Karnataka news paper

ಉತ್ತರಪ್ರದೇಶ ಮತ ಸಮರ: ಬಿಜೆಪಿಗೆ ಯೋಗಿ ಬಲ, ಎಸ್‌ಪಿಗೆ ಒಬಿಸಿ ಮಂತ್ರ, ಬಿಎಸ್‌ಪಿ ‘ಹಳೆ’ ತಂತ್ರ..!


ಲಖನೌ (ಉತ್ತರ ಪ್ರದೇಶ): ಪಂಚ ರಾಜ್ಯಗಳ ಚುನಾವಣೆ ಘೋಷಣೆ ಬೆನ್ನ ಹಿಂದೆಯೇ ಪ್ರಮುಖ ಪಕ್ಷಗಳಲ್ಲಿ ಗೆಲುವಿನ ತಂತ್ರ – ಪ್ರತಿತಂತ್ರಗಳ ಪೈಪೋಟಿ ತಾರಕಕ್ಕೇರಿದೆ. ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶವನ್ನು ತನ್ನ ಸುಪರ್ದಿಯಲ್ಲಿ ಉಳಿಸಿಕೊಳ್ಳುವ ಉಮೇದು ಬಿಜೆಪಿಯಲ್ಲಿ ಗರಿಗೆದರಿದೆ. ಅದಕ್ಕಾಗಿ ‘ಡಬಲ್‌ ಎಂಜಿನ್‌’ ಮಂತ್ರ ಪಠಿಸುತ್ತಿರುವ ಯೋಗಿ ಸರಕಾರ, ಪ್ರಾದೇಶಿಕ ಪ್ರಾಬಲ್ಯದ ಪುಟ್ಟ ಪಕ್ಷಗಳ ಸೇನೆ ಕಟ್ಟಿಕೊಂಡು ದೊಡ್ಡ ಸಮರ ಗೆಲ್ಲುವ ಭರವಸೆ ತಳೆದಿದೆ. ಪ್ರತಿಯಾಗಿ ತಕ್ಷಣದ ಎದುರಾಳಿ ಸಮಾಜವಾದಿ ಪಕ್ಷ (ಎಸ್‌ಪಿ) ಕೂಡ ಇತರೆ ಹಿಂದುಳಿದ ವರ್ಗ (ಒಬಿಸಿ) ಮಂತ್ರ ಪಠಿಸುತ್ತ ಸಮರ ಸನ್ನದ್ಧವಾಗಿದೆ. ಬಿಎಸ್‌ಪಿಯು ಈ ಮೊದಲಿನ ದಲಿತ – ಬ್ರಾಹ್ಮಣ ಹಳೆಯ ಸೋಷಿಯಲ್‌ ಎಂಜಿನಿಯರಿಂಗ್‌ ತಂತ್ರವನ್ನೇ ನೆಚ್ಚುಕೊಂಡು ಅಚ್ಚರಿಯ ಫಲಿತಾಂಶ ನೀಡಲು ನಿರ್ಧರಿಸಿದೆ. ಕಾಂಗ್ರೆಸ್‌ ಇಲ್ಲಿ ‘ಲೆಕ್ಕಕ್ಕುಂಟು ಆಟಕ್ಕಿಲ್ಲ’. ವಾಸ್ತವಾಗಿ ಬಿಜೆಪಿ-ಎಸ್‌ಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೂ ಕೊನೆ ಕ್ಷಣದಲ್ಲಿ ಬಿಎಸ್‌ಪಿ ಬಾಹುಳ್ಯ ಪ್ರದರ್ಶಿಸಿದರೆ ತ್ರಿಕೋನ ಪೈಪೋಟಿ ನಡೆಯಲೂಬಹುದು. ಅದರ ಸಾಧ್ಯಾಸಾಧ್ಯತೆಗಳ ಒಳನೋಟ ಇಲ್ಲಿದೆ.

​ಬಿಜೆಪಿಯಿಂದ ಇತಿಹಾಸ ಸೃಷ್ಟಿ..?

