Karnataka news paper

ವರಿಷ್ಠಾಧಿಕಾರಿಗೆ ರೇಷ್ಮೆ ಸೀರೆ ಕಪ್ಪ, ಸ್ಥಳೀಯರಿಗೆ ಸಂಕಷ್ಟ; ಮೊಳಕಾಲ್ಮುರು ರೇಷ್ಮೆಗೆ ದುಸ್ವಪ್ನವಾದ ಸರಕಾರಿ ಅಧಿಕಾರಿಗಳು!


ಕೊಂಡ್ಲಹಳ್ಳಿ ಮಾದೇವ ಮೊಳಕಾಲ್ಮುರು
ದಾವಣಗೆರೆ: ವಿಶ್ವ ಪ್ರಸಿದ್ದ ಮೊಳಕಾಲ್ಮುರು ಸೀರೆಯನ್ನು ಉಳಿಸಿ ಬೆಳೆಸಬೇಕಾದ ಸರಕಾರಿ ವ್ಯವಸ್ಥೆಯೇ ಇಲ್ಲಿನ ಸೀರೆ ವ್ಯಾಪಾರಿಗಳಿಗೆ ದುಸ್ವಪ್ನವಾಗಿರುವುದು ಬೆಳಕಿಗೆ ಬಂದಿದೆ. ರೇಷ್ಮೆ ಸೀರೆ ಬಗ್ಗೆ ವ್ಯಾಮೋಹ ಹೊಂದಿರುವ ಜಿಲ್ಲಾ ಹಾಗೂ ವಿಶೇಷವಾಗಿ ರಾಜ್ಯ ಮಟ್ಟದ ಸರಕಾರಿ ಅಧಿಕಾರಿಗಳು ತಮ್ಮ ಸ್ಥಳೀಯ ಅಧಿಕಾರಿಗಳ ಮೂಲಕ ಲಾಟ್‌ ಗಟ್ಟಲೆ ಸೀರೆ ತರಿಸಿ ಹಣ ಕೊಡುವ ಜವಾಬ್ದಾರಿಯನ್ನು ಸ್ಥಳೀಯ ಸಿಬ್ಬಂದಿಗಳಿಗೆ ಜಾರಿಸುತ್ತಿದ್ದು, ಇದು ಅಂತಿಮವಾಗಿ ವ್ಯಾಪಾರಿಗಳಿಗೆ ಉಸಿರುಕಟ್ಟಿಸುತ್ತಿದೆ.

”ಮೇಲಧಿಕಾರಿಗಳಿಗೆ ಸೀರೆ ಕೊಡುಗೆಯಾಗಿ ನೀಡಿ ಶಹಬ್ಬಾಶ್‌ ಗಿಟ್ಟಿಸಿಕೊಳ್ಳುವ ಸ್ಥಳೀಯ ಅಧಿಕಾರಿಗಳು ವ್ಯಾಪಾರಸ್ಥರಿಗೆ ಖರೀದಿ ಬೆಲೆಯನ್ನೂ ನೀಡದೆ ವ್ಯಾಪಾರಸ್ಥರ ಮುಖ ಪರಿಚಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ” ಎಂದು ಇಲ್ಲಿನ ಹಿರಿಯ ವ್ಯಾಪಾರಿಯೊಬ್ಬರು ವಿಜಯ ಕರ್ನಾಟಕಕ್ಕೆ ದೂರಿದ್ದಾರೆ.

