ರಾಮನಗರ: ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಭಾನುವಾರ ಬೆಳಿಗ್ಗೆ ಆರಂಭಗೊಂಡ ಮೇಕೆದಾಟು ಪಾದಯಾತ್ರೆಗೆ ಜನಸಾಗರವೇ ಹರಿದು ಬರುತ್ತಿದೆ. ಬೆಳಿಗ್ಗೆ 9.30ರ ವೇಳೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ಹಸಿರು ನಿಶಾನೆ ತೋರಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಜಿಲ್ಲಾಡಳಿತ ಹಾಗೂ ಪೊಲೀಸರು ತಡೆ ಒಡ್ಡಬಹುದು ಎನ್ನಲಾಗಿತ್ತು. ಆದರೆ ಸದ್ಯ ಅಂತಹ ಯಾವ ಘಟನೆಗಳೂ ನಡೆದಿಲ್ಲ. ಕಾಂಗ್ರೆಸ್ ನೇತೃತ್ವದ ಪಾದಯಾತ್ರೆ ಸುಗಮವಾಗಿ ನಡೆದಿದ್ದು, ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಸಂಗಮದತ್ತ ಬಂದಿದ್ದಾರೆ. ಕನಕಪುರ–ಮೇಕೆದಾಟು ರಸ್ತೆ ತುಂಬೆಲ್ಲ ವಾಹನಗಳೇ ತುಂಬಿಕೊಂಡಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ಪಾದಯಾತ್ರೆಗೆ ಬರುವವರಿಗೆ ಮಾಸ್ಕ್, ಸ್ಯಾನಿಟೈಸರ್, ಟೀ ಶರ್ಟ್‌ಗಳನ್ನು ವಿತರಿಸಲಾಗುತ್ತಿದೆ. ಊಟೋಪಚಾರದ ಜೊತೆಗೆ ಆಯೋಜಕರು ಕೋವಿಡ್ ನಿಯಮಗಳನ್ನು ಪಾಲನೆ ಮಾಡುವಂತೆ ಮನವಿ ಮಾಡುತ್ತಿದ್ದರೂ ಜನರು ಮಾತ್ರ ಸ್ಪಂದಿಸುತ್ತಿಲ್ಲ.
ಡಿಕೆಶಿ ಪೂಜೆ: ಪಾದಯಾತ್ರೆಗೆ ಮುನ್ನ ಕೆಪಿಸಿಸಿ ಡಿ.ಕೆ. ಶಿವಕುಮಾರ್ ಕಾವೇರಿ ನದಿಗೆ ಪೂಜೆ ಸಲ್ಲಿಸಿದರು. ತೆಪ್ಪದಲ್ಲಿ ತೆರಳಿ ಕಾವೇರಿ ಮಾತೆಗೆ ನಮಿಸಿದರು. ಬಳಿಕ ನದಿ ತಟದಲ್ಲಿ ನಡೆದ ಹೋಮಗಳಲ್ಲೂ ಪಾಲ್ಗೊಂಡರು. ನಂತರವಷ್ಟೇ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮೌನವಾದ ಪೊಲೀಸ್ ಇಲಾಖೆ: ಕೋವಿಡ್ ಕರ್ಫ್ಯೂ ಕಾರಣಕ್ಕೆ ಸಂಗಮ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದೆ. ಈ ನಡುವೆಯೂ ಸಾವಿರಾರು ಮಂದಿ ಸಂಗಮಕ್ಕೆ ಬರುತ್ತಿದ್ದು, ಪೊಲೀಸರು ಮಾತ್ರ ಯಾವುದೇ ಕ್ರಮ ವಹಿಸಿಲ್ಲ.