ಉತ್ತರ ಪ್ರದೇಶದಲ್ಲಿ 2014, 2019 ಮತ್ತು 2017ರಲ್ಲಿ ಮೂರು ಬಾರಿ ಬಿಜೆಪಿ ಅಮೋಘ ಗೆಲುವು ಸಾಧಿಸಿ ಅಧಿಕಾರ ಹಿಡಿದಿದೆ. ಅಂತಹದ್ದೇ ದಿಗ್ವಿಜಯವನ್ನು ಮರಳಿ ಸಾಧಿಸುವ ಛಲ ಪಕ್ಷದಲ್ಲಿ ಬಲಗೊಂಡಿದೆ. ಆದರೆ, ಈ ಬಾರಿ ಅದು ಅಷ್ಟು ಸುಲಭಕ್ಕೆ ಕೈಗೂಡಬಲ್ಲದೆ? ರೈತ ಪ್ರತಿಭಟನೆಯ ಅಸಮಾಧಾನದ ಕಿಚ್ಚು, ಬೆಲೆ ಏರಿಕೆಯ ಬಿಸಿ ರಾಜ್ಯದ ಮತದಾರರ ಮನಸ್ಸನ್ನು ಚಂಚಲಗೊಳಿಸಬಹುದು. ಇದನ್ನು ಶಮನಗೊಳಿಸಲು ಯೋಗಿ ಸರಕಾರ, ಅಭಿವೃದ್ಧಿ ಮತ್ತು ರಾಷ್ಟ್ರೀಯತೆ ಎನ್ನುವ ಎರಡು ಪ್ರಬಲ ಕಾರ್ಡ್‌ಗಳನ್ನು ಚಾಲನೆಗೆ ತಂದಿದೆ. ಇದೇ ವೇಳೆ, ಎದುರಾಳಿ ಬಣದಲ್ಲಿ ಒಗ್ಗಟ್ಟಿಲ್ಲದಿರುವುದು ಕೂಡ ಬಿಜೆಪಿಗೆ ವರವಾಗಬಹುದು ಎನ್ನುವ ಲೆಕ್ಕಾಚಾರ ಇದೆ. ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಇತಿಹಾಸ ಮರು ನಿರ್ಮಾಣಗೊಳ್ಳಲಿದೆ. ರಾಜ್ಯದ ಪ್ರಥಮ ಮುಖ್ಯಮಂತ್ರಿ ಸ್ವರೂಪಾನಂದ ನಂತರ ಸತತ ಎರಡನೇ ಅವಧಿಗೆ ಸಿಎಂ ಪಟ್ಟ ಉಳಿಸಿಕೊಂಡ ಶ್ರೇಯಸ್ಸು ಯೋಗಿ ಅವರಿಗೆ ದಕ್ಕಲಿದೆ. ಅಷ್ಟೇ ಅಲ್ಲದೇ ರಾಷ್ಟ್ರ ಮಟ್ಟದಲ್ಲಿ ಅವರಿಗೆ ನರೇಂದ್ರ ಮೋದಿ ಉತ್ತರಾಧಿಕಾರಿ ಎಂಬ ವಾದಕ್ಕೂ ಪುಷ್ಟಿ ಸಿಗಲಿದೆ.

