Karnataka news paper

ಗುರು ರಾಘವೇಂದ್ರ ಸೇರಿ ವಿವಿಧ ಬ್ಯಾಂಕ್‌ಗಳ ಠೇವಣಿದಾರರಿಗೆ ಕೊನೆಗೂ ಸಿಕ್ಕಿತು ಧನ


ಬೆಂಗಳೂರು: ನಗರದ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌ನ 33 ಸಾವಿರ ಠೇವಣಿದಾರರ ಖಾತೆಗಳಿಗೆ ‘ಠೇವಣಿ ವಿಮೆ ಹಾಗೂ ಸಾಲ ಖಾತರಿ ನಿಗಮ’ ಅಡಿಯಲ್ಲಿ 753.61 ಕೋಟಿ ರೂ.ಗಳನ್ನು ಜಮೆ ಮಾಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಗುರು ರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌ನ ಠೇವಣಿದಾರರಿಗೆ ವಿಮಾ ಮೊತ್ತದ ಚೆಕ್‌ ವಿತರಣೆ ಮಾಡಿ ಮಾತನಾಡಿದ ಅವರು, ”ದೇಶಾದ್ಯಂತ ನಾನಾ ಬ್ಯಾಂಕ್‌ಗಳಲ್ಲಿ ಸುಮಾರು 1 ರಿಂದ 5 ಲಕ್ಷ ರೂ.ಗಳವರೆಗೆ ಠೇವಣಿ ಇಟ್ಟಿರುವ ಶೇ.98.1 ಮಂದಿ ಸಣ್ಣ ಹಾಗೂ ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದಾರೆ,” ಎಂದರು. ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ಮಾತನಾಡಿದರು.

ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌ನ ಐವರು ಠೇವಣಿದಾರರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಠೇವಣಿ ಮರುಪಾವತಿ ವಿಮೆ ಚೆಕ್‌ ಪಡೆದರು. ‘ಠೇವಣಿ ವಿಮೆ ಹಾಗೂ ಸಾಲ ಖಾತರಿ ನಿಗಮ’ ಕಾಯಿದೆ ದೇಶದಲ್ಲಿ ಜಾರಿಗೆ ಬಂದ ಬಳಿಕ ಶೇ. 98.2ರಷ್ಟು ಬ್ಯಾಂಕ್‌ ಖಾತೆಗಳು ಹಾಗೂ ಠೇವಣಿಗಳಿಗೆ ವಿಮಾ ಸುರಕ್ಷೆ ಒದಗಿಸಲಾಗಿದೆ.

ಗುರುರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ನ 12,014 ಠೇವಣಿದಾರರಿಗೆ ₹401 ಕೋಟಿ ವಿಮಾ ಮೊತ್ತ ಸಂದಾಯ!

ಜಾಗತಿಕವಾಗಿ ಖಾತೆ ಮತ್ತು ಠೇವಣಿಗೆ ವಿಮಾ ಸುರಕ್ಷೆ ಸರಾಸರಿ ಪ್ರಮಾಣ ಶೇ.80ರಷ್ಟಿದೆ. ಕೇಂದ್ರ ಸರಕಾರವು ಈ ಕಾಯಿದೆ ರೂಪಿಸಿರುವುದು ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟು ಅದರ ಬಡ್ಡಿಯನ್ನೇ ನಂಬಿಕೊಂಡಿರುವ ಮಧ್ಯಮ ವರ್ಗದ ಜನರಿಗೆ ಭರವಸೆ ಮೂಡಿಸಿದೆ ಎಂದರು.

ಪೂರ್ಣ ಹಣ ಪಾವತಿಗಾಗಿ ಒತ್ತಾಯ:
ಇದೇ ವೇಳೆ ಕೆಲ ಠೇವಣಿದಾರರು 5 ಲಕ್ಷಕ್ಕೂ ಹೆಚ್ಚು ಠೇವಣಿ ಹಣ ಇಟ್ಟವರ ಹಣವನ್ನು ಸಂಪೂರ್ಣವಾಗಿ ಮರು ಪಾವತಿ ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಒತ್ತಾಯಿಸಿದ ಘಟನೆ ನಡೆಯಿತು.

ಕಾರ್ಯಕ್ರಮ ಮುಗಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸಂಸದ ತೇಜಸ್ವಿ ಸೂರ್ಯ, ಜಿಲ್ಲಾಧಿಕಾರಿ ಮಂಜುನಾಥ್‌ ಅವರು ನಿರ್ಗಮಿಸುವಾಗ ಬ್ಯಾಂಕ್‌ನ ಕೆಲ ಠೇವಣಿದಾರರು ಅವರನ್ನು ಸುತ್ತುವರಿದು 5 ಲಕ್ಷಕ್ಕಿಂತ ಹೆಚ್ಚು ಠೇವಣಿ ಹಣ ಇಟ್ಟವರ ಸಂಪೂರ್ಣ ಹಣ ಮರು ಪಾವತಿ ಮಾಡಿ, ಬ್ಯಾಂಕ್‌ನ ನಷ್ಟಕ್ಕೆ ಕಾರಣರಾದವರಿಗೆ ತಕ್ಕ ಶಿಕ್ಷೆ ಆಗುವಂತೆ ಮಾಡಿ ಮತ್ತು ಠೇವಣಿಯ ವಿಮೆ ಹಣ ಮಾತ್ರವಲ್ಲ ಠೇವಣಿಯ ಹಣವು ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಗುರು ರಾಘವೇಂದ್ರ ಬ್ಯಾಂಕ್‌ ವಂಚನೆ ಪ್ರಕರಣ: ಆರ್‌ಬಿಐ ಮಧ್ಯ ಪ್ರವೇಶಕ್ಕೆ ಪ್ರತಿಭಟನಾಕಾರರ ಆಗ್ರಹ

ಬಾಕಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತೇನೆ ಎಂದ ಸಂಸದ
ಅಮಾನತ್‌ ಬ್ಯಾಂಕ್‌ ದಿವಾಳಿ ಆಗಿ ಎಷ್ಟೋ ವರ್ಷಗಳಾಗಿದ್ದರೂ ಠೇವಣಿದಾರರಿಗೆ ಇನ್ನೂ ಹಣ ಸಿಕ್ಕಿಲ್ಲ. ಆದರೆ ಗುರು ರಾಘವೇಂದ್ರ ಬ್ಯಾಂಕ್‌ ತ್ವರಿತವಾಗಿ ಠೇವಣಿದಾರರ ಹಣ ಹಿಂತಿರುಗಿಸುತ್ತಿದೆ. ಠೇವಣಿದಾರರ ಬಾಕಿ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ಶ್ರಮವಹಿಸುವುದಾಗಿ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಬೆಂಗಳೂರಿನಲ್ಲಿರುವ ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ ಮತ್ತು ಕರ್ನಾಟಕದಲ್ಲಿ ಐದು ಕೇಂದ್ರಗಳಲ್ಲಿರುವ ಇತರ ನಾಲ್ಕು ಸಹಕಾರ ಬ್ಯಾಂಕ್‌ಗಳು ವಿಫಲವಾದ ನಂತರ ಭಾರತ ಸರ್ಕಾರವು(Government of India) ಹಣ ಕಳೆದುಕೊಂಡ ಗ್ರಾಹಕರಿಗೆ(Customers) ಕ್ಲೈಮು ಮೊತ್ತವನ್ನು ಗರಿಷ್ಠ 5 ಲಕ್ಷಗಳಿಗೆ ಏರಿಸಿತು ಎಂದು ಹೇಳಿದರು.



Read more…