Karnataka news paper

ಸ್ವಚ್ಛತಾ ವಾಹಿನಿಗಳ ಸ್ಟೇರಿಂಗ್‌ ಮಹಿಳೆ ಕೈಗೆ; ಬೆಂಗಳೂರು ಗ್ರಾಮಾಂತರ ಜಿಲ್ಲೆಯ 30 ಮಂದಿಗೆ ವಾಹನ ಚಾಲನೆ ತರಬೇತಿ!


ಹೈಲೈಟ್ಸ್‌:

  • ವಾಹನಗಳ ಚಾಲನೆಯಲ್ಲಿ ಸೈ ಎನಿಸಿಕೊಂಡಿರುವ ಮಹಿಳೆಯರು ಇನ್ಮುಂದೆ ಗ್ರಾಮೀಣ ಭಾಗದ ಸ್ವಚ್ಛತಾ ವಾಹಿನಿಗಳ ಸ್ಟೇರಿಂಗ್‌ ಹಿಡಿಯಲಿದ್ದಾರೆ
  • ಗ್ರಾಮೀಣ ಭಾಗದಲ್ಲಿ ದಿನೇದಿನೆ ಸ್ವಚ್ಛತಾ ಸಮಸ್ಯೆ ಉಲ್ಬಣಿಸುತ್ತಿದ್ದು, ಸಂಪೂರ್ಣ ಸ್ವಚ್ಛತೆ ಸಾಧಿಸುವ ದೃಷ್ಟಿಯಿಂದ ಈ ಸ್ವಚ್ಛತೆಯ ಜವಾಬ್ದಾರಿಯನ್ನು ಮಹಿಳಾ ಒಕ್ಕೂಟಗಳಿಗೆ ನೀಡಲಾಗಿದೆ
  • ಸಂಜೀವಿನಿ ಯೋಜನೆಯಡಿ ನೋಂದಾಯಿಸಿಕೊಂಡಿರುವ ಒಕ್ಕೂಟದ ಮಹಿಳೆಯರು ಕಸ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದು, ಕಸ ಸಂಗ್ರಹಣೆ, ಒಣ ಹಸಿ ತ್ಯಾಜ್ಯ ವಿಲೇವಾರಿ ಮಾಡಲಿದ್ದಾರೆ

ಎಂ. ಪ್ರಶಾಂತ್‌ ಸೂಲಿಬೆಲೆ
ಬೆಂಗಳೂರು ಗ್ರಾಮಾಂತರ:
ಬಸ್‌, ಕಾರು, ಟ್ರಕ್‌ ಹೀಗೆ ನಾನಾ ವಾಹನಗಳ ಚಾಲನೆಯಲ್ಲಿ ಸೈ ಎನಿಸಿಕೊಂಡಿರುವ ಮಹಿಳೆಯರು ಇನ್ಮುಂದೆ ಗ್ರಾಮೀಣ ಭಾಗದ ಸ್ವಚ್ಛತಾ ವಾಹಿನಿಗಳ ಸ್ಟೇರಿಂಗ್‌ ಹಿಡಿಯಲಿದ್ದಾರೆ. ಸಂಜೀವಿನಿ ಯೋಜನೆಯಡಿ ಗ್ರಾಪಂ ಮಟ್ಟದಲ್ಲಿ ರಚನೆಯಾಗಿರುವ ಮಹಿಳಾ ಸಂಘಗಳ ಒಕ್ಕೂಟದಲ್ಲಿ ಆಯ್ದ 30 ಮಹಿಳೆಯರಿಗೆ ವಾಹನ ಚಾಲನೆ ತರಬೇತಿ ನೀಡುವ ಮೂಲಕ ಸಂಜೀವಿನಿ ಹೊಸದೊಂದು ಹೆಜ್ಜೆಯಿಟ್ಟು ಮಹಿಳೆಯರಿಗೆ ದಾರಿ ದೀಪವಾಗಿದೆ.

ಮಹಿಳೆಯರನ್ನು ಸ್ವಾವಲಂಬನೆ ಜೀವನದೆಡೆಗೆ ಕರೆದೊಯ್ಯಲು ಅಗತ್ಯವಾಗಿರುವ ತರಬೇತಿಗಳನ್ನು ನೀಡಿ ಅವರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೇಂದ್ರ ಮಹತ್ವಾಕಾಂಕ್ಷೆಯಾಗಿರುವ ಸಂಜೀವಿನಿ ಯೋಜನೆ ಮಹಿಳಾ ಸಂಘಗಳನ್ನು ಆಧಾರವವಾಗಿಟ್ಟುಕೊಂಡು ಅನುಷ್ಠಾನಗೊಳ್ಳುತ್ತಿದೆ. ಇದರಲ್ಲಿ ಪ್ರಮುಖವಾಗಿ ಗ್ರಾಪಂ ಮಟ್ಟದಲ್ಲಿ ಮಹಿಳಾ ಒಕ್ಕೂಟಗಳಿಗೆ ಸ್ವಚ್ಛತಾ ಒಡಂಬಡಿಕೆ ಯೋಜನೆ ಹೆಚ್ಚು ಗಮಸೆಳೆದಿದೆ.

