ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ತನಿಖೆಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅವರಿಂದ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.
‘ನಾವು ಸಹ ತಪ್ಪು ಮಾಡಿದ್ದೇವೆ. ಸರಿ ಮಾಡಿ ಎನ್ನುವ ಕಾರಣಕ್ಕೆ ಹೋರಾಟ ಮಾಡುತ್ತಿದ್ದೇವೆ. ಭ್ರಷ್ಟಾಚಾರ ನಿಯಂತ್ರಿಸುವಂತೆ ಆಗ್ರಹಿಸಿ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಸುಮಾರು 1 ಲಕ್ಷ ಗುತ್ತಿಗೆದಾರರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಿರ್ದಿಷ್ಟವಾಗಿ ಯಾವುದೇ ಸಚಿವರು, ಶಾಸಕರು, ಅಧಿಕಾರಿಗಳ ಹೆಸರು ಬಹಿರಂಗಪಡಿಸಲು ನಿರಾಕರಿಸಿದ ಅವರು, ತನಿಖೆ ನಡೆಸುವುದಾದರೆ ಎಲ್ಲ ಸಾಕ್ಷ್ಯಾಧಾರಗಳನ್ನು ನೀಡುವುದಾಗಿ ತಿಳಿಸಿದರು.
ಓದಿ: ಒಳ ನೋಟ: ಶೇ 40ರಷ್ಟು ಲಂಚ -ಬಿಎಸ್‌ವೈ ಅವಧಿಯಲ್ಲೇ ಪ್ರಧಾನಿಗೆ ದೂರು
ಭ್ರಷ್ಟಾಚಾರವನ್ನು ಕೊನೆಗಾಣಿಸುವಂತೆ ಕಳೆದ ಹಲವು ವರ್ಷಗಳಿಂದ ಎಲ್ಲ ಸರ್ಕಾರಗಳಿಗೂ ಮನವಿ ಮಾಡಿಕೊಳ್ಳುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಹೋರಾಟದ ಹಾದಿ ಅನಿವಾರ್ಯ ಎಂದು ತಿಳಿಸಿದರು.
ಸರ್ಕಾರಗಳು ಬದಲಾದಂತೆ ಭ್ರಷ್ಟಾಚಾರ ಕಡಿಮೆಯಾಗಬೇಕು. ಆದರೆ ಬೆಲೆಗಳು ಏರಿದಂತೆ ಭ್ರಷ್ಟಾಚಾರವೂ ಹೆಚ್ಚುತ್ತಿದೆ. ಇದರಿಂದ ಕಾಮಗಾರಿಗಳ ಗುಣಮಟ್ಟ ಕುಸಿಯುತ್ತಿದೆ ಮತ್ತು ಗುತ್ತಿಗೆದಾರರು ಸಂಕಷ್ಟಕ್ಕೀಡಾಗಲು ಕಾರಣವಾಗಿದೆ ಎಂದು ದೂರಿದರು.
ಪ್ರಮುಖ ಕಾಮಗಾರಿಗಳನ್ನು ನಿರ್ವಹಿಸುವ ಲೋಕೋಪಯೋಗಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಸಣ್ಣ ನೀರಾವರಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಕಾಮಗಾರಿಗಳಿಗೆ ಮಂಜೂರಾಗುವ ಒಟ್ಟು ಅನುದಾನದಲ್ಲಿ ಶೇಕಡ 30-40ಕ್ಕಿಂತಲೂ ಹೆಚ್ಚು ಮೊತ್ತ ಭ್ರಷ್ಟಾಚಾರ ಮತ್ತಿತರ ವೆಚ್ಚಗಳಿಗೆ ಸರಿದೂಗಿಸಬೇಕಾಗಿದೆ ಎಂದರು.