಳಿಸಿದ್ದರು.

ಶುಕ್ರವಾರದಿಂದ ಹೊಬರ್ಟ್‌ನಲ್ಲಿ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇಂಗ್ಲೆಂಡ್‌ ತಡದೊಂದಿಗೆ ಜಾನಿ ಬೈರ್‌ಸ್ಟೋವ್‌ ಪ್ರಯಾಣ ಬೆಳೆಸಲಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಪಂದ್ಯದ ಹೊತ್ತಿಗೆ ಅವರು ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂದು ಇಂಗ್ಲೆಂಡ್‌ ಟೀಮ್ ಮ್ಯಾನೇಜ್‌ಮೆಂಟ್‌ ತಿಳಿಸಿದೆ.

ಕೇಪ್‌ ಟೌನ್‌ ಟೆಸ್ಟ್‌ಗೆ ಟೀಮ್‌ ಇಂಡಿಯಾ XIನಲ್ಲಿ 2 ಬದಲಾವಣೆ ಸಾಧ್ಯತೆ!

ಜೋಸ್‌ ಬಟ್ಲರ್‌ ಹಾಗೂ ಜಾನಿ ಬೈರ್‌ಸ್ಟೋವ್‌ ಅವರಿಗೆ ಬ್ಯಾಕ್‌ ಅಪ್‌ ಆಗಿ ಇಂಗ್ಲೆಂಡ್‌ ಸೀಮಿತ ಓವರ್‌ಗಳ ತಂಡದ ವಿಕೆಟ್‌ ಕೀಪರ್‌ ಸ್ಯಾಮ್‌ ಬಿಲ್ಲಿಂಗ್ಸ್ ಅವರನ್ನು ಇಲ್ಲಿಗೆ ಕರೆಸಿಕೊಳ್ಳಲಾಗಿದೆ. ಒಂದು ವೇಳೆ ಶುಕ್ರವಾರದ ಹೊತ್ತಿಗೆ ಜಾನಿ ಬೈರ್‌ಸ್ಟೋವ್‌ ಸಂಪೂರ್ಣ ಫಿಟ್‌ ಆಗಿಲ್ಲವಾದರೆ, ಸ್ಯಾಮ್‌ ಬಿಲ್ಲಿಂಗ್ಸ್‌ ಮುಂದಿನ ಪಂದ್ಯದಲ್ಲಿ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಅಂದಹಾಗೆ ನಾಲ್ಕು ಪಂದ್ಯಗಳ ಅಂತ್ಯಕ್ಕೆ ಇಂಗ್ಲೆಂಡ್‌ ಇನ್ನೂ ಒಂದೂ ಪಂದ್ಯದಲ್ಲಿ ಜಯಗಳಿಸಿಲ್ಲ. ಸತತ ಮೂರು ಪಂದ್ಯಗಳಲ್ಲಿ ಗೆದ್ದಿರುವ ಆಸ್ಟ್ರೇಲಿಯಾ ತಂಡ ಆಷಸ್‌ ಟೆಸ್ಟ್‌ ಸರಣಿಯಲ್ಲಿ 3-0 ಮುನ್ನಡೆ ಪಡೆದುಕೊಂಡಿದೆ.

‘ರಿಯಲ್‌ ಹೀರೋಸ್‌’, ಇಂಡಿಯನ್ ಆರ್ಮಿಗೆ ಹನುಮ ವಿಹಾರಿ ಸಲ್ಯೂಟ್!



Read more

[wpas_products keywords=”deal of the day sale today offer all”]