ಶಕ್ತಿ: ಪ್ರಬಲ ನಾಯಕತ್ವ ಮತ್ತು ಕಾರ್ಯಕರ್ತರ ಬಲ

ದೌರ್ಬಲ್ಯ: ಆಡಳಿತ ವಿರೋಧಿ ಅಲೆ

ಸಾಮರ್ಥ್ಯ: ಹಿಂದುತ್ವ ಮತಗಳನ್ನು ಒಗ್ಗೂಡಿಸುವ ಸಾಮರ್ಥ್ಯ

ಸಮಸ್ಯೆ: ಪಕ್ಷದೊಳಗಿನ ಆಂತರಿಕ ಕಿತ್ತಾಟ

ಹಿಂದಿನ ಚುನಾವಣೆಗಳಲ್ಲಿಪಕ್ಷದ ಸಾಧನೆ

* ವಿಧಾನಸಭೆ

2012: ಗೆದ್ದ ಸ್ಥಾನ 47 ಮತ ಪ್ರಮಾಣ 15%

2017: ಗೆದ್ದ ಸ್ಥಾನ 312 ಮತ ಪ್ರಮಾಣ 39.67%

*ಲೋಕಸಭೆ

2014: ಗೆದ್ದ ಸ್ಥಾನ 71 ಮತ ಪ್ರಮಾಣ 42.63%

2017: ಗೆದ್ದ ಸ್ಥಾನ 62 ಮತ ಪ್ರಮಾಣ 49.98%

ಎಸ್‌ಪಿ ರಂಗಿನ ಭರವಸೆ

ಅಧಿಕಾರದಲ್ಲಿದ್ದರೂ ಕೂಡ 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯ ಎದುರು ಸಮಾಜವಾದಿ ಪಾರ್ಟಿ (ಎಸ್‌ಪಿ) ಧೂಳಿಪಟವಾಗಿತ್ತು. ಅಂದು ಪಕ್ಷ 5 ಸ್ಥಾನ ಗೆಲ್ಲುವಷ್ಟರಲ್ಲಿ ನಿಟ್ಟುಸಿರುಬಿಟ್ಟಿತ್ತು. ಏಕಾಂಗಿಯಾಗಿ ನಿಂತು ಹಿಂದುತ್ವದ ಶಿಖರ ಹಿಮ್ಮೆಟ್ಟಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಅಖಿಲೇಶ್‌ ಯಾದವ್‌ ಅಂದು ಅರ್ಥ ಮಾಡಿಕೊಂಡರು. ವಿಶೇಷವಾಗಿ ಕೌಟುಂಬಿಕ ಕಲಹ ಮತ್ತು ಆಡಳಿತ ವಿರೋಧಿ ಅಲೆ ಅಂದು ಅವರನ್ನು ಹಣ್ಣು ಮಾಡಿತ್ತು. ಆದ್ದರಿಂದ ಅವರು 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಕೈ ಜೋಡಿಸುವ ಹೊಸ ಪ್ರಯೋಗಕ್ಕೆ ಮುಂದಾದರು. ಅದು ನೆಲ ಕಚ್ಚಿತು. ನಂತರ 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬಿಟ್ಟು ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಜತೆಗೂಡಿ ಅಖಿಲೇಶ್‌ ಸಮರಕ್ಕಿಳಿದರು. ಅಲ್ಲಿಯೂ ವಿಫಲರಾದರು. ಈ ಬಾರಿ ಅದೆಲ್ಲವನ್ನೂ ಮರೆತು, 2014, 2017ರಲ್ಲಿ ಅಮಿತ್‌ ಶಾ ಮಾಡಿದ ಒಬಿಸಿ ಪ್ರಯೋಗವನ್ನು ನಕಲು ಮಾಡಿದ್ದಾರೆ. ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಪ್ರತಿನಿಧಿಸುವ ಸಣ್ಣ ಪುಟ್ಟ ಪಕ್ಷಗಳನ್ನು ಅವರು ಒಗ್ಗೂಡಿಸಿಕೊಂಡು ಕಾದಾಟಕ್ಕಿಳಿದಿದ್ದಾರೆ. ಈ ಪ್ರಯೋಗ ಗೆದ್ದರೆ ಅವರಿಗೆ ಅಧಿಕಾರ, ಬಿದ್ದರೆ ಮತ್ತೆ ಐದು ವರ್ಷ ಅಜ್ಞಾತವಾಸ.

