ಹೈಲೈಟ್ಸ್:
- ಶಾಸಕರು ಮನೆಯಿಂದ ಸೌಲಭ್ಯ ನೀಡುತ್ತಿಲ್ಲ
- ಅವರಿಂದ ಪಾಠ ಕೇಳುವ ಅಗತ್ಯ ನನಗಿಲ್ಲ
- ಜಿಲ್ಲಾ ಉಸ್ತುವಾರಿ ಸಚಿವ ಕೆ. ಸಿ. ನಾರಾಯಣಗೌಡ ತಿರುಗೇಟು
ಶ್ರೀರಂಗಪಟ್ಟಣದ ಬಾಲಕರ ವಿದ್ಯಾರ್ಥಿನಿಲಯ ಹಾಗೂ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ತೆರೆದಿರುವ ಕೊರೊನಾ ಚಿಕಿತ್ಸಾ ಕೇಂದ್ರಗಳಿಗೆ ಭಾನುವಾರ ಭೇಟಿ ನೀಡಿದ ಸಚಿವರು, ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಅವರಿಗೆ ಮೂಲ ಸೌಕರ‍್ಯ, ಊಟ, ಔಷಧೋಪಚಾರಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.
ಎಲ್ಲಾ ಸವಲತ್ತುಗಳನ್ನು ಸರಕಾರ ಒದಗಿಸುತ್ತಿದೆ. ಶಾಸಕರೇನು ಅವರ ಮನೆಯಿಂದ ಮೂಲ ಸೌಕರ‍್ಯ ಕೊಡುತ್ತಿದ್ದಾರಾ? ಎಲ್ಲವನ್ನೂ ಕೊಡಲು ಸಾಧ್ಯವಿದೆಯಾ? ಬರಿ ಬಾಯಿ ಮಾತಲ್ಲಿ ಹೇಳುವುದಕ್ಕೂ, ಸೇವೆ ಮಾಡುವುದಕ್ಕೂ ವ್ಯತ್ಯಾಸವಿದೆ. ಮನಸ್ಸು ಇದ್ದರೆ ಅವರು ಸೇವೆ ಮಾಡಲಿ, ನಾನು ಆಟ ಆಡಲು ಇಲ್ಲಿಗೆ ಬಂದಿಲ್ಲ. ಇಲ್ಲಿ ಯಾರದ್ದೋ ಮದುವೆ ಮಾಡುತ್ತಿಲ್ಲ. ಇದು ಅವರ ಕ್ಷೇತ್ರ. ಕಾಳಜಿ ಇದ್ದರೆ ಸೇವೆ ಮಾಡಲಿ. ಕೊರೊನಾ ಹತೋಟಿಗೆ ಸಹಕರಿಸಲಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಸಚಿವ ನಾರಾಯಣ ಗೌಡ ತಿರುಗೇಟು ನೀಡಿದರು.
ಸರಕಾರ ಕೊರೊನಾ ಹತೋಟಿಗೆ ಮಾಡುತ್ತಿರುವ ಎಲ್ಲದಕ್ಕೂ ಹಣದ ಲೆಕ್ಕ ಇಟ್ಟಿದೆ. ಲೆಕ್ಕ ಕೇಳುವುದಕ್ಕೆ ಎಲ್ಲರಿಗೂ ಅಧಿಕಾರ ಇದೆ. ಅಧಿಕಾರಿಗಳು ಲೋಪವೆಸಗಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಓಂ ಶಕ್ತಿ ದೇವಾಲಯಕ್ಕೆ ಹೋಗಿ ಬಂದವರಿಂದಲೇ ಕೊರೊನಾ ಹೆಚ್ಚಳವಾಗುತ್ತಿದೆ. ಹತೋಟಿಗೆ ತರಲು ಹೊರ ರಾಜ್ಯಗಳಿಗೆ ತೆರಳುವ ವಾಹನಗಳಿಗೆ ಪರ್ಮಿಟ್ ಕೊಡುವುದನ್ನು ನಿಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ತಹಸೀಲ್ದಾರ್ ಶ್ವೇತ ಎನ್. ರವೀಂದ್ರ ಅವರಿಗೂ ಈ ವೇಳೆ ಸಚಿವರು ತರಾಟೆಗೆ ತೆಗೆದುಕೊಂಡರು. ನೀವು ಇರುವುದು ಏಕೆ? ಏನು ಕೆಲಸ ಮಾಡುತ್ತಿದ್ದೀರಿ? ನಿಮ್ಮಿಂದ ನಮಗೆ ಕೆಟ್ಟ ಹೆಸರು ಬರುತ್ತದೆ. ಯಾವುದೇ ದೂರು ಬಾರದಂತೆ ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು. ಇದೇ ವೇಳೆ ಜಿಲ್ಲಾಧಿಕಾರಿ ಅಶ್ವಥಿಗೂ ಮೊಬೈಲ್ ಮೂಲಕ ಸಚಿವರು ತರಾಟೆಗೆ ತೆಗೆದುಕೊಂಡರು. ಇದುವರೆಗೆ ಕೊರೊನಾ ಸೆಂಟರ್‌ಗೆ ಏಕೆ ಭೇಟಿ ನೀಡಿಲ್ಲ? ಎಲ್ಲದಕ್ಕೂ ನಾವೇ ಬರುವುದಾದರೆ ನೀವು ಇರುವುದು ಏಕೆ? ಕೊರೊನಾ ಸೆಂಟರ್‌ಗಳಿಗೆ ಭೇಟಿ ನೀಡಬೇಕು, ಯಾವುದೇ ಸೌಕರ‍್ಯ ಬೇಕಿದ್ದರೂ ಕೇಳಬೇಕು ಎಂದು ಸೂಚಿಸಿದರು.
ಒಟ್ಟು 3,426 ಕೊರೊನಾ ಟೆಸ್ಟ್ ಮಾಡಿದ್ದೇವೆ. ಓಂ ಶಕ್ತಿಗೆ ಹೋಗಿದ್ದವರ 761 ಮಂದಿಗೆ ಟೆಸ್ಟ್ ಮಾಡಿದ್ದೇವೆ, ಓಂ ಶಕ್ತಿಗೆ ಹೋಗಿದ್ದ 143 ಮಂದಿಗೆ ಅವರ ಜತೆ ಸಂಪರ್ಕ ಹೊಂದಿದ್ದ 23 ಮಂದಿಗೆ ಕೊರೊನಾ ಬಂದಿದೆ. 186 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎನ್. ಕೆ. ವೆಂಕಟೇಶ್ ಅವರು ಸಚಿವರಿಗೆ ಮಾಹಿತಿ ನೀಡಿದರು.
ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ. ಎಸ್. ನಂಜುಂಡೇ ಗೌಡ, ಜಿಲ್ಲಾಉಪಾಧ್ಯಕ್ಷ ಟಿ. ಶ್ರೀಧರ್, ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್, ಪ್ರಧಾನ ಕಾರ‍್ಯದರ್ಶಿ ಬಿ. ಸಿ. ಸಂತೋಷ್ ಕುಮಾರ್, ಮುಖಂಡರಾದ ಬಿ. ಸಿ. ಕೃಷ್ಣೇಗೌಡ, ದೇವರಾಜು, ಮಹದೇವು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
Read more
[wpas_products keywords=”deal of the day sale today offer all”]