Karnataka news paper

ರಾಜ್ಯದಲ್ಲಿ 21 ಲಕ್ಷ ಮಂದಿ ಬೂಸ್ಟರ್ ಡೋಸ್ ಪಡೆಯಲು ಅರ್ಹ


ಬೆಂಗಳೂರು: ಕೋವಿಡ್ ಲಸಿಕೆಯ ಮೂರನೇ (ಬೂಸ್ಟರ್) ಡೋಸ್ ವಿತರಣೆ ರಾಜ್ಯದಲ್ಲಿ ಇದೇ ಸೋಮವಾರದಿಂದ (ಜ.10) ಪ್ರಾರಂಭವಾಗಲಿದೆ. ಸದ್ಯ ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ 21 ಲಕ್ಷ ಮಂದಿ ಮತ್ತೊಂದು ಡೋಸ್ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. 

ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಸಿಕೆ ವಿತರಣೆಗೆ ಚಾಲನೆ ನೀಡಲಿದ್ದಾರೆ. ಎರಡನೇ ಡೋಸ್ ಪಡೆದು ಒಂಬತ್ತು ತಿಂಗಳು ಪೂರೈಸಿದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಅನಾರೋಗ್ಯ ಹೊಂದಿರುವ 60 ವರ್ಷಗಳ ಮೇಲ್ಪಟ್ಟವರಿಗೆ ಲಸಿಕೆ ವಿತರಿಸಲಾಗುತ್ತದೆ. 

ರಾಜ್ಯದಲ್ಲಿ 2021ರ ಜ.16 ರಿಂದ ಲಸಿಕೆ ವಿತರಿಸಲಾಗುತ್ತಿದೆ. 18 ವರ್ಷಗಳು ಮೇಲ್ಪಟ್ಟ 4.89 ಕೋಟಿ ಮಂದಿಗೆ ಲಸಿಕೆ ವಿತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಅವರಲ್ಲಿ 4.8 ಕೋಟಿ (ಶೇ 99) ಮಂದಿಗೆ ಮೊದಲ ಡೋಸ್ ಮತ್ತು 3.9 ಕೋಟಿ ಮಂದಿಗೆ (ಶೇ 81) ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇದೇ ಜ.3 ರಿಂದ 15ರಿಂದ 18 ವರ್ಷದವರಿಗೆ ಲಸಿಕೆ ವಿತರಣೆ ಪ್ರಾರಂಭಿಸಲಾಗಿದ್ದು, 31.75 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಅವರಲ್ಲಿ 15.5 ಲಕ್ಷ (ಶೇ 49) ಮಂದಿಗೆ ಮೊದಲನೇ ಡೋಸ್ ಲಸಿಕೆ ನೀಡಲಾಗಿದೆ.

6 ಲಕ್ಷ ಆರೋಗ್ಯ ಕಾರ್ಯಕರ್ತರು, 7 ಲಕ್ಷ ಮುಂಚೂಣಿ ಕಾರ್ಯಕರ್ತರು ಮತ್ತು 8 ಲಕ್ಷ 60 ವರ್ಷಗಳು ಮೇಲ್ಪಟ್ಟ ಅಸ್ವಸ್ಥರು ರಾಜ್ಯದಲ್ಲಿ ಎರಡೂ ಡೋಸ್ ಲಸಿಕೆ ಪಡೆದು 9 ತಿಂಗಳು ಕಳೆದಿವೆ. ಇವರು ಮೂರನೇ ಡೋಸ್ ಪಡೆಯಲು ಅರ್ಹರಾಗಿದ್ದಾರೆ. ‘ಕೋವ್ಯಾಕ್ಸಿನ್’ ಮತ್ತು ‘ಕೋವಿಶೀಲ್ಡ್’ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ಪಡೆದವರು ಮಾತ್ರ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅರ್ಹರಾಗಿರುತ್ತಾರೆ. ಸ್ಪುಟ್ನಿಕ್ ಲಸಿಕೆ ಪಡೆದವರು ಮೂರನೇ ಡೋಸ್ ಪಡೆಯುವಂತಿಲ್ಲ. ಎಲ್ಲ ಜಿಲ್ಲೆಗಳಲ್ಲಿಯೂ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ಮೂರನೇ ಡೋಸ್ ಲಸಿಕೆ ಪಡೆಯಲು ಹೊಸದಾಗಿ ನೋಂದಣಿ ಮಾಡಬೇಕಾಗಿಲ್ಲ. 9 ತಿಂಗಳು ಪೂರೈಸಿದವರಿಗೆ ‘ಕೋವಿನ್ ಪೋರ್ಟಲ್‌’ನಿಂದ ಸಂದೇಶ ರವಾನೆಯಾಗುತ್ತದೆ. ಫಲಾನುಭವಿಗಳು ಪೋರ್ಟಲ್‌ ನೆರವಿನಿಂದ ತಮ್ಮ ಸಮಯವನ್ನು ಕಾಯ್ದಿರಿಸುವ ಅವಕಾಶ ಇರುತ್ತದೆ. ನೇರವಾಗಿ ಕೇಂದ್ರಗಳಿಗೆ ತೆರಳಿಯೂ ಲಸಿಕೆ ಪಡೆದುಕೊಳ್ಳಬಹುದು. ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಒದಗಿಸಲಾಗುತ್ತದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.



Read more from source

[wpas_products keywords=”deal of the day sale today kitchen”]