ಶಕ್ತಿ: ಬಿಜೆಪಿಗೆ ನೇರ ಸವಾಲೊಡ್ಡುವ ಸಾಮರ್ಥ್ಯ

ದೌರ್ಬಲ್ಯ: ಪಕ್ಷದಲ್ಲಿ ದ್ವಿತೀಯ ಮತ್ತು ತೃತೀಯ ಹಂತದ ನಾಯಕರ ಕೊರತೆ

ಸಾಮರ್ಥ್ಯ: ಅಖಿಲೇಶ್‌ ರಾಷ್ಟ್ರಮಟ್ಟದಲ್ಲಿ ಮಮತಾ ಬ್ಯಾನರ್ಜಿಗೆ ಸಮಾನಂತರ ನಾಯಕರಾಗಿ ಹೊರಹೊಮ್ಮುತ್ತಿರುವುದು

ಸಮಸ್ಯೆ: ಅತಿಯಾದ ಆತ್ಮವಿಶ್ವಾಸ

ಹಿಂದಿನ ಚುನಾವಣೆಗಳಲ್ಲಿ ಪಕ್ಷದ ಸಾಧನೆ

* ವಿಧಾನಸಭೆ

2012: ಗೆದ್ದ ಸ್ಥಾನ 226 ಮತ ಪ್ರಮಾಣ 29.3%

2017: ಗೆದ್ದ ಸ್ಥಾನ 47 ಮತ ಪ್ರಮಾಣ 21.82%

*ಲೋಕಸಭೆ

2014: ಗೆದ್ದ ಸ್ಥಾನ 5, ಮತ ಪ್ರಮಾಣ 22.2%

2017: ಗೆದ್ದ ಸ್ಥಾನ 5, ಮತ ಪ್ರಮಾಣ 18.11%

ಪಂಜರದ ಆನೆಯಾಗಿರುವ ಬಿಎಸ್ಪಿ

ಆನೆ ಚಿಹ್ನೆಯ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ‘ಪಂಜರದ ಆನೆ’ಯಾಗಿ ಮುದುಡಿ ಕುಳಿತಿದೆ. ಸತತ ನಾಲ್ಕು ಚುನಾವಣೆಗಳು ನೀಡಿದ ಸೋಲಿನ ಆಘಾತದಿಂದ ಆನೆ ಪಕ್ಷದ ಆತ್ಮವಿಶ್ವಾಸ ಅಡಗಿ ಹೋಗಿದೆ. 2019ರ ಲೋಕಸಭೆ ಚುನಾವಣೆ ವೇಳೆ ಎಸ್ಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡು ಗೆಲುವನ್ನು ಡಬಲ್‌ ಡಿಜಿಟ್‌ಗೆ ಎತ್ತರಿಸಿದ್ದ ಮಾಯಾವತಿ ಈ ಬಾರಿ ಏಕಾಂಗಿಯಾಗಿದ್ದಾರೆ. ಚುನಾವಣೆಯಲ್ಲಿ ಗೆದ್ದ ಪಕ್ಷದ ಅನೇಕ ಶಾಸಕರು ಕೂಡ ಅವರನ್ನು ತೊರೆದು ಎದುರಾಳಿ ಬಣ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯು ಬಿಎಸ್‌ಪಿ ಪಾಲಿಗೆ ಅಳಿವು ಉಳಿವಿನ ಹೋರಾಟ ಎನ್ನಿಸಿದೆ.

ಶಕ್ತಿ: ಪ್ರಶ್ನಾತೀತ ನಾಯಕತ್ವ

ದೌರ್ಬಲ್ಯ: ಸಂಪನ್ಮೂಲ ಕೊರತೆ

ಸಾಮರ್ಥ್ಯ: ಪಕ್ಷದ ಪುನರುಜ್ಜೀವನ

ಸಮಸ್ಯೆ: ಕರಗುತ್ತಿರುವ ಕಾರ್ಯಕರ್ತರ ಪಡೆ

ಹಿಂದಿನ ಚುನಾವಣೆಯಲ್ಲಿಪಕ್ಷದ ಸಾಧನೆ

*ವಿಧಾನಸಭೆ

2012: ಗೆದ್ದ ಸ್ಥಾನ 80 ಮತ ಪ್ರಮಾಣ 25.91%

2017: ಗೆದ್ದ ಸ್ಥಾನ 19 ಮತ ಪ್ರಮಾಣ 22.23%

*ಲೋಕಸಭೆ

2014: ಗೆದ್ದ ಸ್ಥಾನ 0 ಮತ ಪ್ರಮಾಣ 19.6%

2017: ಗೆದ್ದ ಸ್ಥಾನ 10 ಮತ ಪ್ರಮಾಣ 19.43%

ಕಾಂಗ್ರೆಸ್‌ ಕಂಗಾಲು..!

