ಹೈಲೈಟ್ಸ್:
- ವಾರದ ಹಿಂದೆ ಲೈಟ್ ಹೊಂದಿದ ಯಂತ್ರವೊಂದು ಹಾದು ಹೋಗಿದೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈ ಬಿಟ್ಟಿದ್ದಾರೆ
- ಕೈಗಾ ಅಣು ಸ್ಥಾವರದ ಮೇಲಿಂದ ಸಣ್ಣ ಲೈಟ್ ಹೊಂದಿದ ಯಂತ್ರವೊಂದು ಹಾದು ಹೋಗಿದೆ ಎಂದು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದರು
- ಕೈಗಾ ಸ್ಥಾವರದಲ್ಲಿ ಸಿಐಎಸ್‌ಎಫ್ ಭದ್ರತೆ ಇರುವುದರಿಂದ ಪೊಲೀಸರು ಈಗ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ
ಕಳೆದ ಭಾನುವಾರ ಅಣು ಸ್ಥಾವರದ ಮೇಲಿಂದ ಸಣ್ಣ ಲೈಟ್ ಹೊಂದಿದ ಯಂತ್ರವೊಂದು ಹಾದು ಹೋಗಿದೆ ಎಂದು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಸಿಐಎಸ್‌ಎಫ್ ಮತ್ತು ಜಿಲ್ಲಾ ಪೊಲೀಸ್ ತನಿಖೆ ನಡೆಸಿತ್ತು. ಕಾರವಾರ ಡಿವೈಎಸ್‌ಪಿ ವ್ಯಾಲಂಟೈನ್ ಡಿಸೋಜಾ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈಗ ಸ್ಥಾವರದ ಮೇಲೆ ಹಾದು ಹೋಗಿದ್ದು, ಡ್ರೋಣ್ ಅಲ್ಲ, ರಾತ್ರಿ ಹಾದು ಹೋಗಿರುವ ವಿಮಾನವನ್ನೇ ನೋಡಿ ಡ್ರೋಣ್ ಎಂದು ಭಾವಿಸಿರಬಹುದು ಎಂದು ಪೊಲೀಸರು ತನಿಖೆ ಕೈ ಬಿಟ್ಟಿದ್ದಾರೆ.
ಆದರೆ, ಹಾದು ಹೋಗಿದ್ದು ಏನು ಎನ್ನುವ ಬಗ್ಗೆ ಇಲಾಖೆಗೂ ಸ್ಪಷ್ಟತೆ ಇಲ್ಲ. ವಿಮಾನ ಹಾದು ಹೋಗಿದ್ದರೆ ಅದರ ಸದ್ದು ಕೇಳಿಸಬೇಕಿತ್ತು. ಅಲ್ಲದೇ ವಿಮಾನ ಸ್ಥಾವರದ ಸಮೀಪ ಹಾದು ಹೋಗಲು ಹೇಗೆ ಸಾಧ್ಯ. ಯಾವತ್ತೂ ಸಂಶಯ ಹುಟ್ಟಿಸದ ವಿಮಾನ ಹಾರಾಟ ಈಗ ಅನುಮಾನ ಹುಟ್ಟಿಸಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ. ಕೈಗಾ ಸ್ಥಾವರದಲ್ಲಿ ಸಿಐಎಸ್‌ಎಫ್ ಭದ್ರತೆ ಇರುವುದರಿಂದ ಪೊಲೀಸರು ಈಗ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.
ಬಗೆಹರಿಯದ ಗೊಂದಲ
ವಿಶಾಲವಾದ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಡ್ರೋಣ್ ಹಾದು ಹೋಗಲು ಸಾಧ್ಯವಿಲ್ಲ ಎನ್ನುವುದೂ ಪೊಲೀಸರ ವಾದ. ಆದರೆ, ಗುಣಮಟ್ಟದ ಡ್ರೋಣ್ ಗರಿಷ್ಠ 30 ನಿಮಿಷಗಳ ವರೆಗೆ ಹಾರಾಟ ನಡೆಸಬಲ್ಲದು. ಕೆಲವೊಂದು ಡ್ರೋಣ್‌ಗಳು 40 ನಿಮಿಷವರೆಗೆ ಹಾರ ಬಲ್ಲವು. ಸಾಮಾನ್ಯ ದರದ ಡ್ರೋಣ್‌ಗಳು 25 ನಿಮಿಷ ವರೆಗೆ ಹಾರಬಲ್ಲವು. ಜಿಪಿಎಸ್ ಆಧಾರದ ಮೇಲೆ ಕಂಟ್ರೋಲ್ ಆಗುವ ಡ್ರೋಣ್‌ಗಳು ಗರಿಷ್ಠ 400 ಮೀಟರ್ ಎತ್ತರದವರೆಗೆ ಹೋಗುತ್ತವೆ. ಸುಮಾರು 10 ಕಿ.ಮೀ. ದೂರನ್ನೂ ಕ್ರಮಿಸಬಲ್ಲದು ಎನ್ನುತ್ತಾರೆ ಡ್ರೋನ್ ಬಳಕೆದಾರರು. ಹಾಗಾಗಿ ಕೈಗಾ ಪ್ರಕರಣವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಈ ಕಾರಣಕ್ಕೆ ಸಿಐಎಸ್‌ಎಫ್ ತನಿಖೆಯನ್ನು ಇನ್ನೂ ಕೈ ಬಿಟ್ಟಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೈಗಾ ಸ್ಥಾವರದ ಮೇಲೆ ಹಾದು ಹೋದ ಲೈಟ್ ಇರುವ ಯಂತ್ರ ಯಾವುದು ಎಂದು ಗೊತ್ತಾಗಿಲ್ಲ. ವಿಮಾನವನ್ನೇ ಡ್ರೋಣ್ ಎಂದು ಭಾವಿಸಿಕೊಂಡಿರಬಹುದು ಎಂದು ತನಿಖೆ ಕೈ ಬಿಟ್ಟಿದ್ದೇವೆ. ಅಣು ಸ್ಥಾವರದ ಭದ್ರತೆ ನೋಡಿಕೊಳ್ಳುವ ಸಿಐಎಸ್‌ಎಫ್ ತನಿಖೆ ಮುಂದುವರಿಸಿದೆ.
ವ್ಯಾಲಂಟೈನ್ ಡಿಸೋಜಾ, ಡಿವೈಎಸ್‌ಪಿ, ಕಾರವಾರ