ಕಾಲೇಜಿನಲ್ಲಿ ಎನ್‌ಎಸ್‌ಎಸ್ ಸ್ವಯಂ ಸೇವಕಿಯಾಗಿ ನಡೆಸಿದ್ದ ಸೇವಾ ಚಟುವಟಿಕೆಗಳನ್ನುಮುಂದುವರಿಸುವ ಉದ್ದೇಶದಿಂದ 21 ವರ್ಷದ ಎ.ಎಂ.ಕೀರ್ತನಾ ದಾನಿಗಳ ನೆರವಿನಿಂದ ಎನ್‌ಜಿಒ ಆರಂಭಿಸಿದ್ದಾರೆ. ತನ್ನ ಕಾಲೇಜು ದಿನಗಳಲ್ಲಿ ದಾನಿಗಳಿಂದ ಪ್ರಾಯೋಜಕತ್ವ ಪಡೆದ ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಮತ್ತು ಶೈಕ್ಷಣಿಕ ಸಾಮಗ್ರಿ ಕೊಡಿಸುವ ಕೆಲಸ ಮಾಡಿದ್ದರು. ಇದರ ವಿಸ್ತರಣೆ ಭಾಗವಾಗಿ ‘ಸ್ಮೈಲ್ ಫಾರ್ ಸ್ಕೂಲ್’ ಎಂಬ ಎನ್‌ಜಿಒ ಆರಂಭಿಸಿದ್ದು, ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ಭೌತಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದಾರೆ.
ವಿದ್ಯಾರ್ಥಿ ಜೀವನ ಎಂದರೆ ಕೇವಲ ಓದುವುದು ಮಾತ್ರವಲ್ಲ. ಎನ್‌ಎಸ್ ಎಸ್ ಸೇರಿದಂತೆ ನಾನಾ ಚಟುವಟಿಕೆಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಬಹುದೆಂದು ಕೀರ್ತನಾ ತೋರಿಸಿಕೊಟ್ಟಿದ್ದಾರೆ.
ಎಂ.ಸಂತೋಷ್ ಕುಮಾರ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ, ಜೆಎಸ್‌ಎಸ್ ಕಾಲೇಜು
ಮಂಡ್ಯ ಜಿಲ್ಲೆಯ ಹಡಗನಹಳ್ಳಿಯ ರೈತ ಕುಟುಂಬದ ಮಲ್ಲೇಶ್ ಮತ್ತು ರಾಧಾ ದಂಪತಿ ಪುತ್ರಿ ಎ.ಎಂ.ಕೀರ್ತನಾ ಇತ್ತೀಚಿಗಷ್ಟೇ ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ವೋಕ್ ಮುಗಿಸಿದ್ದಾರೆ. ಕಾಲೇಜು ದಿನಗಳಲ್ಲಿ ವ್ಯಾಸಂಗ ಜತೆಗೆ ಎನ್ ಎಸ್‌ಎಸ್ ಚಟುವಟಿಕೆಗಳಲ್ಲಿ ಪಾಲ್ಗೊಂಡು ‘ಸರಕಾರಿ ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ ನಾಯಕಿಯಾಗಿ ಹುಣಸೂರು ತಾಲೂಕಿನ ಕುಟ್ಟವಾಡಿ, ಮಂಟಿಹಾಡಿ ಹಾಗೂ ದೇವಲಾಪುರದ ಸರಕಾರಿ ಶಾಲೆಗಳಿಗೆ ಚಲನಚಿತ್ರ ಕಲಾವಿದ ಸ್ವಾಮಿ ತಂಡದೊಂದಿಗೆ ತೆರಳಿ ಹೊಸ ರೂಪ ನೀಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಕಂಪ್ಯೂಟರ್, ಪ್ರಿಂಟರ್, ಟ್ಯಾಬ್, ಸ್ಮಾರ್ಟ್ ಟಿ.ವಿ, ಕ್ರೀಡಾ ಹಾಗೂ ಕಲಿಕಾ ಸಾಮಗ್ರಿಗಳನ್ನು ದಾನಿಗಳ ಪ್ರಾಯೋಜಕತ್ವದಲ್ಲಿ ಕೊಡಿಸಿದ್ದರು.
ಇದೇ ರೀತಿ ದೇವಗಳ್ಳಿ, ಕಾಲನಿ ವತ್ತು ಗಾಂಧಿ ನಗರ ಪ್ರೌಢಶಾಲೆಗಳಿಗೂ ಸಹಾಯ ಮಾಡಿದರು. ಸಸ್ಯಧಾಮದ ಸಹಯೋಗದಲ್ಲಿ ಮೈಸೂರಿನ ಸುತ್ತಮುತ್ತ 2,500ಕ್ಕೂ ಹೆಚ್ಚು ಗಿಡಗಳ ನೆಡಲು ಕಾರಣಕರ್ತರಾಗಿದ್ದಾರೆ.
ಕೋವಿಡ್-19 ರ ಲಾಕ್‌ಡೌನ್ ಸಂದರ್ಭಗಳಲ್ಲಿ ತೇಜಸ್ವಿ ಅವರೊಂದಿಗೆ 10 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಾಸ್ಕ್, ಸ್ಯಾನಿಟೈಜರ್ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಕಾಲೇಜಿನಲ್ಲಿ ಓದುತ್ತಿರಬೇಕಾದರೆ ನನ್ನ ಖರ್ಚಿನ ಹಣ ಕೂಡಿಟ್ಟು ಸರಕಾರಿ ಶಾಲೆಗಳಿಗೆ ಲೇಖನ ಸಾಮಗ್ರಿ ಕೊಡಿಸುತ್ತಿದ್ದೆ. ಹೆಚ್ಚು ಶಾಲೆಗಳು ಸಹಾಯ ಕೇಳಿದಾಗ ನಾನು ದಾನಿಗಳ ಮೊರೆ ಹೋದೆ. ಇದರ ಮುಂದುವರಿದ ಭಾಗವೇ ಸ್ಮೈಲ್ ಫಾರ್ ಸ್ಕೂಲ್.
– ಎ.ಎಂ.ಕೀರ್ತನಾ ಸಂಸ್ಥಾಪಕಿ, ಸ್ಮೈಲ್ ಫಾರ್ ಸ್ಕೂಲ್
Read more
[wpas_products keywords=”deal of the day sale today offer all”]