ತಾಲೂಕಿಗೆ ಬರುವ ಹಿರಿಯ ಅಧಿಕಾರಿಗಳು ಕೆಲವೊಮ್ಮೆ ಮೂರ್ನಾಲ್ಕು ಸೀರೆಗಳನ್ನು ಖರೀದಿಸಿ ಸ್ಥಳೀಯ ಅಧಿಕಾರಿಗಳಿಗೆ ಬಿಲ್‌ ಕೊಡಲು ಹೇಳುವುದು ಸಾಮಾನ್ಯವಾಗುತ್ತದೆ. ಬಿಲ್‌ ಕೊಡಲು ಸಾಧ್ಯವಾಗದೆ ಕಡಿಮೆ ಸಂಬಳದ ಅಧಿಕಾರಿಗಳು ವ್ಯಾಪಾರಸ್ಥರಿಗೆ ಹೆದರಿಸಿ, ಸತಾಯಿಸುವುದು ಇದೆ ‘ಕಳೆದ ನಾಲ್ಕಾರು ವರ್ಷಗಳಿಂದ ಈ ಪದ್ಧತಿಯು ಹೆಚ್ಚಾಗಿ ಕಂಡು ಬರುತ್ತಿದೆ’ ಎನ್ನುತ್ತಾರೆ ಇಲ್ಲಿನ ರೇಷ್ಮೆ ಸೀರೆ ವ್ಯಾಪಾರಿಗಳು. ಕಳೆದ ತಿಂಗಳು ವರಿಷ್ಠಾಧಿಕಾರಿಯೊಬ್ಬರು ಸೀರೆಯ ಉದ್ದೇಶಕ್ಕೆ ತಾಲೂಕಿಗೆ ಆಗಮಿಸುತ್ತಿದ್ದಾರೆ ಎನ್ನುವ ಮಾಹಿತಿ ಮೊದಲೇ ತಿಳಿದ ಪಟ್ಟಣ ಹಾಗೂ ಕೊಂಡ್ಲಹಳ್ಳಿಯ ಒಂದಿಬ್ಬರು ರೇಷ್ಮೆ ಸೀರೆ ವ್ಯಾಪಾರಸ್ಥರು ಅಂಗಡಿಗೆ ಬೀಗ ಜಡಿದು ಮೊಬೈಲ್‌ ಆಫ್‌ ಮಾಡಿಕೊಂಡಿದ್ದರು. ”ಹಿರಿಯ ಅಧಿಕಾರಿಯೊಬ್ಬರು ತಂಗಿಯ ಸೀಮಂತ ಕಾರ್ಯಕ್ಕೆ 40 ಸೀರೆಯನ್ನು ಕೊಂಡು ಹೋಗಿದ್ದಾರೆ. ಸ್ಥಳೀಯ ಅಧಿಕಾರಿಗಳು ಇದರ ಉಸ್ತುವಾರಿ ವಹಿಸಿಕೊಂಡು ತಮ್ಮ ಕೈ ಕೆಳಗಿನ ಸಿಬ್ಬಂದಿಗಳನ್ನು ಸೀರೆ ತರುವುದಕ್ಕೆ ಓಡಿಸಿದ್ದರು.” ಎಂದು ವ್ಯಾಪಾರಿಯೊಬ್ಬರು ಹೇಳಿದರು.
ಗುಣಮಟ್ಟದ ರೇಷ್ಮೆಗೆ ರಾಮನಗರ ಪ್ರಖ್ಯಾತಿ! ಜಿಲ್ಲೆಯ 27 ಸಾವಿರ ಕುಟುಂಬಗಳಿಗೆ ಆಧಾರ!
ಸ್ಥಳೀಯವಾಗಿ ಕೈಮಗ್ಗ ರೇಷ್ಮೆ ಸೀರೆಗಳು ತನ್ನ ಗುಣಮಟ್ಟ ಹಾಗೂ ಬ್ರ್ಯಾಂಡ್‌ನ್ನು ಇಂದಿಗೂ ಕಾಪಾಡಿಕೊಂಡಿವೆ. ಇಲ್ಲಿನ ಅನನ್ಯ ‘ಕುಟ್ಟು ‘ಸೀರೆ ರೇಷ್ಮೆ ಸೀರೆಗೆ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಹೆಸರು ಇದೆ. ಈ ರೇಷ್ಮೆ ಸೀರೆ ವ್ಯಾಪಾರವನ್ನೇ ಬದುಕಾಗಿಸಿಕೊಂಡ ಅನೇಕ ಮಾರಾಟಗಾರರು ಇಲ್ಲಿದ್ದಾರೆ. ಇನ್ನೂ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲಧಿಕಾರಿಗಳ ಹೆಸರಿನಲ್ಲಿ ಸೀರೆ ಅಂಗಡಿ ಹೊಕ್ಕು ಮೂರ್ನಾಲ್ಕು ಸೀರೆ ಆಯ್ಕೆ ಮಾಡಿ, ಎರಡನ್ನು ತಮ್ಮ ಮನೆಗೆ ಇಟ್ಟುಕೊಂಡು ಖರೀದಿಸಿದ ಲಾಟಿನ ಒಟ್ಟು ಮೊತ್ತಕ್ಕೆ ಚರ್ಚೆಗಿಳಿದು ಚೌಕಾಸಿ ಮಾಡಿ, ತಾವೇ ಒಂದು ಅಮೌಂಟ್‌ ನ್ನು ಅಧಿಕಾರಯುತವಾಗಿ ಫಿಕ್ಸ್‌ ಮಾಡುತ್ತಾರೆ. ಕೆಲವರು ಅಲ್ಲಿಯೇ ಒಂದು ಮೊತ್ತವನ್ನು ಕೈಗಿಟ್ಟು ಹೋದರೆ, ಇನ್ನೂ ಕೆಲವರು ವಾರದೊಳಗೆ ಹಣ ನೀಡುವ ಭರವಸೆ ನೀಡಿ ಸೀರೆ ಆರು ತಿಂಗಳು ಕಳೆದರೂ ನಯಾಪೈಸೆ ನೀಡಿಲ್ಲ ಎಂದು ವ್ಯಾಪಾರಿಯೊಬ್ಬರು ಗೋಳಿಟ್ಟಿದ್ದಾರೆ.