ಹಿಂದಿನ ಚುನಾವಣೆಗಳ ಗಳಿಕೆಗೆ ಹೋಲಿಸಿದರೆ ಕಾಂಗ್ರೆಸ್‌ ಇಲ್ಲಿ ಕಳೆದುಕೊಳ್ಳುವಂತದ್ದು ಏನೂ ಇಲ್ಲ. 1990ರ ದಶಕದಿಂದೀಚೆಗೆ ರಾಜ್ಯದ ಜನ ಕಾಂಗ್ರೆಸ್‌ ಪಕ್ಷವನ್ನು ಬಹುತೇಕ ಮರೆತು ಬಿಟ್ಟಿದ್ದಾರೆ. 2017ರ ಚುನಾವಣೆಯಲ್ಲಿ ಎರಡಂಕಿ ಸಾಧನೆಯೂ ಪಕ್ಷಕ್ಕೆ ಸಾಧ್ಯವಾಗಿಲ್ಲ. ಈ ಬಾರಿ ಪ್ರಿಯಾಂಕಾ ವಾದ್ರಾ ಪ್ರಚಾರದ ರಥ ಏರಿದ್ದು, ಮಹಿಳಾ ಮತದಾರರನ್ನು ಟಾರ್ಗೆಟ್‌ ಮಾಡಿಕೊಂಡು ಗೆಲುವಿನ ಶತ ಪ್ರಯತ್ನ ನಡೆಸಿದ್ದಾರೆ. ಅವರ ಈ ಗುರಿ ಕೈಗೂಡುವುದೇ ಎನ್ನುವುದು ಯಕ್ಷ ಪ್ರಶ್ನೆ. ಸದ್ಯದ ಸ್ಥಿತಿಯಲ್ಲಿ 20 ಸ್ಥಾನಗಳ ಗಡಿ ದಾಟಿದರೆ ಅದು ಪ್ರಿಯಾಂಕಾ ಅವರ ಬಹುದೊಡ್ಡ ಸಾಧನೆ ಎನ್ನಿಸುವುದು ಖಚಿತ. ಅಂತಹದ್ದೊಂದು ಸಾಧನೆ 2024ರ ಲೋಕಸಭೆ ಚುನಾವಣೆಗೂ ಪಕ್ಷದ ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ.

ಶಕ್ತಿ: ಪ್ರಿಯಾಂಕಾ ವಾದ್ರಾ ಅವರ ಮಹಿಳಾ ಸಬಲೀಕರಣ ಭರವಸೆ

ದೌರ್ಬಲ್ಯ: ವಿಶ್ವಾಸಾರ್ಹತೆಯ ಕೊರತೆ

ಸಾಮರ್ಥ್ಯ: ಮೊದಲಿನಿಂದಲೇ ನೆಲೆಯ ಸೃಷ್ಟಿ

ಸಮಸ್ಯೆ: ದುರ್ಬಲ ಕಾರ್ಯಕರ್ತರು

ಹಿಂದಿನ ಚುನಾವಣೆಯಲ್ಲಿ ಪಕ್ಷದ ಸಾಧನೆ

*ವಿಧಾನಸಭೆ

2012: ಗೆದ್ದ ಸ್ಥಾನ 28 ಮತ ಪ್ರಮಾಣ 11.7%

2017: ಗೆದ್ದ ಸ್ಥಾನ 7 ಮತ ಪ್ರಮಾಣ 6.25%

*ಲೋಕಸಭೆ

2014: ಗೆದ್ದ ಸ್ಥಾನ 2 ಮತ ಪ್ರಮಾಣ 7.5%

2017: ಗೆದ್ದ ಸ್ಥಾನ 1 ಮತ ಪ್ರಮಾಣ 6.36%



Read more

[wpas_products keywords=”deal of the day sale today offer all”]