ಮೇಕೆದಾಟು ‘ನೀರಿಗಾಗಿ ನಡಿಗೆ’: ಸಂಗಮ ಚೆಕ್ಪೋಸ್ಟ್ನಲ್ಲಿ ಇಲ್ಲ ತಪಾಸಣೆ!#Congress #Kanakapura #Mekedatu #neerigaginadige #DKShivakumar #Siddaramaiah pic.twitter.com/8n6DNy8Q05
— Prajavani (@prajavani) January 9, 2022
ಕಲಾವಿದರ ಸಾಥ್: ವಿವಿಧ ಜಾನಪದ ಕಲಾತಂಡಗಳು ಪಾದಯಾತ್ರೆಗೆ ಸಾಥ್ ನೀಡಿದವು. ಡೊಳ್ಳು, ಕಂಸಾಳೆ, ವೀರಗಾಸೆ, ನಂದಿ ಧ್ವಜ ಕುಣಿತ, ಬೊಂಬೆ ಕುಣಿತ ಮೊದಲಾದ ಪ್ರಕಾರಗಳ ಕಲಾವಿದರು ಸಾಥ್ ನೀಡಿದರು. ಚಿತ್ರರಂಗದ ಕಲಾವಿದರಾದ ಜಯಮಾಲಾ, ಉಮಾಶ್ರೀ, ಸಾಧುಕೋಕಿಲಾ, ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಮೊದಲಾದ ಕಲಾವಿದರು ವೇದಿಕೆಗೆ ಕಳೆ ತಂದರು.
ಪರಿಸರ ಸೂಕ್ಷ್ಮ ವಲಯದಲ್ಲಿ ಧ್ವನಿವರ್ಧಕದ ಸದ್ದು
ಭಾನುವಾರ ಪಾದಯಾತ್ರೆ ಆರಂಭಗೊಂಡ ಸಂಗಮ ಪ್ರದೇಶವು ಕಾವೇರಿ ವನ್ಯಜೀವಿ ಧಾಮಕ್ಕೆ ಸೇರಿದ್ದು, ಪರಿಸರ ಸೂಕ್ಷ್ಮ ವಲಯದಲ್ಲಿ ಧ್ವನಿವರ್ಧಕ ಹಾಗೂ ವಾದ್ಯವೃಂದದ ಬಳಕೆಗೆ ಆಕ್ಷೇಪ ವ್ಯಕ್ತವಾಗಿದೆ. ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದಲೇ ದೊಡ್ಡ ಮಟ್ಟದಲ್ಲಿ ಧ್ವನಿವರ್ಧಕಗಳನ್ನು ಬಳಕೆ ಮಾಡಲಾಗಿತ್ತು.
ಕಾವೇರಿ ವನ್ಯಜೀವಿ ಧಾಮವು ಕೆಲವು ಅಪರೂಪದ ಪ್ರಾಣಿಗಳ ಆವಾಸಸ್ಥಾನವಾಗಿದೆ. 250ಕ್ಕೂ ಪ್ರಬೇಧದ ಪಕ್ಷಿ ಸಂಕುಲ, ಮೊಸಳೆ, ನೀರುನಾಯಿ, ಅಳಿವಿನ ಅಂಚಿನಲ್ಲಿರುವ ಮಹಷೀರ್ ಮೀನು, ಆನೆ, ಚಿರತೆ, ಜಿಂಕೆ, ಕಾಡುಕುರಿ ಮೊದಲಾದ ಬಗೆಯ ವನ್ಯಜೀವಿ ಸಂಕುಲ ಇಲ್ಲಿದೆ.
‘ಕಾರ್ಯಕ್ರಮದ ವೇದಿಕೆ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಸದ್ಯಕ್ಕೆ ಯಾವ ರೀತಿಯ ನಿಯಮ ಉಲ್ಲಂಘನೆ ಕಂಡುಬಂದಿಲ್ಲ. ಅರಣ್ಯ ಪ್ರದೇಶದಲ್ಲಿ ಕಾನೂನು ಉಲ್ಲಂಘಿಸಿ ನಿರ್ಬಂಧಿತ ಚಟುವಟಿಕೆಗಳು ನಡೆದಿದ್ದಲ್ಲಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಕಾವೇರಿ ವನ್ಯಜೀವಿ ಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದರು.
Read more from source
[wpas_products keywords=”deal of the day sale today kitchen”]