2017-18 ಸಾಲಿನಿಂದ ಜಿಲ್ಲೆಯಲ್ಲಿ ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಸ್ವಸಹಾಯ ಗುಂಪುಗಳನ್ನು ಸಾಂಸ್ಥಿಕ ಸಂಸ್ಥೆಯಲ್ಲಿ ಒಳಪಡಿಸಿ ಬಲವರ್ಧನೆಗೊಳಿಸಲು ವಾರ್ಡ್‌ ಮತ್ತು ಗ್ರಾಪಂ ಮಟ್ಟದಲ್ಲಿ ಒಕ್ಕೂಟಗಳನ್ನು ರಚಿಸಿದೆ.
ಮಹಿಳಾ ಸ್ವಸಹಾಯ ಗುಂಪುಗಳಿಗೆ ₹20 ಲಕ್ಷದವರೆಗೆ ಅನುದಾನ ಲಭ್ಯ!
ಸ್ವಚ್ಛತಾ ಕಾರ್ಯಕ್ಕೂ ಸೈ
ಗ್ರಾಮೀಣ ಭಾಗದಲ್ಲಿ ದಿನೇದಿನೆ ಸ್ವಚ್ಛತಾ ಸಮಸ್ಯೆ ಉಲ್ಬಣಿಸುತ್ತಿದ್ದು, ಸಂಪೂರ್ಣ ಸ್ವಚ್ಛತೆ ಸಾಧಿಸುವ ದೃಷ್ಟಿಯಿಂದ ಈ ಸ್ವಚ್ಛತೆಯ ಜವಾಬ್ದಾರಿಯನ್ನು ಮಹಿಳಾ ಒಕ್ಕೂಟಗಳಿಗೆ ನೀಡಲಾಗಿದೆ. ಸಂಜೀವಿನಿ ಯೋಜನೆಯಡಿ ನೋಂದಾಯಿಸಿಕೊಂಡಿರುವ ಒಕ್ಕೂಟದ ಮಹಿಳೆಯರು ಕಸ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದು, ಕಸ ಸಂಗ್ರಹಣೆ, ಒಣ ಹಸಿ ತ್ಯಾಜ್ಯ ವಿಲೇವಾರಿ ಮಾತ್ರವಲ್ಲದೆ ಸ್ವಚ್ಛತಾ ವಾಹಿನಿಗಳ ಸ್ಟೆರಿಂಗ್‌ ಕೂಡ ಮಹಿಳೆಯರೇ ಹಿಡಿಯಲು ಅಗತ್ಯ ತರಬೇತಿಯನ್ನು ಜಿಪಂ ಸಿಇಒ ರವಿಕುಮಾರ್‌ ಮತ್ತು ಅಧಿಕಾರಿಗಳು ನೀಡುವ ಮೂಲಕ ಜಿಲ್ಲೆಯಲ್ಲಿ ಮಹಿಳೆಯರ ಸ್ವಾವಲಂಬನೆ ಜೀವನಕ್ಕೆ ಉತ್ತಮ ವೇದಿಕೆ ಕಲ್ಪಿಸಿದ್ದಾರೆ.
ಯಶಸ್ವಿನಿ ಯೋಜನೆಗೆ ಮರುಜೀವ: ಗ್ರಾಮೀಣರಿಗೆ ಆಶಾಕಿರಣ, 1.5 ಕೋಟಿ ಜನರಿಗೆ ಉಚಿತ ಚಿಕಿತ್ಸೆ!
ಒಡಬಂಡಿಕೆ
ಜಿಲ್ಲೆಯ 101 ಗ್ರಾಪಂಗಳಲ್ಲಿ 70 ಗ್ರಾಪಂ ಮಟ್ಟದ ಒಕ್ಕೂಟಗಳಿಂದ 208 ಸ್ವಸಹಾಯ ಗುಂಪಿನ ಸದಸ್ಯರಿಗೆ ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆ ತರಬೇತಿ ನೀಡಲಾಗಿದೆ. ಇದಲ್ಲದೆ ತ್ಯಾಜ್ಯ ಸಾಗಿಸುವ ವಾಹನಗಳ ಚಾಲನೆಗೂ ಮಹಿಳೆಯರನ್ನು ನೇಮಕ ಮಾಡಲು ಮುಂದಾಗಿದೆ.
ಉದ್ಯೋಗ ಸ್ಥಳದಲ್ಲಿ ಮಹಿಳಾ ದೌರ್ಜನ್ಯ ತಡೆ ಕಾಯ್ದೆ: 70% ಸಂಸ್ಥೆಗಳಲ್ಲಿ ‘ಪಾಶ್‌’ ಸಮಿತಿಯೇ ಇಲ್ಲ..!
30 ಮಂದಿಗೆ ತರಬೇತಿ
ಜಿಲ್ಲೆಯ ಆಯ್ದ ಗ್ರಾಪಂಗಳಲ್ಲಿ 30 ಮಂದಿ ಮಹಿಳೆಯರಿಗೆ ವಾಹನ ಚಾಲನೆ ತರಬೇತಿ ನೀಡಲಾಗಿದೆ. ಮುಂದಿನ ವಾರದಲ್ಲಿ ಮತ್ತೆ 30 ಮಂದಿಗೆ ತರಬೇತಿ ಸಿಗಲಿದೆ. ತರಬೇತಿ ಪಡೆದವರ ಸೇವೆಯನ್ನು ಗ್ರಾಪಂಗಳಲ್ಲಿ ಪಡೆಯಲು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ 99 ಗ್ರಾಪಂಗಳೊಂದಿಗೆ ಸ್ವಚ್ಛತಾ ಒಡಬಂಡಿಕೆಯನ್ನು ಮಹಿಳಾ ಸಂಘಗಳು ಮಾಡಿಕೊಂಡಿವೆ.



Read more