ಹಿರಿಯ ಅಧಿಕಾರಿಗಳು ಕೊಂಡು ಹೋದ ಸೀರೆಯ ಮೊತ್ತವನ್ನು ಅಂಗಡಿಯವರು ಸಾಮಾನ್ಯವಾಗಿ ಬಿಡುವುದಿಲ್ಲ, ಸ್ಥಳೀಯ ಅಧಿಕಾರಿಗಳಿಗೆ ಕುತ್ತಿಗೆಗೆ ಬರುವ ನಿದರ್ಶನ ಇದ್ದು, ಇದೇ ಕಾರಣಕ್ಕೆ ತಾಲೂಕಿಗೆ ಬರಲು ಅಧಿಕಾರಿಗಳು ಹೆದರುತ್ತಾರೆ ಎಂದು ಸರಕಾರಿ ನೌಕರರರೊಬ್ಬರು ಹೇಳಿದರು. ಕೆಲವು ತಾಲೂಕು ಮಟ್ಟದ ಇಲಾಖೆ ಅಧಿಕಾರಿಗಳು ಸೀರೆ ಕೊಡಿಸಿ ಹಿರಿಯ ಅಧಿಕಾರಿಗಳಿಂದ ಶಹಬಾಸ್‌ಗಿರಿ ಗಿಟ್ಟಿಸಿಕೊಳ್ಳುವರು.”ವಿಪರ್ಯಾಸವೆಂದರೆ ಹೀಗೆ ಮಾಡಿದವರು ಬೇರೆಡೆಗೆ ವರ್ಗವಾಗಿದ್ದಾರೆ. ನಾವು ಈಗ ಅವರನ್ನು ಹುಡುಕಿ ಹಣ ಹೇಗೆ ಕೇಳಬೇಕೋ ಅರ್ಥವಾಗುತ್ತಿಲ್ಲ. ಇದೇ ಮಾದರಿಯಲ್ಲಿ ನಮಗೆ ವರ್ಷಕ್ಕೆ ಇಂತಿಷ್ಟು ನಷ್ಟ ಗ್ಯಾರೆಂಟಿ” ಎನ್ನುತ್ತಾರೆ ವ್ಯಾಪಾರಿಯೊಬ್ಬರು.
ಜವಳಿ ಪಾರ್ಕ್ ನಿರ್ಮಾಣ ಯೋಜನೆಗೆ ಗ್ರಹಣ; ಕೊಂಡ್ಲಹಳ್ಳಿ ಜನಕ್ಕೆ ಇನ್ನೂ ಸಿಗದ ಉದ್ಯೋಗ ಭಾಗ್ಯ!
”ನಾವು ಬ್ಯಾಂಕ್‌ನಿಂದ ಸಾಲ ಪಡೆದು ರೇಷ್ಮೆ ಸೀರೆ ಅಂಗಡಿ ತೆರೆದಿದ್ದೇವೆ. ಕೊವಿಡ್‌ ಸಂಕಷ್ಟದಿಂದ ಅತಿಯಾದ ನಷ್ಟಕ್ಕೆ ಸಿಲುಕುವಂತಾಗಿದೆ. ಈ ವಿಷಯದ ಅರಿವಿದ್ದರೂ ಕೆಲವು ಅಧಿಕಾರಿಗಳು ತಮ್ಮ ಅಧಿಕಾರವನ್ನು ನಮ್ಮ ಮೇಲೆ ಉಪಯೋಗಿಸಿ ಉಪಟಳ ನೀಡುವುದನ್ನು ಕೈಬಿಡಬೇಕು. ಅನ್ಯ ಗ್ರಾಹಕರು ಖರೀಧಿಸುವ ಬೆಲೆಗಿಂತ ಕಡಿಮೆ ಬೆಲೆಯನ್ನಾದರೂ ನಮಗೆ ನೀಡಿ, ಹಣ ಕೊಟ್ಟು ಖರೀದಿಸಿದರೆ ಮಾತ್ರ ನಮಗೆ ಉಳಿಗಾಲ ಎನ್ನುವುದು ಮೊಳಕಾಲ್ಮುರು ಬ್ರಾಂಡ್‌ ರೇಷ್ಮೆ ಸೀರೆ ಮಾರಾಟಗಾರರ ಅನಿಸಿಕೆ.



Read more

[wpas_products keywords=”deal of the day sale today offer all”]